‘ಹಿರೇ ಮಗ ಆಗ್ಬಾರ್ದು ಹಾದ್ಯಾಗಿನ ಹೊಲ ಆಗ್ಬಾರ್ದು’

ನವೆಂಬರ್ 1, 2023

ನಮ್ಮಪ್ಪಂಗಿದ್ದಿದ್ದು ಹದಿನೆಂಟು ಕುಂಟೆ ಜಾಮೀನು.  ತಿನ್ನೋ ಬಾಯ್ಗುಳು ಮನೆವ್ರು ಎಂಟು ಜನ ಆದ್ರೆ ಬರೋರು ಹೋಗೋರು ಅಷ್ಟೇ ಜನ. ದುಡಿದಿದ್ದೆಲ್ಲ ಹೊಟ್ಟೆ ಬಟ್ಟೆಗೆ ನೇರ ಮಾಡೋಷ್ಟರಲ್ಲೇ ಆತಿತ್ತು. ನಂಗಿಂತ ನನ್ನ ತಮ್ಮ ಓದೋದ್ರಲ್ಲಿ ಬುದ್ವಂತ. ಆದ್ರೆ ನಮ್ಮವ್ವ ನಾನು ಹಿರೇ ಮಗ ಅಂತಾನೋ ಏನೋ ನಂಗೆ ಓದು ಅಂತು, ನನ್ನ ತಮ್ಮಂಗೆ ಆರಂಬ  ಮಾಡು ಅಂತು. ಇನ್ನೊಬ್ಬ ತಮ್ಮ ಮೈಗಳ್ಳ ಈ ಕಡೆ ಓದ್ತಾನೂ ಇರ್ಲಿಲ್ಲ, ಹೊಲ್ದಗೆ ಕೆಲ್ಸಾನೂ ಮಾಡ್ತಿರ್ಲಿಲ್ಲ.  ‘ಕಿವಿ ಕಿತ್ತರೂ ಕಿರೆ ಮಗ ಪ್ರೀತಿ’ ಅಂತ ನಮ್ಮವ್ವ ರವಷ್ಟು ಜಾಸ್ತಿನೇ ಪ್ರೀತಿ ತೋರಿಸ್ತಿತ್ತು ಅವುನ್ಮೇಲೆ.

ನಮ್ಮನೆಗೆ ಎತ್ಗುಳು ಇರ್ಲಿಲ್ಲ. ಇರೋರತ್ರ ತಾಂಬಂದು ಉಳ್ಮೆ ಮಾಡ್ಬೇಕಾಗಿತ್ತು.  ಹಿಂಗೇ ಒಂದ್ಸಲಿ ಒಬ್ರತ್ರ ಎತ್ತು ಕೇಳಕ್ಕೆ ಅಂತ ಹೋಗಿದ್ದೆ. ಎತ್ತೇನೋ ಕೊಟ್ರು. ಅದ್ರ ಜೊತೆಗೆ ಒಂದ್ಮಾತಂದ್ರು ‘ಒಬ್ಬರಲ್ಲ ಇಬ್ಬರಲ್ಲ ಮೂರ್ಜನ ಗಂಡ್ಮಕ್ಳಿದ್ದೀರ ಆದ್ರೂ ನಿಮ್ಮಣೆ ಒಳ್ಗೆ ಬರ್ದಿಲ್ಲ ಒಂಜೊತೆ ಎತ್ತ್ ತಗಳ್ಳಕ್ಕೆ ಮೂವಾರು ತಂಗೀರ್ನ ದಡಾ ಸೇರ್ಸಕ್ಕೆ ‘ ಅಂತ . ಆ ಮಾತ್ಗೆ ಸಿಟ್ಟು ನೆತ್ತಿಗೇರಿತ್ತು. ಬಡವನ ಕೋಪ ದವಡೆಗೆ ಮೂಲ ಅಂತ ಸುಮ್ನಿದ್ದೆ. ಆಗ್ಲಿಂದಾನೂ ಆ ಮಾತು ಕೊರೀತಿತ್ತು. ಅಪ್ಪ ಅಂತೂ ಅದ್ಯಾರೋ ಇನ್ಸ್ಪೆಕ್ಟ್ರು  ‘ನಾನು ಬಂದು ನಿಂತಿರದು ಕಂಡರೂ ಕಾಣದಂಗೆ ಪಾಠ ಮಾಡ್ತಿದ್ರಿ’ ಅಂತ ಅಂದ್ರು ಅಂತ ಅದ್ನೇ ನೆಪ ಮಾಡ್ಕಂಡು ಕೈಯಾಗಿದ್ದ ಮೇಷ್ಟ್ರು ಕೆಲಸ ಬಿಟ್ಟು ಮನೆಗೆ ಕುಂತ್ಕಂಡಿದ್ದ. ಹೊಲ್ದಗೆ ಬರಾ ರಾಗಿ ಒಂದೊತ್ಗೆ ಆದ್ರೆ ಇನ್ನೊಂದೊತ್ಗೆ ಆತಿರ್ಲಿಲ್ಲ. ಅಪ್ಪ ಕಷ್ಟ ಜೀವಿ. ಎರಡನೇ ಮಹಾಯುದ್ಧದ ಸೈನಿಕ್ರು ಆ ಕಾಲಕ್ಕೆ ನಮ್ಮ ಯಲಂಕದಾಗೆ ಬಿಡಾರ    ಊಡಿದ್ರಂತೆ.  ಅವುರ್ಗೆ  ಹಾಲ್ ಸಪ್ಲೈ ಮಾಡಕ್ಕೆ ಅಂತಾನೆ ಒಂದು ಹಾಲಿನ್ ಡೇರಿ ಶುರು ಮಾಡಿದ್ರು ಪುಟ್ಟಭೈರಯ್ಯನೋರು. ಅಪ್ಪ ಅಲ್ಲಿ ಲೆಕ್ಕ ಬರ್ಯಕ್ಕೆ ಓತಿತ್ತು.  ಭಾರೀ ನಿಯತ್ತು ದುಡ್ಡಿನ ವಿಷಯದಾಗೆ ನಮ್ಮಪ್ಪ. ಅದ್ಕೆ ಅವ್ರ ಮನೆವರಿಗೆಲ್ಲ ಅಭಿಮಾನ ನಮ್ಮಪ್ಪುನ್ಮೇಗೆ.   ನಾನು ಎಸಲ್ಸಿ ಮುಗ್ಸಿ ಇಂಟ್ರುಮೀಡಿಯಟ್   ಫೇಲಾಗಿ ಒಲ್ದಾಗೆ  ಕೆಲಸ ಮಾಡ್ಕಂಡು, ಊರಗೆ ಬಾವಿ ತೋಡ ಕೆಲಸದಾಗೆ ಕೂಲಿ ಮಾಡ್ಕಂಡು  ಮನೇಗಿದ್ದೆ. ನಮ್ಮಪ್ಪ ಸುಮ್ಕಿರ್ದೇ  ಪುಟ್ಟಭೈರಯ್ಯನೋರ ತಮ್ಮ ರಾಜಪ್ಪನೋರು(ಆ ಕಾಲುಕ್ಕೇ ಮೈಸೂರು ಸರ್ಕಾರದಾಗೆ ಎಮ್ಮೆಲ್ಲೆ ಆಗಿದ್ರು)   ಬಂದಾಗ ನಮ್ಮುಡ್ಗ  ಇಂಟ್ರುಮೀಡಿಯಟ್ ಫೇಲ್ ಆಗಿ ಆರಂಭ ಮಾಡ್ಕಂಡವ್ನೆ ಟಿ.ಸಿ.ಎಚ್ ಗೆ ಒಂದು ಸೀಟು ಕೊಡ್ಸಿ ಬುದ್ಧಿ ಅಂತು. ದೊಡ್ ಮನ್ಶ ರಾಜಪ್ಪನೋರು ನಡಿ ನಂಜೊತೆಗೆ ಅಂತ  ತಕ್ಷಣನೇ ಕಾರ್ ಅತ್ತಸ್ಗಂಡು ಸಿದ್ಗಂಗಿ ಸ್ವಾಮ್ಗುಳತ್ರ ಕರ್ಕಂಡೋದ್ರು. ನಮ್ಮುಡ್ಗ  ಇವ್ನು ಒಂದ್ ಸೀಟ್ ಕೊಡಿ ಬುದ್ದಿ ಅಂತೇಳಿ ತಕ್ಪಣುಕ್ಕೆ ಸೀಟ್ ಕೊಡುಸ್ಬುಟ್ರು.   ಟಿ.ಸಿ.ಎಚ್ ಮುಗುಸ್ಡೇಟ್ಗೆ ಗೌರ್ಮೆಂಟ್ ಅಪ್ಪೋಯಿಂಟ್ಮೆಂಟೂ ಸಿಕ್ಬುಡ್ತು.  ಆಗ ನೋಡಪ್ಪ ದೇವ್ರು ಕಣ್ಬುಟ್ಟಾ ! ನಮ್ಮನೆ ಬಡತನ ನೀಗ ಕಾಲ ಬಂತು. ಆಗ್ಲಿಂದಾನೊ ಹುಚ್ಚಿಗೆದ್ದಂಗೆ ದುಡಿದೇ.  ಜೋಡೆತ್ತು ತಗಂಡು, ಖರೀದಿಗೆ ಸಿಕ್ಕ ಒಲ ತಗಂಡು,  ಅಪ್ಪ ಮಾಡಿದ್ದ ಸಾಲ ತೀರ್ಸಿ, ತಂಗೀರ್ಗೆ ಮದ್ವೆ ಮಾಡಿ ದಡಾ  ಸೇರ್ಸಿ  ನಾನ್ ಮದ್ವೆ ಆಗೋತ್ಗೆ ಮುವ್ವತ್ತೊರ್ಷ.  ಇದ್ರ ಮದ್ಯದಾಗೆ ನಾನು ಬೆಂಗ್ಳೂರಗೆ ಸುಮ್ನಿರದೆ ಈವನಿಂಗ್ ಕಾಲೇಜಗೆ ಬಿ.ಎಡ್, ಎಂ.ಎಡ್, ಎಂ.ಎ ಎಲ್ಲಾ ಮಾಡ್ಕಂಡು ಪ್ರೊಮೋಶನ್ನೂ ತಂಗಂಡಿದ್ದೆ .  ಹದಿನೆಂಟು ಗುಂಟೆ ಜಮೀನು ೧೫ ಎಕರೆಗೆ ತಂದು ನಿಲ್ಸಿದ್ದೆ, ಕೆಲ್ಸಕ್ಕೆ ಸೇರಿದ್ ೨೦ ವರ್ಷದಾಗೆ. ಊರಾಗಿದ್ದ ತಮ್ಮನೂ ಸಮನಾಗೆ ದುಡ್ಡ ನಾನು ಉತ್ತೇಜನ ಕೊಟ್ಟಿದ್ಕೆ.  ತಮ್ಮಂದಿರ ಮದುವೇ, ತಂಗಿ ಮಕ್ಳ ಮದುವೇ, ಬಾವಿ ತೋಡಕ್ಕೆ, ಮನೆ ಕಟ್ಟಕ್ಕೆ  ಹಿಂಗೇ ಜೀವ್ನದುದ್ದುಕ್ಕೂ ಸಾಲದಾಗೆ ಮುಳುಗಿ ಸಾಲದಾಗೆ ಈಜಿದ್ದೆ. ನನ್ನ ಹೆಂಡ್ತಿ ಮಕ್ಳುಗಿಂತ ತಂಗಿ, ತಮ್ಮ, ಅವರಮಕ್ಳು,   ಅವ್ವ ಅಂತ ಅವುರ್ನ ಮುಖ್ಯ ಮಾಡ್ಕಂಡು ಜೀವ್ನ ಕಳುದ್ಬುಟ್ಟೆ.  ಇಷ್ಟೆಲ್ಲಾ ಆದ್ರೂ ನಮ್ಮವ್ವ ಒಂದಿನಾನೂ ಮಗಾ ನಿನ್ನಿಂದ ನಮ್ಮನೆ ಉದ್ದಾರ ಆಯ್ತು ಅಂತ ಒಂದಿನುಕ್ಕೂ ಅನ್ಲಿಲ್ಲ. ಇದ್ಯಾಕೆ ಅಂತ ನಂಗೆ ಯಾವತ್ತೂ ಉತ್ರ ಸಿಗದೇ ಇರೋ ಪ್ರಶ್ನೆ. ಊರಾಗಿರ ತಮ್ಮ, ಅವನೆಂಡ್ತಿ ಕಾಲ್ಗುಣ ಅಂದ್ಬುಟ್ಲು  ನಮ್ಮವ್ವ.  ಯಾರತ್ರ ಹೇಳ್ಕಳ್ಳಿ  ಇದ್ನ.  ‘ಹಿಡಿ ಹಿಡಿದರೆ ಹೆಬ್ಬೆಟ್ಟು ಹೊರಗೆ’ ಅಂತಾರೆ. ಹಂಗೆ ಮನೆಗೆ ಹಿರಿಮಗ ಆಗಿ ಹುಟ್ಟಿದ್ದ ನನ್ನ ಪರಿಸ್ಥಿತಿ. ಇವತ್ತು ಪಾರ್ಕ್ನಾಗೆ ಒಂದೇ ಸಾಲಾಗೆ ಕುಂತಿದ್ದ ಮೂರು ಗೂಬೆ ಜೊತೆಗೆ ಇನ್ನೊಂದ್ ಕೊಂಬೆ ಮ್ಯಾಗಿದ್ದ ಇನ್ನೊಂದ್ ಗೂಬೆ ನೋಡಿ ಅದು ನಾನೇ ಏನೋ ಅನ್ಸ್ತು . ನಮ್ಮವ್ವ ನನ್ನ ತಮ್ಮಂದಿರು ಒಂದ್ಸಾಲು,  ಅಗೋ ಅಷ್ಟು ದೂರದಾಗೆ ನಾನು. ಅದು ನನ್ನ ಮಕ್ಕಳೂ ಆಗಿರ್ಬೋದು. ಮೂವರು ಮಕ್ಳು ಬೆಳೆಯೋ ಹೊತ್ನಾಗೆ , ಓದೋ ಟೈಂನಾಗೆ ಊರು ಊರು ಅಂತ ಇವುರ್ಕಡೆ  ಜಾಸ್ತಿ ಗಮನಾನೇ ಕೊಡ್ಲಿಲ್ಲ.  ಬೆಳೆದು ನಿಂತಮೇಲೆ ಮಕ್ಳು ಮಾಡ್ಬೇಕಿರೋ ಕರ್ತವ್ಯ ಚಾಚೂ ತಪ್ಪದೆ ಮಾಡ್ತಾವ್ರೆ ಹೊರ್ತೂ ನಂಜೊತೆ ಕುಂತು ನಾಕು ಮಾತಾಡಲ್ಲ. ಊರ್ಗೋದ್ರೂ ನಾನು ಒಂಟಿ, ಇಲ್ಲೂ ನಾನು ಒಂಟಿ!   ‘ಹಿಡಿ ಹಿಡಿದರೆ ಹೆಬ್ಬೆಟ್ಟು ಹೊರಗೆ’ ಅಂತಾರೆ. ಹಂಗಾಯ್ತು ಮನೆಗೆ ಹಿರಿಮಗ ಆಗಿ ಹುಟ್ಟಿದ್ದ ನನ್ನ ಪರಿಸ್ಥಿತಿ,  ಆ ಒಂಟಿ ಗೂಬೆ ತರಾನೇ ….

ಖಾದ್ರಿ ಅಚ್ಯುತನ್ ಒಂದು ನೆನಪು . . .

ನವೆಂಬರ್ 29, 2017

 

KAchyuthan

ಚಿತ್ರ ಕೃಪೆ: ಅವಧಿ

ಪಿ.ಯು.ಸಿ ಸಹಪಾಠಿ ಸ್ನೇಹಿತೆ ಸ್ಮಿತಾಳ ಹೆಸರಿನಲ್ಲಿ ’ಖಾದ್ರಿ’ ಸರ್ ನೇಮ್ ಕೇಳಿದಾಗ  ಕನ್ನಡಪ್ರಭದ ಖಾದ್ರಿ ಶಾಮಣ್ಣನವರೂ ಇವಳೂ ಒಂದೇ ಕುಟುಂಬದವರೇನೋ ಎಂದೆನಿಸಿತ್ತು. ಹೀಗೇ ಮಾತನಾಡುವಾಗ ಖಾದ್ರಿ ಶಾಮಣ್ಣ ನಮ್ಮ ದೊಡ್ಡಪ್ಪ ಆಗಬೇಕು. ನನ್ನ ತಂದೆ ಖಾದ್ರಿ ಅಚ್ಯುತನ್ ದೂರದರ್ಶನದ ಸುದ್ದಿ ವಿಭಾಗದ ನಿರ್ದೇಶಕರು ಎಂದಿದ್ದಳು. ಆಗೆಲ್ಲ ವಾರ್ತೆ ಮುಗಿದಾದ ಮೇಲೆ ನನ್ನ ಸ್ನೇಹಿತೆಯ ತಂದೆಯ ಹೆಸರು ಬರ್ತಾ ಇದೆ ನೋಡಿ ಎಂದು ಮನೆಯವರಿಗೆ ತೋರಿಸಿ ಹೆಮ್ಮೆ ಪಡ್ತಾ ಇದ್ದೆ! ಸ್ಮಿತಾಳ ಜೊತೆ ಮಾತನಾಡುವದರಲ್ಲಿಯೇ ಅವರ ತಂದೆಯ ವ್ಯಕ್ತಿತ್ವದ ಕಿರು ಪರಿಚಯ ನನಗಾಗಿತ್ತು. ಎಂದಿಗೂ ತಮ್ಮ ಅಭಿಪ್ರಾಯಗಳನ್ನು ತಮ್ಮ ಮಕ್ಕಳ ಮೇಲೆ ಹೇರದವರು. ತಮ್ಮ ಉನ್ನತ ಸ್ಥಾನದ ಅಧಿಕಾರವನ್ನು, ಪ್ರಭಾವವನ್ನು ಎಂದಿಗೂ ದುರುಪಯೋಗ ಪಡಿಸಿಕೊಳ್ಳದವರು. ಸೇವೆಯಲ್ಲಿದ್ದಷ್ಟೂ ದಿನ ಶಿಥಿಲಾವಸ್ಥೆಯಲ್ಲಿದ್ದರೂ ಸರ್ಕಾರಿ ವಸತಿ ಗೃಹದಲ್ಲಿಯೇ ಕಾಲ ಕಳೆದವರು.

ಸದಾ ಖಾದಿದಾರಿ, ಅಚ್ಯುತನ್ ಅವರೊಡನೆ ಮಾತನಾಡುವ ಅವಕಾಶ ಸಿಕ್ಕಿದ್ದು ವೃತ್ತಿ ನಿಮಿತ್ತ ವಿದೇಶ ಪ್ರಯಾಣದ ಸಲುವಾಗಿ ತತ್ಕಾಲ್ ಸೇವೆಯಲ್ಲಿ ಪಾಸ್ ಪೋರ್ಟ್ ಅವಶ್ಯಕತೆ ಬಿದ್ದಾಗ. ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಸಹಿಯಿದ್ದಲ್ಲಿ ತತ್ಕಾಲ್ ಸೇವೆಯಲ್ಲಿ ಪಾಸ್ ಪೋರ್ಟ್ ಪಡೆಯಬಹುದಿತ್ತು. ಸ್ಮಿತಾ, ಅವಳ ತಂದೆಯೊಡನೆ ಮಾತನಾಡಿ, ನಾನು ನನ್ನ ಅಕ್ಕನೊಡನೆ ಅರ್ಜಿಯನ್ನು ಕಳುಹಿಸುವ ವ್ಯವಸ್ಥೆ ಮಾಡಿದೆ. ಫೋನ್ ಮಾಡಿ ಮಾತನಾಡಿದಾಗ, ಅಲ್ರೀ ನಾನು ನಿಮ್ಮನ್ನು ನೋಡೇ ಇಲ್ಲ ಹೇಗೆ ಸೈನ್ ಮಾಡಲಿ ಅಂದ್ರು. ಕ್ಷಣ ಏನು ಮಾತನಾಡಲು ತೋಚದೆ ಸುಮ್ಮನಾದಾಗ, ಏನೂ ಯೋಚ್ನೆ ಮಾಡ್ಬೇಡಿ ನಿಮ್ಮ ಅಕ್ಕನ ಹತ್ತಿರವೇ ಕಳಿಸಿ ನಾನು ಸೈನ್ ಮಾಡಿಕೊಡ್ತೀನಿ ಅಂದರು. ಕೆನಡಾ ದಿಂದ ವಾಪಸ್ ಬಂದಾಗ ಒಂದು ಪೆನ್ ತಂದು ಕೊಟ್ಟಿದ್ದೆ. ಮುಂದಿನ ದಿನಗಳಲ್ಲಿ ನಮ್ಮ ಭೇಟಿಯಾದಾಗ, ಫೋನ್ ನಲ್ಲಿ ಮಾತಾನಾಡಿದಾಗಲೆಲ್ಲ ನೆನಪಿಸಿಕೊಂಡು, ನೀವು ಪೆನ್ ತಂದುಕೊಟ್ಟಿದ್ರಿ. ಆ ಈಶ್ವರ ದೈತೋಟ ನಂಗೆ ಬೇಕು ಅಂತ ಎತ್ಕೊಂಡು ಹೋಗ್ಬುಟ್ರು ರೀ ಅಂತಿದ್ರು!

ಭಾರತೀಯ ವಿದ್ಯಾ ಭವನದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುವಾಗ, ವಿಜಯನಗರದ ವರೆಗೂ ಆಟೋದಲ್ಲಿ ಹೋಗೋಣ ಬನ್ನಿ ಅಂತ ಕರೆದಾಗ ಜೊತೆಗೆ ಬಂದ್ರು. ಸರ್ ಇಲ್ಲೇ ನಿಲ್ಲಿಸಿ, ನಾವು ಇಳ್ಕೋತೀವಿ ಇವರು ಮುಂದೆ ಹೋಗ್ತಾರೆ ಅಂತ ಆಟೋ ಡ್ರೈವರ್ ನನ್ನು ಕೂಡಾ ಸರ್ ಎಂದು ಗೌರವದಿಂದ ಮಾತನಾಡಿಸುತ್ತಿದ್ದರು. ವೃತ್ತಿ ಜೀವನದಲ್ಲಿ ನಗರದ ಹೃದಯ ಭಾಗದಲ್ಲೇ ಕಳೆದ ಅವರು ಕೊನೆಗೆ ಸ್ವಂತ ಮನೆ ಮಾಡಿದ್ದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ. ತಮ್ಮ ಪ್ರಭಾವದಿಂದ ಉತ್ತಮವಾದ ಏರಿಯದಲ್ಲೇ ಮನೆ ಪಡೆಯಬಹುದಾಗಿದ್ದರೂ ಎಂದಿಗೂ ಅದರೆಡೆ ಮನಸ್ಸು ಮಾಡಿದವರಲ್ಲ.

ಸ್ನೇಹಿತೆ ಸ್ಮಿತಾ ಜರ್ಮನಿಯಲ್ಲಿದ್ದಾಗ ತನ್ನ ಮಗನ ಶಾಲೆಯ ಅರ್ಜಿಯನ್ನು ನನಗೆ ಈ-ಮೆಯ್ಲ್ ಮಾಡಿ, ಪ್ರಿಂಟ್ ಮಾಡಿ ನನ್ನ ತಂದೆಗೆ ತಲುಪಿಸು ಅಂದಾಗ ಅವರ ಮನೆಗೆ ಹೋಗಿದ್ದೆ. ನನ್ನ ಮಗಳು ನೋಡಿ ಎಷ್ಟು ಒಳ್ಳೆಯ ಸ್ನೇಹಿತೆಯರನ್ನು ಪಡೆದಿದ್ದಾಳೆ. ಈ ಪ್ರಿಂಟ್ ತೆಗೆಯೋದು, ಈ-ಮೆಯ್ಲ್ ಎಲ್ಲ ನಂಗೆ ಗೊತ್ತಾಗಲ್ಲ. ನಿಮ್ಮಿಂದ ಭಾರೀ ಉಪಕಾರ ಆಯ್ತು ಅನ್ನುತ್ತಲೇ, ಪ್ರಪಂಚ ಎಷ್ಟು ಮುಂದುವರೆದಿದೆ ನೋಡಿ. ಸ್ಮಿತಾ ಅಲ್ಲಿಂದ ಕಳ್ಸಿದ್ದನ್ನ ನೀವು ನನಗೆ ತಲುಪಿಸ್ತಾ ಇದ್ದೀರ ಅಂತ ಮಗುವಿನಂತೆ ಖುಷಿ ಪಡುತ್ತಿದ್ದರು. ಮಂಡಿನೋವಿದ್ದರೂ ಪು.ತಿ.ನ ಟ್ರಸ್ಟ್ ಮೂಲಕ ಪತ್ರಿಕಾ ವರದಿಗಾರರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಸಲಹಾಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ನಾನಂತೂ ಬಸ್ ನಲ್ಲೇ ನೋಡಿ ಓಡಾಡೋದು. ಆಟೋ ಎಲ್ಲ ಇಲ್ಲಮ್ಮ ಅನ್ನುತ್ತಿದ್ದರು.

ರಾಜ್ಯೋತ್ಸವ ಪ್ರಶಸ್ತಿ ದೊರೆತಾಗ ಫೋನ್ ಮಾಡಿ ಅಭಿನಂದಿಸಿದಾಗ, ನೋಡೀಮ್ಮಾ ಸರ್ಕಾರದವರು ಪ್ರಶಸ್ತಿ ಕೊಟ್ಬಿಟ್ಟಿದ್ದಾರೆ ಅಂತ ಸಂತಸಪಟ್ಟಿದ್ದರು. ಒಮ್ಮೆ ಹೀಗೆ ಫೋನ್ ಮಾಡಿ, ನನ್ನ ಆತ್ಮೀಯ ಸ್ನೇಹಿತ ನಾಗಭೂಷಣ ಅಂತ ಇದ್ದಾರೆ. ಲೋಹಿಯಾ ಅವರ ಬಗ್ಗೆ ತುಂಬಾ ಅಧ್ಯಯನ ಮಾಡಿದ್ದಾರೆ. ’ಹೊಸ ಮನುಷ್ಯ’ ಅಂತ ಒಂದು ಪತ್ರಿಕೆ ಪ್ರಕಟಿಸ್ತಾರೆ. ನಾನೇ ದುಡ್ಡು ಕೊಟ್ಟು ನಿಮಗೆ ಚಂದಾ ಮಾಡಿಸ್ತೀನಿ ನಿಮ್ಮ ವಿಳಾಸ ಕೊಡಿ ಅಂತ ವಿಳಾಸ ತೆಗೆದುಕೊಂದು ಚಂದಾ ಮಾಡಿಸಿದ್ದರು. ಪತ್ರಿಕೆ ಬರ್ತಾ ಇದೆಯಾ ಅಂತಲೂ ಫೋನ್ ಮಾಡಿ ವಿಚಾರಿಸುತ್ತಿದ್ದರು. ಯುವ ಜನಾಂಗ ಲೋಹಿಯಾ, ಗಾಂಧಿವಾದ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಸ್ನೇಹಿತರನ್ನೂ ಚಂದಾದಾರರನ್ನಾಗಿ ಮಾಡಿಸಿ, ಒಳ್ಳೆಯ ಪತ್ರಿಕೆ ಅಂತಲೂ ಹೇಳಿದ್ದರು.

ಬದಲಾದ ಕೇಂದ್ರ ಸರ್ಕಾರ, ಸರ್ಕಾರದ ಬದಲಾದ ಆದ್ಯತಗಳ ಬಗ್ಗೆ ಬೇಸರವಿತ್ತು. ಗಾಂಧಿಯನ್ನು ಮರೆತರೆ ಈ ದೇಶ ಉದ್ಧಾರವಾಗುತ್ತೇನ್ರೀ. ಸ್ಟುಪಿಡ್ ಫೆಲೋ, ಎಲ್ಲದರಲ್ಲೂ ತನ್ನನ್ನೇ ಮೆರೆಸಿಕೊಳ್ಳುವ ಈ ಪ್ರಧಾನಿ ಏನು ತಾನೇ ಮಾಡಬಲ್ಲ ಈ ದೇಶಕ್ಕೆ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದರು. ನೋಟ್ ಡಿಮಾನೆಟೈಜ಼್ ಮಾಡಿ ಏನೂ ಸಾಧಿಸಲು ಸಾಧ್ಯ ಇಲ್ಲ. ಎಷ್ಟು ಜನರಿಗೆ  ತೊಂದರೆ ಆಗಿದೆ. ನಾನು ರಿಟೈರ್ಡ್ ಎಂಪ್ಲಾಯಿ ಗಂಟೆಗಟ್ಟಲೆ ಮಂಡಿ ನೋವಿಟ್ಟುಕೊಂಡು ಸಾಲಲ್ಲಿ ನಿಂತು ನೋಟ್ ಪಡೆಯೋಕ್ಕೆ ಆಗುತ್ತಾ.  ಸಾಮಾನ್ಯರ ಜೀವನಕ್ಕೆ  ಬೆಲೆಯೇ ಇಲ್ಲ ಅಂದಿದ್ದರು. ನೋಡೀಮ್ಮ, ಧರ್ಮ ಅನ್ನುವುದು ನಮ್ಮ ನಮ್ಮ ಮನೆಯ ಆಚರಣೆಗೆ ಸೀಮಿತವಾಗಿರ್ಬೇಕು. ನೀವು ದನ ತಿನ್ಬೇಡಿ, ಸಸ್ಯಾಹಾರ ತಿನ್ನು ಅಂತ ಸರ್ಕಾರ ಯಾಕೆ ಹೇಳ್ಬೇಕು. .ಬೇರೆ ಮುಖ್ಯವಾದ ಕೆಲಸ ಇಲ್ವೇನ್ರೀ? ಶಿಕ್ಷಣ ಕ್ಷೇತ್ರದ ಬಗ್ಗೆ ಗಮನ ಕೊಡಲಿ. ಉದ್ಯೋಗ ಸೃಷ್ಟಿ ಮಾಡಲಿ. ಯುವ ಜನಾಂಗಕ್ಕೆ ಮಾದರಿಯಾಗಲಿ. ಅದು ಬಿಟ್ಟು ಅವರನ್ನೆಲ್ಲ ಬೇರೆಯವರ ಮೇಲೆ ಎತ್ತಿಕಟ್ಟಲು ಉಪಯೋಗಿಸಿದರೆ ಈ ದೇಶಕ್ಕೆ ಭವಿಷ್ಯ ಇದೆಯಾ!

ನೀವು ಈಗಿನ ಕಾಲದ ತಂದೆ-ತಾಯಿಗಳಿಗೆ ಮಕ್ಕಳನ್ನು ಬೆಳೆಸುವ ವಿಧಾನವೇ ತಿಳಿದಿಲ್ಲ. ಮಕ್ಕಳನ್ನು ಸ್ನೇಹಿತರ ತರ ನೋಡ್ಕೋಬೇಕು. ಸ್ಕೂಲು, ಮಾರ್ಕ್ಸು ಅಂತಾ ತುಂಬಾನೆ ತಲೆ ಕೆಡ್ಸ್ಕೋತೀರ. ಮಕ್ಕಳಿಗೆ ಅವರ ಆಸಕ್ತಿಯ ವಿಷಯ ಓದಲು ಅವಕಾಶ ಮಾಡ್ಕೊಡಿ. ಭಾನುವಾರ ಕೂಡಾ ಬಿಡದೆ ಆ ಕ್ಲಾಸು, ಈ ಕ್ಲಾಸು ಅಂತ ಸೇರಿಸಿ ಅವರ ಮನಸ್ಸಿನ ವಿಕಾಸವಾಗಲು ಅವಕಾಶ ಕೊಡದೆ ಇದ್ದರೆ ಮುಂದೆ ಹೇಗೆ? ನಮ್ಮಪ್ಪ ಅಮ್ಮ ನಮ್ಮನ್ನು ಹೀಗೇ ಬೆಳ್ಸಿದ್ರೇ? ನಾವು ಏನು ಓದ್ತಾ ಇದ್ದೀವಿ ಅನ್ನೋದೂ ಕೂಡಾ ಗೊತ್ತಿರ್ತಾ ಇರ್ಲಿಲ್ಲ ಅವರಿಗೆ. ಸಮಯಕ್ಕೆ ಸರಿಯಾಗಿ ಊಟ ಮಾಡ್ತಾ ಇದ್ದಾವ ಇಲ್ಲವ ಮಕ್ಕಳು ಅಂತ ಅಷ್ಟೆ ಅವರು ಖಾಳಜಿ ವಹಿಸ್ತಾ ಇದ್ದಿದ್ದು. ನಾವೆಲ್ಲ ಬೆಳೆದು ಮುಂದೆ ಬರ್ಲಿಲ್ವೆ ಅನ್ನುತ್ತಿದ್ದರು.

ಮಗನಿಗೆ ಸಿನಿಮಾ ನಿರ್ದೇಶಕನಾಗಲು ಆಸೆ. ಅದೆಲ್ಲ ನಮ್ಮಂತ ಮದ್ಯಮವರ್ಗದವರಿಗೆ ಸಾಧ್ಯಾನ? ಆದ್ರೂ ಅವನಿಗೆ ಬಹಳ ಆಸೆ. ನನಗೆ ಕೈಲಾದಷ್ಟು ಸಹಾಯ ಮಾಡಿದ್ದೀನಿ ಅಂದಿದ್ದರು. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಫೋನ್ ಮಾಡಿ ಸಾಧ್ಯ ಆದರೆ ಮನೆಯರನ್ನೆಲ್ಲ ಕರೆದುಕೊಂದು ಹೋಗಿ ಸಿನಿಮಾ ನೋಡಿ, ಪ್ರೋತ್ಸಾಹಿಸಿ ಅಂದಿದ್ದರು.

ಕೆಲವು ತಿಂಗಳ ಹಿಂದೆ ಫೋನ್ ಮಾಡಿ, ನೀವು ವಾಟ್ಸಾಪ್ ನಲ್ಲಿದ್ದೀರ? ನನ್ನ ಮೊಮ್ಮಗ ತೋರಿಸಿಕೊಟ್ಟ. ತುಂಬಾ ಸುಲಭ ಕಣ್ರೀ ಅಂತ ಹೇಳಿ, ಆಗಾಗ್ಗೆ ಲಿಂಕ್ ಗಳನ್ನು ಶೇರ್ ಮಾಡ್ತಾ ಇದ್ದರು. ನಿಮ್ಮ ಮನೆಗೆ ಬರಬೇಕು ಸರ್ ನಿಮ್ಮ ಹತ್ತಿರ ತುಂಬಾ ಮಾತಾಡ್ಬೇಕು ಅಂದಾಗ, ನಾನೇನಮ್ಮ ಯಾವಾಗ್ಲೂ ಫ್ರೀ. ನೀವುಗಳೇ ಬಿಜ಼ಿ ಅನ್ನುತ್ತಿದ್ದರು. ನನ್ನ ಪುಸ್ತಕ ಬಿಡುಗಡೆಯಾಗಿದೆ. ನಿಮಗೆ ಒಂದು ಪ್ರತಿ ತೆಗೆದಿಟ್ಟಿದ್ದೇನೆ. ಬನ್ನಿ ಎಂದು ಹೇಳಿದ್ದರು. ಪ್ರತಿ ವರ್ಷ ಮರೆಯದೆ ಖಾದ್ರಿ ಶಾಮಣ್ಣ ಟ್ರಸ್ಟ್ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಬಹುತೇಕ ವಾರದ ದಿನಗಳಲ್ಲೇ ಕಾರ್ಯಕ್ರಮವಿರುತ್ತಿದ್ದರಿಂದ ಒಮ್ಮೆಯೂ ಹೋಗಲು ಸಾಧ್ಯವಾಗಿರಲಿಲ್ಲ. ಒಂದೆರಡು ವಾರಗಳಿಂದ ವಾಟ್ಸಾಪ್ ನಲ್ಲಿ ಏನೂ ಮೆಸ್ಸೇಜ್ ಬರುತ್ತಿರಲಿಲ್ಲ. ಬಿಜ಼ಿ ಇರಬೇಕೋ ಏನೋ ಅಂದುಕೊಡಿದ್ದೆ. ಅಚಾನಕ್ ಆಗಿ ಬಾರದ ಲೋಕಕ್ಕೆ ನಡೆದುಬಿಟ್ಟರು. ಈಗ ಮನಸ್ಸಿಗೆ ಪಿಚ್ಚೆನಿಸುತ್ತಿದೆ. ಸಮಯ ಮಾಡಿಕೊಂಡು ಒಮ್ಮೆಯಾದರೂ ಹೋಗಿ ಬರಬೇಕಿತ್ತು. ಅವರನ್ನೊಮ್ಮೆ ಭೇಟಿಯಾಗಬೇಕು, ಕೂತು ಮಾತನಾಡಬೇಕು ಅಂದುಕೊಡ್ಡಿದ್ದು ಬರೀ ಆಸೆಯಾಗಿಯೇ ಉಳಿಯಿತು.

ಅಂತಿಮ ದರ್ಶನಕ್ಕೆಂದು ಹೋದಾಗ ಅವರ ಜೊತೆ ಕೆಲಸ ಮಾಡಿದವರೊಬ್ಬರು ನೆನಪಿಸಿಕೊಳ್ಳುತ್ತಿದರು. “ಕೆಲಸದಲ್ಲಿ ಭಾರೀ ಸ್ಟ್ರಿಕ್ಟು. ಸಿಟ್ಟುಮಾಡಿಕೊಳ್ಳುತ್ತಿದ್ದರು. ತಕ್ಷಣವೇ ಸಿಟ್ಟನ್ನು ಮರೆತುಬಿಡುತ್ತಿದ್ದರು. ಆಫೀಸಿನ ವೇಳೆ ಮೀರಿಯೂ ಯಾರಾದರೂ ಉಳಿದುಕೊಂಡಲ್ಲಿ ಮನೆಗೆ ಹೊರಡಿ, ನಾಳೆ ಮಾಡೋಣ ಅನ್ನುತ್ತಿದ್ದರು. ತಾವು ಮನೆಗೆ ತಲುಪಿದ ಮೇಲೆ ಮತ್ತೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಮನೆಗೆ ಹೋಗೀಪ್ಪಾ ಮನೆಯಲ್ಲಿ ಕಾಯ್ತಾ ಇರ್ತಾರೆ ಅನ್ನುತ್ತಿದ್ದರು. ತುಂಬಾ ಒಳ್ಳೆಯ ಮನಸ್ಸು ಅವರದ್ದು” ಅಂತ ಹನಿಗಣ್ಣಾದರು.

Coffee on the wall . . .

ಮೇ 11, 2013

ಸಂಜೆ ಆಫೀಸಿನಿಂದ ಕ್ಯಾಬ್ ನಲ್ಲಿ ಬರುವಾಗ ಹೊಟ್ಟೆ ಚುರುಗುಟ್ಟಿದಾಗ, ಕ್ಯಾಬ್ ಗೆ ತಡವಾಗಿ ಬಂದಿದ್ದಕ್ಕೆ ಅಥವಾ ಹುಟ್ಟಿದ ಹಬ್ಬ ಹೀಗೆ ಹಲವು ಕಾರಣಗಳ ನಿಮಿತ್ತ ಆಗಾಗ್ಗೆ ಚಾಮರಾಜ ಪೇಟೆಯಲ್ಲಿರುವ ಬ್ರಾಹ್ಮಿನ್ಸ್ ಕೆಫೆ ನಮ್ಮ  ಬಾಯಾಡಿಕೆಯ ತಾಣ. ಚುರುಕಾದ, ಅತಿ ಕಡಿಮೆ ವೇಳೆಯಲ್ಲಿ (ಆದರೆ  ದರ ಹೆಚ್ಚಿನದೇ!) ದೊರೆಯುವ ಸೇವೆಗಾಗಿ ಅದು ನಮ್ಮ  ಆಯ್ಕೆಯ ತಾಣ.

ಮೊನ್ನೆ, ಕ್ಯಾಬ್ ಇಳಿದು ಕೆಫೆಯನ್ನು ಸಮೀಪಿಸುತ್ತಿದ್ದ ಹಾಗೇ ರಸ್ತೆಯ ಆ ಬದಿಯಲ್ಲಿ ಕನ್ನಡ ಕಟ್ಟೆಯ ಬಳಿ ಕುಳಿತ ತಾತ ಕೈ ಬೀಸಿ ಕರೆಯುತ್ತಿತ್ತು. ಯಾಕೆ ಎಂದು ತಿರುಗಿ ನೋಡಿದರೆ ಕೈಯಲ್ಲಿದ್ದ ಬಿದಿರಿನ ಬುಟ್ಟಿಯಲ್ಲಿ ಘಮ್ಮೆನ್ನುವ ಮಲ್ಲಿಗೆ ಹೂವು. “ಬಾರವ್ವಾ, ಇನ್ನೂ ಬೋಣಿನೇ ಆಗಿಲ್ಲ”. ಹೂವು ಮುಡಿಯುವುದು ಸೌಂದರ್ಯಕ್ಕಿಂತ,  ಸ್ತ್ರೀ  ಸೌಭಾಗ್ಯದ ಕುರುಹಾಗಿದೆ ಅನ್ನಿಸತೊಡಗಿದ ಮೇಲೆ ಹೂವಿಗೂ ನನಗೂ ದೂರ. ಆದರೂ ಇಲ್ಲವೆನ್ನಲು ಮನಸ್ಸು ಬಾರದು. “ನೆನ್ನೆಯಿಂದ ಊಟ ಮಾಡಿಲ್ಲ. ಒಂದು ಮೊಳ ಹೂ ತಗಂಡು ಪುಣ್ಯ ಕಟ್ಕಳವ್ವಾ” ದೈನ್ಯದ ಸ್ವರ.  ಆಯ್ತು ತಾತಾ ಎರಡು ಮೊಳ ಕೊಡು. ಕೈ ಮೊಟಕು ಮಾಡಿ ಮೊಳ  ಹಾಕುವ ಪೈಕಿಯಲ್ಲ ಈ ತಾತ. ಪೂರ್ತಿ ಎರಡು ಮೊಳ, ಮೇಲೆ ಒಂಚೂರು ಕೊಸರು. “ತಗಳ್ಳವ್ವಾ ಮುಚ್ಚಂಜೆ ಹೊತ್ತು, ಹೂವ ಮುಟ್ಕಳವ್ವ” ಅಂತ.

ಸೊರಗಿದ ಮೈ, ದೊಗಲೆ ಶರ್ಟು, ಮಂಡಿಯ ವರೆಗಿನ ಚಡ್ಡಿ, ಹಳೆಯ ಕನ್ನಡಕ, ಮುಖದಲ್ಲಿದ್ದದ್ದು ಹೂ ಮಾರಾಟವಾಗಿದ್ದಕ್ಕೆ ನೆಮ್ಮದಿಯ ಭಾವವೋ, ಎದುರಿನಲ್ಲಿರುವ ಹೋಟೆಲ್ ನಲ್ಲಿ  ಅಂಗಡಿಯಲ್ಲಿ ೨೪ ರುಪಾಯಿ ಕೊಟ್ಟು ಎರಡು ಇಡ್ಲಿ ತಿನ್ನಲಾಗದ ಪರಿಸ್ಥಿತಿಯ ಬಗ್ಗೆ ದುಃಖವೋ ಕಾಣೆ.

ಚೌ ಚೌ ಭಾತ್, ಇಡ್ಲಿ, ವಡೆಗಳನ್ನು ಮುಂದಿಟ್ಟುಕೊಂಡು ಯಾವುದನ್ನು ತಿನ್ನುವುದು, ಯಾವುದನ್ನು ಬಿಡುವುದು, ಕೇಸರಿ  ಭಾತ್ ನಲ್ಲಿ ಇವತ್ತು ಗೋಡಂಬಿಯೂ ಇದೆಯಲ್ಲಾ, ನಮ್ಮನೇಲಿ ವಡೆ ಯಾಕೆ ಇಷ್ಟು ಗರಿ ಗರಿಯಾಗಿ ಬರುವುದಿಲ್ಲ ಎಂದೆಲ್ಲ ಮಾತಿನ ಭರದಲ್ಲಿ, ಬಿಸಿ ಆರುವ  ಮುನ್ನ ತಿಂಡಿಗಳು ಬಾಯಿ ಸೇರುತ್ತಿರುವಾಗ ಕಣ್ಣ ಮುಂದೆ ಬಂದಿದ್ದು “ನೆನ್ನೆ ರಾತ್ರಿಯಿಂದ ಊಟ ಇಲ್ಲ ಕಣವ್ವಾ” ಅಂದ ಮಲ್ಲಿಗೆ ಹೂವಿನ ಬುಟ್ಟಿಯನ್ನು ಹೊತ್ತ ತಾತನ ಮುಖ.  ನಮ್ಮ ಕ್ಯಾಬ್ ಚಾಲಕ ದರ್ಶನ್ ಗೆಂದು ಪಾರ್ಸಲ್ಗೆ ಹೇಳಲೆಂದು ಹೊರಟ ಸಹೋದ್ಯೋಗಿಯ ಬಳಿ ಮತ್ತೊಂದು ಪ್ಲೇಟ್ ಇಡ್ಲಿ ವಡೆ ಪಾರ್ಸಲ್ ಹೇಳಿದ್ದಾಯ್ತು.  ಗಾಡಿಯ ಬಳಿ ತೆರಳುವ ಮುನ್ನ ಮಲ್ಲಿಗೆ ಹೂವಿನ ತಾತನಿಗೆ ಪಾರ್ಸಲ್ ತಲುಪಿಸಿದಾಗ ಏನೋ ಸಮಾಧಾನ. ಯಾವ ಕಾಲದಲ್ಲಿ ಮಂದಿಗೆ ನೀಡಿ ಬದುಕಿದ ಜೀವವೋ ಏನೋ. ನಾನು ಆಗಲೇ ಕೊಟ್ಟ ಹೂವನ್ನು ಮುಟ್ಕಳ್ಳಲಿಲ್ವಲ್ಲವ್ವ, ತಗೋ ಅಂತ ಮತ್ತೆ ಅರ್ಧ ಮೊಳ ಕೈಗೆ ನೀಡಿತು.

ಕ್ಯಾಬ್ ನಲ್ಲಿ ಕೂತು ನಮ್ಮ ನಮ್ಮ ಪಾಲಿನ ಲೆಖ್ಖ ಹಾಕುವಾಗ ಸಹೋದ್ಯೋಗಿಯೊಬ್ಬರು ಹೇಳಿದ್ದು ತಾತನ ತಿಂಡಿ ಖರ್ಚು ನೀವೊಬ್ಬರೇ ಯಾಕೆ ಹಾಕ್ತೀರ ಎಲ್ರೂ ಸೇರಿಯೇ ಕೊಡೋಣ. ಆಗ ನೆನಪಾಗಿದ್ದು ಮೆಯ್ಲ್ ನಲ್ಲಿ ಹಿಂದೊಮ್ಮೆ ಓದಿದ coffee on the wall ವಿಚಾರ. ವಿದೇಶದಲ್ಲೆಲ್ಲೋ ಒಂದು ಹೋಟೆಲ್ನಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಹೋಟೆಲ್ ಗೆ ಹೋದವರು ತಮ್ಮ ಬಿಲ್ಲಿನ ಜೊತೆಗೆ ಮತ್ತೊಬ್ಬರ ಕಾಫಿಯ ಖರ್ಚು ಸೇರಿಸಿ  ಹಣ ಸಂದಾಯ ಮಾಡುವುದು. ಹೀಗೆ ಒದಗಿದ ಹೆಚ್ಚಿನ ಹಣವನ್ನು, ದುಡ್ಡು ಕೊಟ್ಟು ಕಾಫಿ ಕುಡಿಯಲಾಗದವರಿಗಾಗಿ ಉಚಿತ ಕಾಫಿ ಕೊಡಲು ಉಪಯೋಗಿಸಲಾಗುವುದು. ನಮ್ಮಲ್ಲ್ಲೂ ಯಾಕೆ ಇಂತಹದ್ದೊಂದು ಅಭ್ಯಾಸ ಶುರುವಾಗಬಾರದೆಂಬ ಚರ್ಚೆಯೊಂದು  ಹೋಟೆಲ್ ಉದ್ಯಮಿ ಮತ್ತು ಗ್ರಾಹಕರನ್ನೊಳಗೊಂಡ  ಫೇಸ್ ಬುಕ್ ಗುಂಪಿನಲ್ಲಿ ಚರ್ಚೆಗೆ ಒಳಗಾಗಿ, ಕೊನೆಗೆ ಲಭ್ಯತೆ-ಅವಶ್ಯಕತೆ ಗಳ ಅಂಕಿ ಅಂಶಗಳಲ್ಲಿರುವ ಭಾರೀ ವ್ಯತ್ಯಯದ ನೆಪವೊಡ್ಡಿ ವಿಷಯ ಅಲ್ಲೇ ತಣ್ಣಗಾಯಿತು.

ನಮ್ಮ ದರ್ಶಿನಿಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಯಾಕಾಗಬಾರದು? ಇಚ್ಛೆಯಿದ್ದವರು ಮತ್ತೊಬ್ಬರ ತಿನಿಸಿಗಾಗಿ  ದುಡ್ಡು ತೆತ್ತಲ್ಲಿ, ದುಡಿದು ತಿನ್ನಲು ಅಶಕ್ಯವಾದ ಎಷ್ಟೋ ಮಂದಿಯ ತುತ್ತಿನ ಚೀಲಗಳು ತುಂಬಬಹುದಲ್ಲವೇ? ಸೋಮಾರಿತನಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ವಾದವು ಸರಿಯೆನಿಸಿದರೂ, ಭಿಕ್ಷೆ ಬೇಡುತ್ತಿರುವ  ಅಥವಾ ಕೈಲಾಗದಿದ್ದರೂ ದುಡಿಯುತ್ತಿರುವ  ವೃದ್ಧ, ವೃದ್ದೆಯರನ್ನು ಕಂಡಾಗ ಮನ ಮಿಡಿಯುತ್ತದೆ,   ಇದೇ ವಿಚಾರವಾಗಿ ಫೇಸ್ ಬುಕ್ ಸ್ನೇಹಿತ ವಾಸುಕಿ ಯವರ ಬ್ಲಾಗ್ ಬರಹ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿತು. ನಮ್ಮ ಸುತ್ತಣ ಸಮಸ್ಯೆಗಳಿಗೆ ಏಕೆ ನಮಗೆ ಪರಿಹಾರ ಕಾಣುವುದಿಲ್ಲ? ಸಮಾಜದ ಭಾಗವಾಗಿ ನಾನೇನು ಮಾಡಬಹುದು? ಭಿಕ್ಷೆಯಿಂದಲ್ಲದೆ ಗೌರವಯುತವಾಗಿ ಸಮಾಜದಲ್ಲಿ ಎಲ್ಲರೂ ಬಾಳಲನುವು ಮಾಡಿಕೊಡಲು ನನ್ನ ಪ್ರಯತ್ನವೇನು? ಕೇವಲ ಪ್ರಶ್ನೆಗಳೇ ಆಗಿ ಉಳಿಯುತ್ತವೆ.

ಆಕೃತಿಯಂಗಳದಲ್ಲಿ ಸಂಗೀತ-ಸಾಹಿತ್ಯ ಸಮ್ಮಿಲನ

ಜನವರಿ 23, 2013

ಆಕೃತಿಯಂಗಳದಲ್ಲಿ ಗಾನ ಕಲಾ ಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭ

‘ನೋಡ್ತಾ ಇರಿ ನಾವೇನು ಮಾಡ್ತೀವಿ ಅಂತ’ ಎಂದು ಘೋಷಣೆ ಮಾಡದೆಯೇ ವಿಭಿನ್ನ ರೀತಿಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ  ಆಕೃತಿಯ ಗುರುಪ್ರಸಾದ್ ಅವರು.

ಜಿ.ವಿ, ಜಿ. ಎನ್. ಮೋಹನ್, ಚಂದ್ರಶೇಖರ ಕಂಬಾರ, ವಸುಧೇಂದ್ರ, ಗೋಪಾಲಕೃಷ್ಣ ಪೈ, ಕುಂ, ವೀ,  ಹೀಗೆ ಹತ್ತು ಹಲವು ಸಾಹಿತಿಗಳು ಆಕೃತಿಯ ಅಂಗಳದಲ್ಲಿ ಮನ ಬಿಚ್ಚಿ, ಓದುಗರೊಡನೆ ನೇರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಓದುಗ ಮತ್ತು ಸಾಹಿತಿಗಳ ಮುಖಾಮುಖಿಗೆ ಸೇತುವಾಗಿರುವುದು ಆಕೃತಿ.

ಹೊಸವರ್ಷದಲ್ಲಿ ಪ್ರತಿ ವಾರವೂ ತಪ್ಪದೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವ ಗುರು, ಮೊನ್ನೆ ವಿದ್ವಾನ್ ಆರ್.ಕೆ. ಪದ್ಮನಾಭ ಅವರೊಡನೆ ಸಂವಾದ ಹಮ್ಮಿಕೊಂಡಿದ್ದರು. ಸಂಗೀತಕ್ಕೂ ಸಾಹಿತ್ಯಕ್ಕೂ ಎತ್ತಣ ಸಂಬಂಧ ಅಂದುಕೊಂಡೇ ಕಾರ್ಯಕ್ರಮಕ್ಕೆ ಹೋದಾಗ ತಿಳಿಯಿತು ಕೇವಲ ಸಂಗೀತ ಸಂಯೋಜನೆಯಷ್ಟೇ ಅಲ್ಲ, ಸಂಗೀತ ಗುರುಗಳು ಸಾಹಿತ್ಯದಲ್ಲೂ ಕೃತಿಗಳನ್ನು ಹೊರತಂದಿದ್ದಾರೆ ಎಂದು.

ಸಂಗೀತದ ಮೂಲಕವಷ್ಟೇ ಕಲಾವಿದರನ್ನು ಕಾಣುವ ಅವಕಾಶವಿರುವ ನಮಗೆ, ಇಲ್ಲಿನ ಆತ್ಮೀಯ, ಸ್ನೇಹಮಯ ವಾತಾವರಣದಲ್ಲಿ ಪದ್ಮನಾಭ ಅವರೊಡನೆ ನೇರಾ ನೇರ ಮಾತನಾಡಲು ಒಂದು ಸದವಕಾಶ ಲಭ್ಯವಾಗಿತ್ತು.

ಅಂದಿನ ಸಂವಾದದ ಬಹುತೇಕ ಅಂಶಗಳು ಪ್ರಜಾವಾಣಿಯ ಈ ಲೇಖನ ಒಳಗೊಂಡಿದೆ: https://www.facebook.com/photo.php?fbid=594398280575503&set=a.104307042917965.9918.100000160081137&type=1&theater

ಉಳಿದಂತೆ, ಪ್ರೇಕ್ಷಕರ ಜೊತೆ ಮನ ಬಿಚ್ಚಿ ಮಾತನಾಡಿದ ಗುರು ಪದ್ಮನಾಭ ಅವರ ಮಾತುಕತೆಯ ಕೆಲವು ತುಣುಕುಗಳು ಹೀಗಿವೆ:

“ಸಂಸ್ಕಾರವೆಂಬುದು ಹುಟ್ಟಿನಿಂದ, ಜಾತಿಯಿಂದ  ಬರುವಂತಹದ್ದಲ್ಲ. ವ್ಯಕ್ತಿ ಬೆಳೆಯುವ ಹಾದಿಯಲ್ಲಿ ಮೈಗೂಡಿಸಿಕೊಳ್ಳುವಂಥದ್ದು. ಒಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಕಷ್ಟ ಎನ್ನುವ ಭಾವನೆ ಮನದಲ್ಲಿದ್ದರೆ ಓದು ಒಲಿಯುವುದಿಲ್ಲ. ಪ್ರಯತ್ನಪೂರ್ವಕವಾಗಿ ಸ್ವಲ್ಪ ಸ್ವಲ್ಪವಾಗಿ ಓದುವುದರಲ್ಲಿ ತೊಡಗಿಸಿಕೊಂಡರೆ ಅದು ತಾನೇ ತಾನಾಗಿ ಹವ್ಯಾಸವಾಗುತ್ತದೆ. ಅಂತೆಯೇ ಸಂಗೀತ ಕೇಳುವುದಕ್ಕಾಗಲಿ, ಹಾಡುವುದಕ್ಕಾಗಲಿ ಬೇಕಿರುವುದು ಆಸಕ್ತಿ. ನನ್ನ ಅರಿವಿಗೆ ನಿಲುಕದ್ದು ಎಂದು ದೂರವಿಟ್ಟರೆ ಅದು ದೂರವೇ ನಿಲ್ಲುತ್ತದೆ. ಬದಲಿಗೆ ಸಂಗೀತ ಕಛೇರಿಗಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡರೆ ಸಂಸ್ಕಾರ ತಾನೇ ಬರುತ್ತದೆ.

ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಎಂದು ವರ್ಗೀಕರಣ ಮಾಡುವ ಬದಲು ಭಾರತೀಯ ಸಂಗೀತ ಎಂದು ಕರೆಯುವುದು ಸೂಕ್ತ. ಅದು ಹೆಚ್ಚು, ಇದು ಹೆಚ್ಚು ಎಂಬ ತುಲನೆ ಅನಗತ್ಯ. ಆಯಾ ಪ್ರದೇಶದ, ಅಂದಿನ ಕಾಲಸ್ಥಿತಿಗಳಿಗನುಗುಣವಾಗಿ, ಸಂಗೀತೋಪಾಸಕರ ಪೋಷಣೆಯಿಂದ ಎರಡೂ ಪ್ರಾಕಾರಗಳು ಬೆಳೆದು ಬಂದಿವೆ.

ಕಲಾವಿದರು ಯಾವುದಾದರೊಂದು ಪ್ರಾಕಾರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಬೇಕು. ಕರ್ನಾಟಕ, ಹಿಂದೂಸ್ಥಾನಿ ಸಂಗೀತ ಎರಡರಲ್ಲೂ ಕಛೇರಿ ನೀಡುವುದು ತರವಲ್ಲ.

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಪುರಂದರದಾಸರ ಕಾಣಿಕೆ ಅಪರಿಮಿತ. ಸಂಗೀತಕ್ಕೊಂದು ವ್ಯಾಕರಣ, ನಿಗದಿತ ಅಭ್ಯಾಸ ಸೂಚಿಯನ್ನು ಸಿದ್ಧಪಡಿಸಿದ ಹೆಗ್ಗಳಿಕೆ ಅವರದ್ದು. ನಾಲ್ಕು ಲಕ್ಷದ ಮುವ್ವತ್ತು ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ದಾಸರ ಕೃತಿಗಳು ಇಂದಿಗೂ ಪ್ರಸ್ತುತ.

ಸ್ವರ ನೀಡುವ ಅನುಭೂತಿ ಒಂದು ಮಟ್ಟದ್ದಾದರೆ, ಸ್ವರದ ಜೊತೆ ಸಾಹಿತ್ಯವೂ ಮಿಳಿತಗೊಂಡಲ್ಲಿ ಕೇಳುಗನಲ್ಲಿ ಮೂಡುವ ಅನುಭೂತಿ ಮೇಲ್ಮಟ್ಟದ್ದು, ಮನಸ್ಸಿಗೆ ಮುಟ್ಟುವಂಥದ್ದು. ವೈಯಕ್ತಿಕ ನೆಲೆಯಲ್ಲಿ ಸಂಪ್ರದಾಯವನ್ನು ಪಾಲಿಸುವುದು ಅವರವರ ಇಚ್ಛೆ. ಆದರೆ ಸಂಗೀತ ಕಲಿಯುವಾಗ, ಅದಕ್ಕೆ ನೀತಿ ನಿಯಮಗಳಿವೆ. ಅದನ್ನು ಪಾಲಿಸಲೇಬೇಕು. ಒಂದು ನಿರ್ದಿಷ್ಟ ಪಥವಿದೆ. ಅದರಲ್ಲಿಯೇ ನಡೆಯಬೇಕು.

ಯಾವುದೋ ಕಾಲದಿಂದ ಸಾಹಿತ್ಯದ ಅಪಭ್ರಂಶವನ್ನು ಹಾಡುತ್ತಾ ಬಂದಿದ್ದಾರೆ ಅನ್ನುವ ಕಾರಣಕ್ಕೆ ಈಗ ನಾವು ಸಾಹಿತ್ಯವನ್ನು ಸರಿಪಡಿಸಿ ಹಾಡಬಾರದೆಂಬ ಯಾವ ಕಟ್ಟುಪಾಡೂ ಇಲ್ಲ. ಸರಿಪಡಿಸಿ ಹಾಡುವುದರಲ್ಲಿದೆ ಕಲಾವಿದನ ಗರಿಮೆ. ಸರಿಯಾದ ಕೆಲಸ ಮಾಡುವಾಗ ಯಾರಿಗೂ ಹೆದರಬೇಕಿಲ್ಲ. ನಮ್ಮ ನಮ್ಮ ಅಂತಃಚಕ್ಷುಗಳಿಗೆ ಉತ್ತರದಾಯಿಗಳಾಗಿದ್ದಲ್ಲಿ ಸಾಕು.

ಕ್ರಿಯೆಗಳಿಗೆ ಪ್ರಾಧಾನ್ಯತೆ ನೀಡುವುದರ ಬದಲು ಯಾವುದೇ ಆಚರಣೆಯ ಉದ್ದೇಶವನ್ನು ಅರಿತುಕೊಂಡು ಅದರಲ್ಲಿ ನಂಬಿಕೆಯಿದ್ದಲ್ಲಿ ಮಾತ್ರ ಆಚರಿಸಬೇಕು. ತೋರಿಕೆಯ ಬಾಹ್ಯ ಕ್ರಿಯೆಗಷ್ಟೇ ಸೀಮಿತವಾಗಿದಲ್ಲಿ ಯಾವುದೇ ಆಚರಣೆಯ ಅವಶ್ಯಕತೆಯಿಲ್ಲ.

ಕಲೆಯ ಮೂಲ ಉದ್ದೇಶ ಸಮಾಜ ಸುಧಾರಣೆ. ಸಂಗೀತದ ಮೂಲಕ ತಮ್ಮ ಪರಿಮಿತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದೇನೆ ಅನ್ನುವ ಖುಷಿ ತಮ್ಮದು.

ಖ್ಯಾತನಾಮರ ವೈಯಕ್ತಿಕ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾಗಲೇಬೇಕೆಂದೇನಿಲ್ಲ.  ಸರಿಯಲ್ಲವೆನಿಸಿದ್ದನ್ನು ನೇರವಾಗಿ ಹೇಳುವ ಧೈರ್ಯ ಎಲ್ಲರಿಗೂ ಇರಬೇಕು.

  • ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ಸ್ಠಳೀಯ ಪ್ರತಿಭೆಗಳಿಗೆ ಸೂಕ್ತ ಮನ್ನಣೆ ದೊರೆಯುತ್ತಿದೆಯೇ? 

ನಗರದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ದುರ್ಲಭ. ತಮಿಳುನಾಡಿನ ಕಲಾವಿದರಿಗೆ ಹೆಚ್ಚು ಮಾನ್ಯತೆ ತಮ್ಮ ಗಮನಕ್ಕೂ ಬಂದಿದೆ.  ಹೆಚ್ಚುತ್ತಿರುವ ವ್ಯಾಪಾರೀಕರಣದ ಕಬಂಧ ಬಾಹು ಕಲಾ ಜಗತ್ತನ್ನೂ ಹೊರತು ಪಡಿಸಿಲ್ಲ. ತಮಿಳುನಾಡಿನ ಕಲಾವಿದರನ್ನು ಆಹ್ವಾನಿಸಿದರೆ ಪ್ರಾಯೋಜಕರು ಸುಲಭವಾಗಿ ದೊರೆಯುತ್ತಾರೆಂಬ ಕಾರಣಕ್ಕೆ ಅಲ್ಲಿನ ಕಲಾವಿದರಿಗೆ ಇಲ್ಲಿ ಸುಲಭವಾಗಿ ಕಛೇರಿಗಳು ದೊರೆಯುತ್ತವೆ. ಉತ್ತಮ ಕಛೇರಿಯನ್ನು ನಡೆಸಿಕೊಡಬಲ್ಲ ಸ್ಥಳೀಯ ಯುವ ಪ್ರತಿಭೆಗಳಿವೆ ಆದರೆ ಸೂಕ್ತ ವೇದಿಕೆ ದೊರೆಯುತ್ತಿಲ್ಲ. ಇದು ಖಂಡಿತಾ ಬದಲಾಗಬೇಕು.  ಆದರೆ ತಮಿಳುನಾಡಿನಲ್ಲಿ ಕನ್ನಡದ ಕಲಾವಿದರಿಗೆ ಮನ್ನಣೆ ದೊರೆಯುವುದು ಬಹುತೇಕ ಶೂನ್ಯ. ಇದುವರೆಗೂ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ತಾವು ಕಾರ್ಯಕ್ರಮ ನೀಡಿಲ್ಲ. ಆಯೋಜಕರ ಬೆಂಬತ್ತಿ ಕಾರ್ಯಕ್ರಮ ಪಡೆಯುವ ತುರ್ತು ತಮಗಿಲ್ಲ. ಕರ್ನಾಟಕದ ಸಂಗೀತೋಪಾಸಕರ ಪ್ರೋತ್ಸಾಹವೇ ಸಾಕು.

  • ಕರ್ನಾಟಕ ಸಂಗೀತ ಕಾರ್ಯಕ್ರಮಗಳಲ್ಲಿ ಕನ್ನಡ ಕೃತಿಗಳು  

ಕರ್ನಾಟಕದಲ್ಲಿ ಕನ್ನಡ ಕೃತಿಗಳನ್ನು ಹಾಡಲು ಪ್ರಾಮುಖ್ಯತೆ ಕೊಡಬೇಕು. ತಮಿಳುನಾಡಿನಲ್ಲಿ ಹೇಗೆ ಪರಸ್ಠಳದ ಕಲಾವಿದರೂ ತಮಿಳು ಕೃತಿಗಳನ್ನೇ ಹಾಡಲೆಂದು ಅಪೇಕ್ಷೆ ಪಡುತ್ತಾರೋ ಹಾಗೆಯೇ ನಾವೂ ಇಚ್ಛೆ ಪಡುವುದರಲ್ಲಿ ತಪ್ಪೇನಿಲ್ಲ. ಕನ್ನಡ ಕೃತಿಗಳಿಗೆ ಮನ್ನಣೆ ದೊರೆಯಬೇಕು. ವಚನ, ಮಂಕುತಿಮ್ಮನ ಕಗ್ಗ ಎಲ್ಲವನ್ನೂ ಕರ್ನಾಟಕ ಸಂಗೀತದ ಮೂಲಕ ಹಾಡಬಹುದು. ಮೈಸೂರಿನಲ್ಲಿ ಎರಡು ಗಂಟೆಗಳ ಕಾಲ ವಚನ ಗಾಯನವನ್ನೇ ಪ್ರಸ್ತುತ ಪಡಿಸಿದ್ದೇನೆ.

  • ಕನ್ನಡ ಚಲನಚಿತ್ರಗಳಲ್ಲಿ ಕರ್ನಾಟಕ ಸಂಗೀತದ ಬಳಕೆ

ಸಂಗೀತಗಾರನ  ಜೀವನದ ಮೇಲೆ ರೂಪುಗೊಂಡ ‘ಹಂಸಗೀತೆ’ ಕೃತಿಯಾಗಿ ಗೆದ್ದರೂ ಚಲನಚಿತ್ರವಾಗಿ ಸೋತಿದೆ. ಭೈರವಿ ರಾಗದ ಗಾಢತೆಯನ್ನು ನೋಡುಗನ ಮನದಲ್ಲಿ ಮೂಡಿಸಲು ಸೋತಿದೆ.  ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದ್ದು ತ.ರಾ.ಸು ಅವರ ‘ಹಂಸಗೀತೆ’ ಕೃತಿ. ಅದರ ಫಲಶೃತಿಯೇ ತಮ್ಮ ‘ಅನಂತನಾದ’ ಕಾದಂಬರಿ.

  • ಎಸ್. ಎಲ್.  ಭೈರಪ್ಪನವರ ಮಂದ್ರದ ಬಗ್ಗೆ ನಿಮ್ಮ ಅಭಿಪ್ರಾಯ

ಒಂದು ಕಾದಂಬರಿ, ಕರ್ತೃವಿಗಿಂತ ಹೆಚ್ಚು ಓದುಗನನ್ನು ಕಾಡುತ್ತದೆ. ಅನೇಕರ ಮನವನ್ನು ತಟ್ಟುವ ಶಕ್ಯತೆ ಇರುವ ಕೃತಿಗೆ ಸಾಮಾಜಿಕ ಬದ್ಧತೆಯೂ ಅವಶ್ಯಕ. ಋಣಾತ್ಮಕ ಚಿಂತನೆಗಳನ್ನೇ ಮುಂದು ಮಾಡಿದಲ್ಲಿ, ಅದೇ ಸಾರ್ವಕಾಲಿಕ ಸತ್ಯವೆಂಬ ಅಭಿಪ್ರಾಯ ಓದುಗನಲ್ಲಿ ಮೂಡುತ್ತದೆ. ನ್ಯೂನತೆಗಳಿಲ್ಲದ ವ್ಯಕ್ತಿಯಿಲ್ಲ. ಆದರೆ ಅದನ್ನೇ ಎತ್ತಿ ಹಿಡಿಯದೆ, ವ್ಯಕ್ತಿಯ ಉತ್ತಮ ಗುಣಗಳನ್ನು, ಸಾಧನೆಯನ್ನು ಬೆಳಕಿಗೆ ತರುವುದು ಸೂಕ್ತ.  ಅಂತೆಯೇ ಭೈರಪ್ಪನವರ ‘ಮಂದ್ರ’ ಸಾಹಿತ್ಯಿಕ ಕೃತಿಯಾಗಿ ಉತ್ತಮ ಕೃತಿ. ಆದರೆ ಒಬ್ಬ ಸಂಗೀತಗಾರನಾಗಿ ತಾನು ಅದನ್ನು ಉತ್ತಮ ಕೃತಿಯೆನ್ನಲು ಸಾಧ್ಯವಿಲ್ಲ. ಸಂಗೀತಗಾರನ ಸಾಧನೆ, ಶ್ರೇಷ್ಟತೆ, ಸಂಗೀತದ ಮಹತ್ತಿನ ಬದಲು ಸಂಗೀತಗಾರನ ವ್ಯಸನಗಳೇ ಪ್ರಮುಖವೆಂಬಂತೆ ಬಿಂಬಿಸಲಾಗಿದೆ.  ಓದುಗನ ಮನದಲ್ಲಿ ಮಂದ್ರದ ಛಾಪು ಮೂಡುವ ಬದಲು ವ್ಯಕ್ತಿಯ ವ್ಯಸನಗಳೇ ಆಕ್ರಮಿಸುತ್ತವೆ. ಆ ದೃಷ್ಟಿಯಿಂದ ಅದು ಮೇರು ಕೃತಿಯೆನ್ನಲು ಮನಸ್ಸು ಒಪ್ಪುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ.

  • ಯಾವ ಯಾವ ರಾಗ ಯಾವ ರಸ ಭಾವವನ್ನು ವ್ಯಕ್ತಪಡಿಸಲು ಸೂಕ್ತ? 

ನವರಸಗಳನ್ನು ಯಾವುದೇ ರಾಗದಲ್ಲೂ ವ್ಯಕ್ತಪಡಿಸಬಹುದು. ರಸಕ್ಕೂ ರಾಗಕ್ಕೂ ಅನುಬಂಧವೇನಿಲ್ಲ.

  • ನಿಮ್ಮ ಮೆಚ್ಚಿನ ಸಂಗೀತಗಾರರು ಯಾರು? 

ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ತಾವು ಇಷ್ಟಪಡುವ ಸಂಗೀತಗಾರ.

  • ಕೊನೆಯ ಮಾತು

ಪರಸ್ಥಳಗಳಲ್ಲಿ ದೊರೆಯುವ ಹಣ, ಮನ್ನಣೆಗಳಿಗಿಂತ, ಬಿರುದು, ಬಾವಲಿಗಳಿಗಿಂತ, ಕನ್ನಡ ನಾಡಿನ ಸಂಗೀತಾಭಿಮಾನಿಗಳ ಪ್ರೀತಿ, ಗೌರವ ಬೆಲೆಬಾಳುವಂತಹದ್ದು. ಕನ್ನಡಿಗನಾಗಿರುವುದು ನನ್ನ ಹೆಮ್ಮೆ. ಘಳಿಗೆಗೊಮ್ಮೆ ಗಢಿಯಾರ ನೋಡುತ್ತ ಯಾವಾಗ ಮುಗಿಸುತ್ತಾರೋ ಎಂದು ಆಯೋಜಕರು ಇದಿರು ನೋಡುವ ಕಛೇರಿಗಳಿಗಿಂತ, ಪುಸ್ತಕಾಲಯದಲ್ಲಿ ನೆರೆದಿರುವ ನಿಜವಾದ ಅಭಿಮಾನಿಗಳ ಜೊತೆ ಮನ ಬಿಚ್ಚಿ ಮಾತನಾಡಲು ದೊರೆತ ಅವಕಾಶ ತಮಗೆ ಅತ್ಯಮೂಲ್ಯವಾದದ್ದು. ”

ಇವಿಷ್ಟು ನನ್ನ ನೆನಪಿಗೆ ನಿಲುಕಿದ್ದು. ಇಂತಹ ಒಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ಆಕೃತಿ ತಂಡಕ್ಕೆ ಧನ್ಯವಾದಗಳು.

ಗಾನ ಕಲಾ ಭೂಷಣ ಆರ್. ಕೆ. ಪದ್ಮನಾಭ ಅವರ ಕಛೇರಿಯ ಒಂದು ತುಣುಕು ಇಲ್ಲಿದೆ (ಅವರ ಶಿಷ್ಯ ಕಾರ್ತಿಕ್ ಹೆಬ್ಬಾರ್ ಅವರ ಸಂಗ್ರಹದಿಂದ) : http://www.youtube.com/watch?v=3OUtyiis0_Q

ಕುಮಾರವ್ಯಾಸ ಮಂಟಪದಲ್ಲಿ ಕುಮಾರವ್ಯಾಸ ಜಯಂತಿ

ಜನವರಿ 21, 2013

ಕುಮಾರವ್ಯಾಸ ಜಯಂತಿ (ಕುಮಾರವ್ಯಾಸ ಮಂಟಪ, ರಾಜಾಜಿನಗರ)

ಕುಮಾರವ್ಯಾಸ ಜಯಂತಿ (ಕುಮಾರವ್ಯಾಸ ಮಂಟಪ, ರಾಜಾಜಿನಗರ)

ಪ್ರತಿ ಭಾರಿಯೂ ಶನಿವಾರ, ಭಾನುವಾರಗಳು ಇನ್ನೂ ಸ್ವಲ್ಪ ಧೀರ್ಘವಾಗಿದ್ದರೆ ಚೆನ್ನಾಗಿತ್ತು ಅನಿಸುವ ಹಾಗೆ, ತುಸು ಧಾವಂತದಲ್ಲಿಯೇ ಮುಗಿದು ಹೋಗಿರುತ್ತವೆ. ಕಳೆದ ಶನಿವಾರವೂ ಹಾಗೇ. ಮಗಳ ಶಾಲೆಯಲ್ಲಿ ಕ್ರೀಡಾ ದಿನಾಚರಣೆ, ಎಲ್. ಐ.ಸಿ ಪ್ರೀಮಿಯಂ ಅದೂ ಇದೂ ಅಂತ ಓಡಾಟ ಮುಗಿದ ಮೇಲೆ, ಸಂಜೆಗೆ ಇದ್ದ ಕಾರ್ಯಕ್ರಮ ಕುಮಾರ ವ್ಯಾಸ ಜಯಂತಿ. ರಾಜಾಜಿನಗರದ ಆಸು ಪಾಸಿನಲ್ಲೇ ಹತ್ತಾರು ವರ್ಷಗಳನ್ನು ಕಳೆದಿದ್ದರೂ ಕುಮಾರ ವ್ಯಾಸ ಮಂಟಪಕ್ಕೆ ಎಂದೂ ಹೋಗಿರಲಿಲ್ಲ. ವಸುಧೇಂದ್ರ ಮುಖ್ಯ ಅತಿಥಿ, ಕಾರ್ಯಕ್ರಮದ ಆಯೋಜಕರು ಸ್ನೇಹಿತನ ತಾಯಿ ಅನ್ನುವ ಎರಡೆರಡು ಕಾರಣಗಳು ಸೇರಿ ಸ್ಥಳ ಹುಡುಕಿಕೊಂಡು ಹೊರಟೆ. ರಾಮ ಮಂದಿರದ ಹತ್ತಿರ ನಿಂತು ಯಾರ ಹತ್ತಿರ ಕೇಳುವುದು ವಿಳಾಸ ಅಂದುಕೊಳ್ಳುತ್ತಿರುವಾಗ, ಅನ್ನುತ್ತಿರುವಾಗ ಕೈಚೀಲದಲ್ಲಿ ತರಕಾರಿ, ಹಣ್ಣುಗಳನ್ನು ಹಿಡಿದು ಸಾಗುತ್ತಿದ್ದ ಹಿರಿಯ ಮಹಿಳೆಯೊಬ್ಬರನ್ನು ಕೇಳಿದೆ. ಮೇಡಂ ಇಲ್ಲಿ ಕುಮಾರ ವ್ಯಾಸ ಮಂಟಪ ಎಲ್ಲಿ ಬರುತ್ತೆ ಅಂತ. ಅವರು ಯೋಚನೆಗಿಳಿದರು. ಕೈಯಲ್ಲಿ ಭಾರ ಹಿಡಿದಿರುವ ಅವರಿಗೆ ದಾರಿಯಲ್ಲಿ ನಿಲ್ಲಿಸಿ ನಾನು ಸುಮ್ಮನೆ ತೊಂದರೆ ಕೊಡ್ತಾ ಇದ್ದೀನಲ್ಲ ಅಂದುಕೊಂಡು, ಹೋಗ್ಲಿ ಬಿಡಿ ನಿಮ್ಗೆ ಗೊತ್ತಿಲ್ಲವೇನೋ ನಾನು ಬೇರೆ ಯಾರನ್ನಾದರೂ ಕೇಳ್ತೀನಿ ಅಂದೆ. ಆಕೆ ಕೂಡಲೇ, ’ಗೊತ್ತು ಮಗಳೇ, ಕುಮಾರವ್ಯಾಸ ಮಂಟಪ ಅದೋ ಆ ಎದುರುಗಡೆ ರಸ್ತೆಯಲ್ಲಿ ನೇರ ಹೋದರೆ ಸಿಗುತ್ತೆ’ ಅಂದರು. ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಮುಂದೆ ಸಾಗಿದೆ. ಅಪರಿಚಿತ ಹಿರಿಯ ಮಹಿಳೆಯೊಬ್ಬರು ’ಮಗಳೇ’ ಎಂದು ಸಂಬೋಧಿಸಿದ್ದು ಆಪ್ಯಾಯಮಾನವಾಗಿತ್ತು. ಸ್ನೇಹಿತೆ ದೀಪಾ,  ತಮ್ಮ ಕನ್ನಡಾಭಿಮಾನಿ ಚಿಕ್ಕಪ್ಪನವರ ಬಗ್ಗೆ ಹೇಳ್ತಾ ಇದ್ರು. ಚಿಕ್ಕಂದಿನಲ್ಲಿ ಅವರನ್ನು ಅಂಕಲ್ ಅಂತ ಕರೆದರೆ, ಅವರು ಏನಮ್ಮಾ ನನ್ನ ಕಲ್ಲು ಮಾಡ್ಬಿಟ್ಟೆ? ಚಿಕ್ಕಪ್ಪ ಅಂತ ಕರೆಯಮ್ಮ ಅಂತ ಹೇಳ್ತಿದ್ರಂತೆ. ಮಮ್ಮಿ, ಡ್ಯಾಡಿ, ಆಂಟಿ, ಅಂಕಲ್ ಗಳ ಭರಾಟೆಯಲ್ಲಿ ಅಪ್ಪ, ಅಮ್ಮ, ಅತ್ತೆ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮಗಳು ಕಳೆದು ಹೋಗಿರುವ ಈ ಕಾಲದಲ್ಲಿ ನಮ್ಮದೇ ಭಾಷೆಯ ಸಂಬೋಧನೆ ಎಷ್ಟು ಖುಶಿ ನೀಡಬಲ್ಲುದು ಅಲ್ಲವೇ?

ಒಂದು ಸಣ್ಣ ಉದ್ಯಾನವನದ ನಡುವೆ, ಗಣೇಶನ ಗುಡಿಯನ್ನು ತನ್ನ ಆವರಣದಲ್ಲಿಟ್ಟುಕೊಂಡ ಪುಟ್ಟ ಸಭಾಂಗಣ ’ಕುಮಾರವ್ಯಾಸ ಮಂಟಪ’. 1971ರಲ್ಲಿ ವೀ.ಸೀ, ಅನಕೃರವರಂಥ ದಿಗ್ಗಜರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಈ ಸಂಸ್ಥೆಯಲ್ಲಿ ಅಂದಿನಿಂದ ನಿರಂತರವಾಗಿ ಸುಮಾರು ಹದಿನೈದು ಸಾವಿರದ ಮುನ್ನೂರೈವತ್ತು ದಿವಸ ನಾಡಿನ ಹೆಸರಾಂತ ಗಮಕಿಗಳಿಂದ ಕುಮಾರವ್ಯಾಸನ ಕಾವ್ಯ ವಾಚನ, ವ್ಯಾಖ್ಯಾನ ನಡೆಯುತ್ತ ಬಂದಿದೆ. ಮಂಟಪ ಸ್ಥಾಪನೆಯ ಕಾರ್ಯಕ್ರಮಕ್ಕೆ  ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಉಪಸ್ಥಿತಿಯಲ್ಲಿದ್ದ, ನಂತರವೂ ಅನೇಕ ಆಸಕ್ತರಿಂದ ಪೋಷಣೆಗೊಂಡು ಬೆಳೆದಿರುವ ಸಂಸ್ಥೆ, ಇಂದಿನ ದಿನಗಳಲ್ಲಿ ಹೆಚ್ಚಿನ  ಶ್ರೋತೃಗಳಿಲ್ಲದೆ ಚೇತರಿಕೆಗಾಗಿ ಕಾದಿದೆ. ಸಂಸ್ಥೆಯನ್ನು ಮುನ್ನಡೆಸುತ್ತಿರುವ ಹಿರಿಯ ಚೇತನಗಳ ಉತ್ಸಾಹ ಮೆಚ್ಚತಕ್ಕದ್ದು.

ತಾವೂ ವಸುಧೇಂದ್ರರ ಪುಸ್ತಕಗಳ ಅಭಿಮಾನಿ ಅಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂತ್ರಿ ಸುರೇಶ್ ಕುಮಾರ್ ಅವರು, ಕುಮಾರವ್ಯಾಸ ಮಂಟಪದ ಅಭಿವೃದ್ಧಿಗೆ ತಮ್ಮ ಸಹಾಯ ಎಂದಿಗೂ ಇದೆ, ಆಶ್ವಾಸನೆಗಳನ್ನು ನೆರವೇರಿಸಿಯೇ ತೀರುತ್ತೇವೆ ಎಂದರು.

ಮುಖ್ಯ ಅತಿಥಿ ವಸುಧೇಂದ್ರ ಅವರು ಉಲ್ಲೇಖಿಸಿದಂತೆ ನಮ್ಮ ನಾಡಿನಲ್ಲಿ ಕಲೆಗೆ, ಕಲಾವಿದರಿಗೆ ಸೂಕ್ತ ಮನ್ನಣೆ ನೀಡುವಲ್ಲಿ ಪಾಶ್ಚಾತ್ಯರಿಗೆ ಹೋಲಿಸಿದರೆ ನಾವು ಒಂದು ಹೆಜ್ಜೆ ಹಿಂದೆ. ಕುಮಾರವ್ಯಾಸನ ಕಾಲಮಾನದವನೇ ಆದ ಶೇಕ್ಸ್ ಪಿಯರ್ ಗೆ ಸಂದ ಗೌರವಕ್ಕೂ, ಕುಮಾರವ್ಯಾಸನ ಕಾವ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಹರಸಾಹಸ ಪಡುತ್ತಿರುವ ನಮಗೂ ಅಜಗಜಾಂತರ ವ್ಯತ್ಯಾಸ. ಕಾವ್ಯ ರಚನೆಗೆ ಸಂಸ್ಕೃತ ಭಾಷೆಯೇ ಅಧಿಕೃತವಾಗಿದ್ದಂತಹ ಕಾಲದಲ್ಲಿ ಆಡುಭಾಷೆಯಲ್ಲಿ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಕುಮಾರವ್ಯಾಸನು ಕನ್ನಡದಲ್ಲಿ ಕಾವ್ಯರಚನೆಗೆ ಮುಂದಾದನು. ಆಧುನಿಕ ಚಿಂತನೆ, ಸರ್ವ ಧರ್ಮ ಸಮನ್ವಯ ಮನೋಭಾವದಿಂದ ಬರೆದ ಕುಮಾರವ್ಯಾಸನ ಕಾವ್ಯ ಜನರಿಗೆ ಸುಲಭವಾಗಿ ಲಭ್ಯವಾಗಬೇಕು ಅನ್ನುವುದು ವಸುಧೇಂದ್ರ ಅವರ ಅಭಿಮತ. ಇಂದಿನ ಅಂತರ್ಜಾಲ ಯುಗದಲ್ಲಿ, ಕುಮಾರವ್ಯಾಸನ ಪದ್ಯಗಳು ಓದುಗರಿಗೆ, ವಿವರಣೆಯೊಡನೆ ಒಂದು ಜಾಲತಾಣದಲ್ಲಿ ಲಭ್ಯವಿದ್ದಲ್ಲಿ, ಆಸಕ್ತರಿಗೆ ದಿನಕ್ಕೊಂದು ಪದ್ಯ ಈ-ಮೆಯ್ಲ್ ನಲ್ಲಿ ತಲುಪುವ ಹಾಗಿದ್ದರೆ ಎಷ್ಟು ’ಛಂದ’ ಅನ್ನುವುದು ಅವರ ಆಶಯ.  ಹೆಚ್.ಎಸ್.ವಿ ಅವರ ಗರಡಿಯಲ್ಲಿ ಕುಮಾರವ್ಯಾಸನನ್ನು ಓದಲು ಕಲಿತು, ವ್ಯಾಸನನ್ನೂ  ಓದಿಕೊಂಡಿರುವ ವಸುಧೇಂದ್ರ, ಕುಮಾರವ್ಯಾಸನ ಕಾವ್ಯ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು. ಕನ್ನಡಿಗರಲ್ಲದೆ ಮತ್ಯಾರೂ ಕುಮಾರವ್ಯಾಸನ ಕಾವ್ಯವನ್ನು ಉಳಿಸಿ, ಬೆಳೆಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಗಮಕ ಪರಿಷತ್ತು ಕುಮಾರವ್ಯಾಸನ ಕಾವ್ಯದ ಗಣಕೀಕರಣಕ್ಕೂ ಮುಂದಾಗಿದೆ. ಇತ್ತೀಚೆಗೆ ತಮಿಳುನಾಡಿನ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಕುಮಾರವ್ಯಾಸನ ಆಯ್ದ ಪದ್ಯಗಳ ವಾಚನ, ವ್ಯಾಖ್ಯಾನವನ್ನು ತುಂಬು ಸಭೆಯಲ್ಲಿ ನಡೆಸಿಕೊಟ್ಟ ಹಿರಿಮೆ ಕುಮಾರವ್ಯಾಸ ಮಂಟಪದ ಡಾ. ಪ್ರಸನ್ನ ಅವರದ್ದು.  ಸಾಹಿತಿ ಯು. ಆರ್. ಅನಂತಮೂರ್ತಿಯವರೂ ಕೂಡಾ ಕುಮಾರವ್ಯಾಸನ ಅಭಿಮಾನಿ ಎನ್ನುವುದು ನೆರೆದಿದ್ದ ಗಮಕಿಗಳಿಗೆಲ್ಲ ಹೆಮ್ಮೆಯ ವಿಷಯ.

ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ, ಬಹುಶಃ ನಮ್ಮ ದೇಶದಲ್ಲೇ ಏಕೈಕ ಸಂಸ್ಥೆ, ಸತತ 40 ವರ್ಷಗಳಿಂದ ಎಡಬಿಡದೆ ಪ್ರತಿನಿತ್ಯ ಕಾವ್ಯ ವಾಚನ, ವ್ಯಾಖ್ಯಾನ ನಡೆಸಿಕೊಂಡು ಬರುತ್ತಿರುವ ಸಂಸ್ಥೆ. ಇದು ಎಲೆ ಮರೆಯ ಕಾಯಿಯಾಗದೆ ಹೆಚ್ಚು ಹೆಚ್ಚು ಆಸಕ್ತರನ್ನು ತನ್ನೆಡೆಗೆ ಸೆಳೆದುಕೊಂಡಲ್ಲಿ, ಆಯೋಜಕರಿಗೂ ಹುಮ್ಮಸ್ಸು, ಗಮಕಿಗಳಿಗೂ ಪ್ರೋತ್ಸಾಹದಾಯಕ.

ಸುರಕ್ಷೆ ಕೇವಲ ಪುರುಷರು ನಮಗೆ ನೀಡುವ ಭಿಕ್ಷೆಯಾ?

ಜನವರಿ 6, 2013

ಆರು ತಿಂಗಳ ಹಿಂದೆ ಸ್ನೇಹಿತೆಯೊಡನೆ ಸೇರಿ ಅಮ್ಮಂದಿರು, ಮಕ್ಕಳ ಕಾಶ್ಮೀರ ಪ್ರವಾಸ ಯೋಜಿಸಿದಾಗ ಮನೆಯವರು ಹುಬ್ಬೇರಿಸಿದರೂ ಯಾರೂ ಬೇಡವೆನ್ನಲಿಲ್ಲ. ಇತರೇ ಸ್ನೇಹಿತೆಯರು ಪ್ರಶ್ನಿಸಿದ್ದರು. ಅದು ಹೇಗೆ ಧೈರ್ಯ ಮಾಡಿ ಅಷ್ಟು ದೂರ ಹೋಗ್ತಿದ್ದೀರ ಬರೀ ಹೆಂಗಸರು ನೀವು ಸಣ್ಣ ಮಕ್ಕಳನ್ನು ಕರೆದುಕೊಂಡು ಅಂತ. ನನಗೂ ನನ್ನ ಸ್ನೇಹಿತೆಗೂ ಎಲ್ಲಿಲ್ಲದ ಧೈರ್ಯ. ಇಲ್ಲೀವರೆಗೂ ಸುತ್ತಿಲ್ಲವಾ ಮುಂಬೈ, ಡೆಲ್ಲಿ, ಕೆನಡ, ಅಮೆರಿಕಾ ಅಂತ. ಕಾಶ್ಮೀರ ನಮ್ಮ ದೇಶವೇ ತಾನೇ ಅಂತ ಧೈರ್ಯ ಮಾಡಿ ಹೊರಟೇ ಬಿಟ್ಟೆವು 7 ದಿನದ ಪ್ರವಾಸಕ್ಕೆ. ಒಂದು ಸುಂದರ ಪ್ರವಾಸವನ್ನು ಮುಗಿಸಿಕೊಂಡು ಬಂದ ಮೇಲೆ, ಹೇಗಿತ್ತು ಅಂತ ಕೇಳಿದವರಿಗೆ ನನ್ನ ಮೊದಲ ಉತ್ತರ, ಸುರಕ್ಷಿತ ಪ್ರವಾಸ, ಯಾರೂ ನಮ್ಮನ್ನು ಚುಡಾಯಿಸಲಿಲ್ಲ, ತುಂಬಾ ಮರ್ಯಾದೆಯಿಂದ ನೋಡಿಕೊಂಡರು ಅಂತ! ಆಮೇಲೆ ನನಗೇ ಅನ್ನಿಸತೊಡಗಿತು ಯಾಕೆ ಹೀಗೆ? ಕಾಶ್ಮೀರ ಚೆನ್ನಾಗಿತ್ತು ಅನ್ನುವುದಕ್ಕಿಂತ ಮುಂಚೆ ಮನಸ್ಸಲ್ಲಿ ಮೂಡಿದ್ದು ನಾವು ಅಲ್ಲಿ ಹೆಂಗಳೆಯರು, ಮಕ್ಕಳೇ ಆಗಿದ್ದರೂ ಸುರಕ್ಷಿತರಾಗಿದ್ದೆವು ಅನ್ನುವ ಭಾವನೆ.

ಸುರಕ್ಷೆ ಕೇವಲ ಪುರುಷರು ನಮಗೆ ನೀಡುವ ಭಿಕ್ಷೆಯಾ? ಸುರಕ್ಷವಾಗಿರುವುದು ಈಗ default ಅಲ್ಲ! ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿರುವ ಯಾವುದೋ ಒಂದು ಸ್ಥಳ, ಕಾಲದಲ್ಲಿ ನಾವಿಲ್ಲದೇ ಇದ್ದುದರಿಂದ ನಾವು ಸುರಕ್ಷಿತ, ನಾವೂ ದೌರ್ಜನ್ಯಕ್ಕೆ ತುತ್ತಾಗಬಹುದು/ತುತ್ತಾಗಬಹುದಿತ್ತು ಅನ್ನುವುದನ್ನು ಊಹಿಸಿಕೊಳ್ಳಲೂ ಭಯ. ದೆಹಲಿಯಲ್ಲಿ ಆ ಹುಡುಗಿ ಅನುಭವಿಸಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ಮೈ ನಡುಗುತ್ತದೆ. ಇಷ್ಟೆಲ್ಲ ದೌರ್ಜ್ಯನ್ಯಗಳು ಮುಖಕ್ಕೆ ರಾಚುತ್ತಿದ್ದರೂ ಸೂಕ್ತ ಕಾಯಿದೆಗಳ ಬದಲಾವಣೆಗೆ ಬಂದಿರುವ ಅಡ್ಡಿಯಾದರೂ ಏನು?

ಚಿಕ್ಕಂದಿನಿಂದಲೂ ಅಮ್ಮ ಅಕ್ಕನನ್ನು, ನನ್ನನ್ನು ಯಾವ ನೆಂಟರ ಮನೆಯಲ್ಲೂ ಉಳಿದುಕೊಳ್ಳಲು ಬಿಡುತ್ತಿರಲಿಲ್ಲ. ತಾಯಿ ಇದ್ದ ಕಡೆ ಮಕ್ಕಳಿರಬೇಕು ಎಂದು ಅಮ್ಮ ನೀಡುತ್ತಿದ್ದ ಕಾರಣದಿಂದ ಆಗ ಸಿಟ್ಟು, ನಿರಾಸೆ. ಆದರೆ ಬೆಳವಣಿಗೆಯ ಹಾದಿಯಲ್ಲಿ ಅದರ ಸೂಕ್ಷ್ಮಗಳ ಅರಿವಾಯಿತು. ಮಾನ್ಸೂನ್ ವೆಡ್ಡಿಂಗ್ ಸಿನಿಮಾ ನೋಡಿದ ಸಂಬಂಧಿಕರ ಹುಡುಗಿ ಇದು ಅವಳದೇ ಕತೆ ಎಂದಾಗ ಬೆಚ್ಚಿ ಬಿದ್ದಿದ್ದೆ. ನಿಕಟ ಸಂಬಂಧಿಗಳೇ ಮಗಳ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನ್ನು ತಿಳಿದೂ ಅವರೊಡನೆ ಏನೂ ನಡೆದೇ ಇಲ್ಲವೆಂಬಂತೆ ವರ್ತಿಸುತ್ತಿದ್ದ ಅವಳ ತಂದೆ-ತಾಯಿಗಳ ಬಗ್ಗೆ ಸಿಟ್ಟು, ಅಸಹ್ಯ ಮೂಡಿತ್ತು. ಆ ಮಕ್ಕಳ ಪೀಡಕ ಸಂಬಂಧಿಯನ್ನು ಕಂಡಾಗಲೆಲ್ಲ ಈಗಲೂ ಮೈ ಉರಿಯುತ್ತದೆ.

೩-೪ ನೇ ತರಗತಿಯಲ್ಲಿದ್ದಾಗ ಪಕ್ಕದ ಮನೆಯ ಮಗುವನ್ನು ನೋಡಲು ಹೋದಾಗ, ಮಗುವಿನ ತಂದೆ ನನ್ನ ಕೆನ್ನೆ ಗಿಲ್ಲಿದಾಗ ಏನೋ ಇರುಸು ಮುರುಸು, ನಾನೇನೂ ಚಿಕ್ಕ ಮಗುವಲ್ಲ ಯಾಕೆ ಹೀಗೆ ಮಾಡ್ತಾರೆ ಅಂತ. ಮಗುವಿನ ತಾಯಿಯೂ ಅಲ್ಲೇ ಇದ್ದರೂ ಏನೂ ಹೇಳದೇ ಇದ್ದಾಗ, ಇದೇನೂ ತಪ್ಪಲ್ಲವೇನೋ ಅನಿಸಿದರೂ, ಅವರ ಮನೆಗೆ ಭೇಟಿ ಅಲ್ಲಿಗೇ ನಿಂತಿತು.

ಪಿ.ಯು.ಸಿ ಯಲ್ಲಿ ಟ್ಯೂಷನ್ ಗೆ ಹೋಗುವಾಗ, ರಾಜಾಜಿನಗರದ ಖ್ಯಾತ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರಾಧ್ಯಾಪಕರಾಗಿದ್ದ, ಟ್ಯೂಷನ್ ನಲ್ಲಿ ಕೆಮಿಸ್ಟ್ರಿ , ಜೊತೆಗೆ ಫಿಸಿಕ್ಸ್ ಹೇಳಿಕೊಡುತ್ತಿದ್ದ ನಡುವಯಸ್ಸಿನ ಅವರು, ಮುಂದಿನ ಸಾಲಿನಲ್ಲಿ ಕುಳಿತ ಹುಡುಗಿಯರ ಪಾದಗಳನ್ನು ತಮ್ಮ ಕಾಲ್ಬೆರಳುಗಳಿಂದ ಸವರುತ್ತಿದ್ದರು. ಯಾವಾಗಲೂ ಕೊನೆ ಬೆಂಚು ಹಿಡಿಯುತ್ತಿದ್ದ ನಾನು, ಹುಡುಗಿಯರು ಯಾಕೆ ಮೊದಲನೇ ಬೆಂಚಿನಲ್ಲು ಕುಳಿತುಕೊಳ್ಳಲು ಹಿಂದೆ-ಮುಂದೆ ನೋಡುತ್ತಿದ್ದಾರೆ ಅನ್ನುವುದರ ಸುಳಿವು ಸಿಕ್ಕಿದ್ದು ಲೇಟ್ ಆಗಿ ಬಂದದ್ದಕ್ಕಾಗಿ ಮೊದಲನೇ ಸಾಲಿನ ಬೆಂಚಿನಲ್ಲಿ ಕುಳಿತು ಕೊಳ್ಳುವ ಸಂದರ್ಭ ಬಂದಾಗ. ಒಂದು ಸಾರಿ ಕತ್ತೆತ್ತಿ ಕೆಕ್ಕರಿಸಿ ನೋಡಿದಾಗ ಸುಮ್ಮನಾಗಿದ್ದರು. ಟ್ಯೂಷನ್ ಅವರ ಮನೆಯಲ್ಲೇ ನಡೆಯುತ್ತಿತ್ತು. ಅವರ ಪತ್ನಿಯೂ ಅವರ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಅವರಿಗೆ ಹೋಗಿ ಹೇಳಿಬಿಡಲೇ ಅನ್ನಿಸಿದರೂ ಧೈರ್ಯ ಬರಲಿಲ್ಲ. ಆಮೇಲೆ ನಾವು ಹುಡುಗಿಯರು ಕಂಡುಕೊಂಡ ಸುಲಭೋಪಾಯ, ಹುಡುಗರನ್ನು ಮೊದಲನೇ ಬೆಂಚಿನಲ್ಲಿ ಕೂಡಿಸುವುದು!.

ಎಂಟು ವರ್ಷಗಳ ಹಿಂದೆ, ಮುಂಬೈನಲ್ಲಿ ಕೆಲಸದಲ್ಲಿದ್ದಾಗ ಬ್ರಿಟಿಷ್ ಸಮಯದ ಪಾಳಿಯ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಯಲ್ಲಿ ಹೊರಟು ಮನೆ ಸೇರಲು ಒಂದು ಕಿ.ಮೀ ನಡೆಯಬೇಕಿತ್ತು. ಒಮ್ಮೊಮ್ಮೆ ಪುರುಷ ಸಹೋದ್ಯೋಗಿಗಳು ಜೊತೆಯಿರುತ್ತಿದ್ದರು. ಇಲ್ಲದಿದ್ದಾಗ ಬಿರುಸಾಗಿ ನಡೆಯುತ್ತ ಹೋಗುವಾಗ ಯಾರೇ ಇದಿರಿಗೆ ಬಂದರೂ ಸ್ವಲ್ಪ ಅನುಮಾನವೇ. ಆದರೆ ೪-೫ ತಿಂಗಳ ಅವಧಿಯಲ್ಲಿ, ಒಮ್ಮೆಯೂ ಯಾವುದೇ ಅನುಚಿತ ವರ್ತನೆಗೂ ಗುರಿಯಾಗದ್ದಕ್ಕೆ ಮುಂಬೈ ಎಷ್ಟು ಸುರಕ್ಷಿತ ಅನ್ನಿಸಿದ್ದೂ ಹೌದು. ಅದು ಈಗ ಸಾಧ್ಯವಾ?

ಕಛೇರಿಯಲ್ಲಿ ಪುರುಷ ಸಹೋದ್ಯೋಗಿಗಳು ಇದಿರಿಗೆ ಸಿಕ್ಕಾಗ ಅವರು ಮೈಯೆಲ್ಲ ಕಣ್ಣಾಡಿಸಿ ಆಮೇಲೆ ಕಣ್ಣು ಸಂಧಿಸುವಾಗ ಅವರ ಮೇಲೆ ಮೂಡುವುದು ತುಚ್ಛ ಭಾವನೆ. ಅಂತಹ ಹಲವರ ನಡುವೆ, ರಾತ್ರಿ ಕೆಲಸದ ಒತ್ತಡದಲ್ಲಿ, ಕೆಲವೊಮ್ಮೆ ತಡವಾಗಿ ಹೊರಟಾಗ ಆಫೀಸಿನ ಕ್ಯಾಬ್ ನಲ್ಲೇ ಹೊರಟರೂ ಸೇಫಾಗಿ ಮನೆ ಸೇರಿದಿರಾ ಇಲ್ಲವಾ ಎಂದು ಕೇಳುವ ಮ್ಯಾನೇಜರ್ ಮೇಲೆ ಗೌರವ ಭಾವನೆ ಮೂಡುತ್ತದೆ.

ಹಿಂದೆ ಕೂತ ಹುಡುಗಿಯರನ್ನು ನೋಡಲೆಂದೇ ಕನ್ನಡಿಯನ್ನು ಅಳವಡಿಸಿಕೊಂಡ ಆಟೋ ಚಾಲಕರು, ಮಹಿಳೆಯರೊಡನೆ ಏಕವಚನದಲ್ಲಿ, ತುಚ್ಛವಾಗಿ ಮಾತನಾಡುವ ಆಟೋ ಚಾಲಕರು ಒಂದು ಕಡೆ. ಗಿರಿನಗರದಲ್ಲಿ ಮದುವೆಗೆ ಹೋಗಿ, ೧೦-೧೧ರ ರ ರಾತ್ರಿಯಲ್ಲಿ ಆಟೋ ಸಿಗದೆ ಮಗುವಿನೊಡನೆ ಕಾದು ನಿಂತಿದ್ದಾಗ, ನಂದು ಇದೇ ಏರಿಯ ಮೇಡಂ ಟ್ರಿಪ್ ಹೋಗಲ್ಲ ಅಂದು ತುಸು ದೂರ ಹೋಗಿ ವಾಪಸ್ ಬಂದು, ವನ್ ಅಂಡ್ ಹಾಫ್ ಕೊಟ್ಬುಡಿ ಬನ್ನಿ ಮೇಡಂ ಆಂದು ಮನೆ ತಲುಪಿಸಿದ ಆಟೋ ಚಾಲಕ, ದೂರದ ಖರಗ್ ಪುರದಲ್ಲಿ ಒಮ್ಮೆ ನಡು ರಾತ್ರಿಯ ರೈಲು ಹಿಡಿಯುವಾಗ ’ಆಪ್ ಅಕೇಲೆ ಕೈಸೆ ಜಾಯೆಂಗೆ’ ಅಂದು ತಾನೇ ಖುದ್ದಾಗಿ ಬಂದು ರೈಲು ಹತ್ತಿಸಿದ ಸಹೋದ್ಯೋಗಿ ಬೆಂಗಾಲಿ ಹುಡುಗ, ಕಾಶ್ಮೀರದಲ್ಲಿ ’ಹಮ್ ಹೈ, ಆಪ್ ಬೇಫಿಕರ್ ರಹಿಯೆ’ ಎಂದು ಸೇಫಾಗಿ ಊರೆಲ್ಲ ಸುತ್ತಾಡಿಸಿದ ಡ್ರೈವರ್ ಸಜ್ಜದ್, ಮನು ಕುಲದ ಮೇಲೆ ನಂಬಿಕೆಯನ್ನು ಬಲಪಡಿಸುತ್ತಾರೆ. ’ಸಿಕ್ಕಿ ಹಾಕಿಕೊಳ್ಳುವುದಿಲ್ಲ ಎಂದು ಗೊತ್ತಿದ್ದಾಗ ಎಲ್ಲರೂ ತಪ್ಪು ಮಾಡುತ್ತಾರೆ’ ಅನ್ನುವ ನುಡಿಯನ್ನು ಸುಳ್ಳು ಮಾಡುತ್ತಾರೆ.

(ಅವಧಿಯಲ್ಲಿ ಪ್ರಕಟಗೊಂಡ ಮೇಲಿನ ಲೇಖನದ ಕೊಂಡಿ: http://avadhimag.com/?p=73459 )

ಕಿಶೋರ ವೈಜ್ಞಾನಿಕ ಪ್ರೋತ್ಸಾಹನಾ ಯೋಜನೆ

ಸೆಪ್ಟೆಂಬರ್ 8, 2011

ದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಸೆಳೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನೀಡಲಾಗುವ ರಾಷ್ಟ್ರದ ಪ್ರತಿಷ್ಠಿತ ಫೆಲೋಶಿಪ್ ’ಕೆ.ವಿ.ಪಿ.ವೈ’ ಗೆ ವೈಯಕ್ತಿಕವಾಗಿ ಅಥವಾ ಆನ್ ಲೈನ್ ನಲ್ಲಿ ಅರ್ಜಿ ಪಡೆಯಲು ಕೊನೆಯ ದಿನಾಂಕ ನಾಳೆ, ಸೆಪ್ಟಂಬರ್ 9, 2011 ಮತ್ತು ಭರ್ತಿ ಮಾಡಿದ ಅರ್ಜಿ ಹಿಂತಿರುಗಿಸಲು ಕೊನೆಯ ದಿನಾಂಕ ಸೆಪ್ಟಂಬರ್ 12, 2011.
ಈ ಫೆಲೋಶಿಪ್ ಬಗ್ಗೆ ವಿಸ್ತೃತ ಲೇಖನ ಸಧ್ಯದಲ್ಲಿಯೇ ಈ ಬ್ಲಾಗ್ ನಲ್ಲಿ ಬರಲಿದೆ. ಅದಕ್ಕೆ ಮುನ್ನ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತಪ್ಪದೇ ತಿಳಿಸಿ.

ಪಿ.ಯು.ಸಿ, ಬಿ.ಎಸ್.ಸಿ, ಬಿ.ಇ, ಬಿ.ಆರ್ಕ್, ಎಂ.ಬಿ.ಬಿ.ಎಸ್, ಬಿ.ಎಸ್.ಸಿ, ಬಿ.ವಿ.ಎಸ್.ಸಿ, ಬಿ.ಫಾರ್ಮ ಒಂದು ಮತ್ತು ಎರಡನೇ ವರ್ಷದಲ್ಲಿ ಅಭ್ಯಸಿಸುತ್ತಿರುವ, ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿ ಲಭ್ಯ: http://www.kvpy.org.in/

ನಾನು ಓದಿದ ಪುಸ್ತಕ: ಮಾತುಗಾರ ರಾಮಣ್ಣ

ಮಾರ್ಚ್ 26, 2011

ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ ಮುಂದಿಡುತ್ತಾರೆ ಮಾಸ್ತಿಯವರು. ಮೈಸೂರಿನ ದಿವಾನರ ಆಳ್ವಿಕೆಯ ಪರಿ, ದೇಶದಲ್ಲಿ  ಭ್ರಷ್ಟಾಚಾರ ವ್ಯಾಪಿಸಿದ ಬಗೆ, ಕೌಟುಂಬಿಕ ಜೀವನದ ನೆಮ್ಮದಿಗೆ ಬೇಕಾದ ಮನೋಸ್ಥಿತಿ, ಕನ್ನಡ ಭಾಷೆಯ ಸ್ಥಾನಮಾನ,  ಈ ಎಲ್ಲದರ ಬಗ್ಗೆಯೂ ಸರಳ, ನೇರ ವಿವರಣೆ, ಇಬ್ಬರು ಹಿರಿಯರ ನಡುವಿನ ಸಂಭಾಷಣೆಯ ಮೂಲಕ, ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಲ್ಲಿ ಲಭ್ಯ. ಮೈಸೂರಿನ ದಿವಾನರ ಆಳ್ವಿಕೆಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿರುವವರಿಗೆ ಉತ್ತಮ ಪುಸ್ತಕ.

ಪುಸ್ತಕದಲ್ಲಿ ನನ್ನ ಮನಸೆಳೆದ ಕೆಲವು ಸಂಗತಿಗಳು (ಪುಸ್ತಕದಿಂದ ನೇರವಾಗಿ ಹೆಕ್ಕಿದ್ದು):

****************************************************

 “ಜಪಾನೀಯರಿಗೆಲ್ಲ ಈ ದೇಶ ನಮ್ಮ ದೇಶ, ಇದು ದೊಡ್ಡದಾಗಬೇಕು, ಇದು ದೊಡ್ಡದಾಗಬೇಕಾದರೆ ನಾವೆಲ್ಲ ಚೆನ್ನಾಗಿ ದುಡಿಯಬೇಕು ಅನ್ನೋ ಆಸೆಯಂತೆ ಸ್ವಾಮಿ. ಅವರ ಪಾಠದ ಹೊತ್ತಿನಲ್ಲಿ ದೊಡ್ಡ ದೊಡ್ಡ ಉಪಾಧ್ಯಾಯರು ಇಂಗ್ಲಿಷ್ ಪುಸ್ತಕಾನ ಎದುರಿಗಿಟ್ಟುಕೊಂಡು ಜಪಾನಿ ಭಾಷೆಯಲ್ಲಿ ಪಾಠ ಹೇಳುತ್ತಿದ್ದರಂತೆ. ನಮ್ಮ ದೊಡ್ಡ ಉಪಾಧ್ಯಾಯರು ಮೊದಲು ಕನ್ನಡದಲ್ಲಿ ಪುಸ್ತಕ ಆಗಲಿ ಅದಿಟ್ಟುಕೊಂಡು ಕನ್ನಡದಲ್ಲಿ ಪಾಠ ಹೇಳುತ್ತೇವೆ ಅನ್ನುತ್ತಾರೆ. ಪುಸ್ತಕ ಬರೀಬೇಕಾದ ಈ ದೊಡ್ಡವರೇ ಕನ್ನಡದಲ್ಲಿ ಬರಿಯೋಕಾಗುವುದಿಲ್ಲ ಅಂತಲೋ, ಬೇರೆಯವರು ಬರೀಲಿ ಅಂತಲೋ, ತೆಪ್ಪನೆ ಕುಳಿತು ಬಿಟ್ಟರೆ ಪುಸ್ತಕ ಬರೆಯದೆಯೇ ಕನ್ನಡ ಬೆಳೆಯುತ್ತದೆಯೇ?”

“ನಮ್ಮ ಜನಕ್ಕೆ ಇಂಗ್ಲೀಷು ಅಂದರೆ ಮೋಹ ಆಗಿದೆ. ನಮ್ಮ ದೊರೆಗಳಾಗಿದ್ದ ಪರಂಗಿ ಜನ, ನಮ್ಮನ್ನು ಆಳುವುದಕ್ಕೆ ಉಪಾಯ ಅಂತ ನಮ್ಮ ಜನಕ್ಕೆ ತಮ್ಮಲ್ಲೇ ನಂಬಿಕೆ ಇಲ್ಲದಂತೆ ಮಾಡಿದರು; ಸಂಸ್ಕೃತ ಯಾಕೆ ಅಂತ ಇಂಗ್ಲಿಷ್ ಕಲಿಸಿದರು. ನಾವೆಲ್ಲ ಇಂಗ್ಲಿಷ್ ಕಲಿತದ್ದು ಸಂಬಳಕ್ಕಾಗಿಯೆ. ಹೀಗಾಗಿ ಸಂಸ್ಕೃತ ಮೂಲೆಗೆ ಬಿತ್ತು.”

“***ಇವರು ದೊಡ್ಡ ಕೆಲಸದಲ್ಲಿ ಏಳು ಜನ ಮದರಾಸಿನವರನ್ನು ತಂದು ನಿಲ್ಲಿಸಿದರಲ್ಲದೆ ಇಲ್ಲಿಯ ಬೇರೆ ಕೆಲಸದಲ್ಲಿ ಕೂಡ ನೇಮಿಸುವಲ್ಲಿ ತಮ್ಮ ಹತ್ತಿರದ ಕೆಲಸ ಮಾಡಿದ ಮನುಷ್ಯರನ್ನು ಕೆಲಸಕ್ಕೆ ನೇಮಿಸಿದರು. ಒಟ್ಟಿನಲ್ಲಿ ಮೈಸೂರು ತಮಿಳರ ಪಾಲಾಯಿತು. ತನ್ನವನೂ ಅಂತ ಒಬ್ಬನಿಗೆ ತನ್ನ ಹತ್ತಿರ ಕೆಲಸ ಕೊಡದೆ ಮರ್ಯಾದೆ ಉಳಿಸಿಕೊಂಡವರು ವಿಶ್ವೇಶ್ವರಯ್ಯನವರು ಒಬ್ಬರೇ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆಗೆ ಸಾಗರದ ಕಟ್ಟಡ ಆರಂಭಿಸಿದರಲ್ಲ, ಇಲ್ಲಿ ಸರ್ಕಾರದ ಕೆಲಸದಲ್ಲಿದ್ದ ತಮಿಳು ಜನರ ಕೂಗೋ ಕೂಗು. ತಂಜಾವೂರ ಜನಕ್ಕೆ ತೊಂದರೆ ಆಗುತ್ತೆ ಅಂತ. ವಿಶ್ವೇಶ್ವರಯ್ಯನವರು ಗಟ್ಟಿ ದಿವಾನರು. ಕೆಲಸ ಮುಂದುವರಿಸಿದರು. ಕುಡಿಯೋಕೆ ನೀರಿಲ್ಲದೆ ಕಷ್ಟ ಪಡ್ತಾ ಇದ್ದ ಮಂಡ್ಯದ ಸೀಮೆ ನೆಲ, ಶ್ರೀರಂಗಪಟ್ಟಣದ ನೆಲದ ಹಾಗೆ ಗದ್ದೆ ನೆಲ ಆಯ್ತು. ನಮ್ಮ ಜನ ಬದುಕಿಕೊಂಡರು.”

“ನಮ್ಮ ವ್ಯಾಪಾರಗಾರರು ಒಳ್ಳೇ ತುಪ್ಪಕ್ಕೆ ಜಿಡ್ಡು ಸೇರಿಸೋಕೆ ಏರ್ಪಾಟು ಮಾಡಿದರು. ಊರಿನಲ್ಲಿ ಕಸಾಯಿ ಮನೆಗಳಿಂದ ಕುರಿ ಕೊಬ್ಬನ್ನ ತಂದು ತುಪ್ಪದಲ್ಲಿ ಸೇರಿಸೋದು ಮೊದಲಾಯಿತು.  ನಮ್ಮ ಕಾಲದ ಹೊಸ ಭಕ್ಷ್ಯಗಳು ಬೋಂಡಾ, ಪಕೋಡಾ, ಮೈಸೂರುಪಾಕು ಇಂಥದ್ದೆಲ್ಲ ಈ ತುಪ್ಪದಲ್ಲಿ ಮಾಡಿದ್ದು ಹೆಚ್ಚು ರುಚಿ ಆಗ್ತಾ ಇತ್ತಂತೆ. ”

“ನಮ್ಮ ದೊಡ್ಡ ಕವಿ, ಜಾಣ ಒಬ್ಬ ರಾಜನಾದವನಿಗೆ ’ಭೂಪತಿ ಅನ್ನಿಸಿಕೊಂಡ ಜನ ಸತ್ತಾಗ ಅವರೊಂದಿಗೆ ಭೂಮಿ ಸಹಗಮನ ಮಾಡಿದ್ದಿಲ್ಲಪ್ಪ’ ಅಂತ ಹೇಳಿದ ಅಂದರು. ಮನುಷ್ಯನಿಗೆ ತಿಳಿಯಬೇಕಾದ ಸಂಗತಿ; ತಿಳಿಯೋದಿಲ್ಲ ಸ್ವಾಮಿ. ಈಗ ದೊಡ್ಡ ದೊಡ್ಡ ಅಧಿಕಾರದಲ್ಲಿ, ಸಂಸ್ಥೆಗಳಲ್ಲಿ  ದುರಾಸೆಯಿಂದ ಅನ್ಯಾಯವಾಗಿ ಕಾಸುಗಳಿಸುತಾ ಇರೋ ಪುಣ್ಯವಂತ ಜನಕ್ಕೆ ಈ ಮಾತು ಸಲ್ಲುತ್ತೆ. ಹಣ ಮುಂದಕ್ಕೆ ಯಾರ ಪಾಲಾಗುತ್ತೆ, ಯಾವ ಶುಭವನ್ನು ಸಾಧಿಸುತ್ತೆ ಇವರು ಯೋಚನೆ ಮಾಡಬೇಕು. ಹಣ ಗಳಿಸುತಾ ಇಲ್ಲ; ಆದ್ದರಿಂದ ನಾನು ಈ ವಿವೇಕದ ಮಾತನಾಡುತಾ ಇದೇನೆ. ಗಳಿಸುತಾ ಇರೋರಿಗೆ ಈ ಸತ್ಯ ಹೊಳೆಯೋದಿಲ್ಲ.”

” ದಂಪತಿಗಳ ನಡುವೆ ಯಾವುದೇ ಬೇಸರ ಇದ್ದರೂ  ಮಕ್ಕಳನ್ನು ಬೆಳೆಸೋ ಹೊಣೆಗೆ ಅಡ್ಡಿ ಆಗಬಾರದು. ಪ್ರೇಮ ಇತ್ತು ಸಮ, ಪ್ರೇಮ ಇಲ್ಲ ಬೇಸರ ಅಂತೂ ಕೂಡದು. ಕಚ್ಚಾಟ ಇಲ್ಲದೆ ಇದ್ದರೂ ಆಯಿತು.”

****************************************************

ಅಂತೂ ವಾರಾಂತ್ಯದ ಓದಿಗೆ ಒಂದು ಉತ್ತಮ ಪುಸ್ತಕ. ನಾನು ಆಕೃತಿಯಲ್ಲಿ ಕೊಂಡಿದ್ದು. ಇತರೇ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿರಬಹುದು.

’ಸುಮ್ ಸುಮ್ನೆ’ ಒಂದು ಮನವಿ

ಸೆಪ್ಟೆಂಬರ್ 16, 2010

  

ಸುಮುಖ ಪ್ರಕಾಶನದ ಮಕ್ಕಳ ಮಾಸಿಕ ಪತ್ರಿಕೆ ’ಸುಮ್ ಸುಮ್ನೆ’

   

“ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ”,  

 “ಟೋಪಿ ಬೇಕೆ ಟೋಪಿ, ಎಂಥ ಟೋಪಿ? ಚಿನ್ನದ ಟೋಪಿ,  

ಎಷ್ಟು ರೂಪಾಯಿ, ನೂರು ರೂಪಾಯಿ, ಬೇಡಾ ಬೇಡಾ,  

ಒಂದು ರೂಪಾಯಿ ಕೊಡು ಕೊಡು”  

ನಮ್ಮ ಬಾಲ್ಯದಲ್ಲಿಯೇ,  ಕಾಸು, ಒಂದು ರೂಪಾಯಿ, ನಮ್ಮ ಇತಿ ಮಿತಿಯಲ್ಲಿರುವುದು ಎಂಬುದನ್ನು  ಉಲ್ಲೇಖಿಸುವಂತೆ ಪದ್ಯಗಳ ಮೂಲಕ ಕಾಸಿನ ಬಗ್ಗೆ ಕಲಿತೆವು.    

ಕಬ್ಬನ್ ಪೇಟೆಯಲ್ಲಿ ಒಂದು ರೂಪಾಯಿಗೆ ದೋಸೆ, ಇಡ್ಲಿ  ದೊರೆಯುತ್ತದೆ ಅನ್ನುವ ವಿಷಯ, ದಿನಪತ್ರಿಕೆ ಅಂತರ್ಜಾಲ ತಾಣಗಳನ್ನೆಲ್ಲ  ಸುತ್ತಿ ಬಳಸಿ ಬಂತು.  

ದಶಕದ ಹಿಂದೆ, ಟೈಮ್ಸ್ ಆಫ್ ಇಂಡಿಯಾ ಒಂದು ರೂಪಾಯಿಗೆ ದಿನ ಪತ್ರಿಕೆ ಆರಂಭಿಸಿ, ಎಲ್ಲ ಪತ್ರಿಕೆಗಳೂ ಈ ಸ್ಪರ್ಧಾತ್ಮಕ ಬೆಲೆಯಲ್ಲಿ ಪತ್ರಿಕೆ ನೀಡುವಂತೆ ಪ್ರೇರೇಪಿಸಿದ್ದಲ್ಲದೆ, ತನ್ನ ಓದುಗರ ಬಳಗವನ್ನು ವ್ಯಾಪಕವಾಗಿ ಹೆಚ್ಚಿಸಿಕೊಂಡಿತು. ಟೈಮ್ಸ್ ಬಳಗದ ಮುಂದೆ ನಮ್ಮದೇ ನಾಡಿನ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕೆ ಭಂಗ ಬರದಿದ್ದಲ್ಲಿ ಸಾಕು ಎಂಬಂತೆ ಕಾರ್ಯ ನಿರ್ವಹಿಸುತ್ತಿವೆ. ಸ್ಪರ್ಧೆಯ ನೆಪವೊಡ್ಡಿ ಎಲ್ಲ ಪತ್ರಿಕೆಗಳೂ ತಮ್ಮ ರೂಪುರೇಷೆಗಳನ್ನು ಬದಲಿಸಿಕೊಂಡಿವೆ.  

 ಇಂತಹ ಸ್ಪರ್ಧಾತ್ಮಕ ಮಾರುಕಟ್ಟೆ ಸಂಸ್ಕೃತಿಯ ನಡುವೆಯೂ ಮೂರೇ ರೂಪಾಯಿಗೆ ದೊರೆಯುತ್ತದೆ ಸುಮುಖ ಪ್ರಕಾಶನದ ’ಸುಮ್ ಸುಮ್ನೆ’ ಎಂಬ ಮಕ್ಕಳ ಮಾಸಿಕ ಪತ್ರಿಕೆ. ಮಕ್ಕಳ ಜ್ಞಾನವಿಕಾಸಕ್ಕಾಗಿ ಕೌತುಕ ಮೂಡಿಸುವ, ಸಾಮಾನ್ಯ ಜ್ಞಾನದ ವಿಷಯಗಳನ್ನು ಸಚಿತ್ರವಾಗಿ ಮೂರೇ ರೂಪಾಯಿಗಳಲ್ಲಿ ಒದಗಿಸುತ್ತಿರುವ ಹೆಗ್ಗಳಿಕೆ ಈ ಪತ್ರಿಕೆಯದ್ದು. ಹೆಚ್ಚಿನ ಪಾಲು ಗ್ರಾಮಾಂತರ ಪ್ರದೇಶಗಳ, ಸರ್ಕಾರಿ ಶಾಲಾ ಮಕ್ಕಳನ್ನೇ ಓದುಗರಾಗಿ ಹೊಂದಿರುವ ಈ ಪತ್ರಿಕೆಗೆ ಸುಮಾರು ಇಪ್ಪತ್ತು  ಸಾವಿರ  ಚಂದಾದಾರರಿದ್ದಾರೆ. ಪ್ರತಿ ಒಂದಕ್ಕೆ ಆರು ರೂಪಾಯಿ ಖರ್ಚು ಬೀಳುವ ಪತ್ರಿಕೆಯನ್ನು ಮೂರೇ ರೂಪಾಯಿಗೆ ಒದಗಿಸಿ ಪತ್ರಿಕೆಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಅನ್ನುತ್ತಾರೆ ಪತ್ರಿಕೆಯ ಸಂಪಾದಕ ನಾರಾಯಣ ಮಾಳ್ಕೋಡ್. ಬೆಲೆಯೇರಿಸಿ ಓದುವ ಮಕ್ಕಳಿಂದ ಪತ್ರಿಕೆಯನ್ನು ದೂರ ಸರಿಸಲು ಮನಸ್ಸಿಲ್ಲ.  ಇದೇ ಬೆಲೆಯಲ್ಲಿ ಎಷ್ಟು ದಿವಸ ಸಾಧ್ಯವೋ ಅಷ್ಟು ದಿವಸ ಪತ್ರಿಕೆಯನ್ನು ಹೊರತರುತ್ತೇನೆ ಅನ್ನುತ್ತಾರೆ.  ಅವರ ಬೆಂಬಲಕ್ಕಿರುವವರು ಅನೇಕ ಸಹೃದಯ ಜಾಹೀರಾತುದಾರರು. ನಿರಂತರವಾಗಿ ಜಾಹೀರಾತುಗಳು ಒದಗಿ ಬಂದಲ್ಲಿ ಮೂರು ರೂಪಾಯಿಗೆ ದೊರೆಯುವ ಸುಮ್ ಸುಮ್ನೆ ಪತ್ರಿಕೆ ಗ್ರಾಮೀಣ ಪ್ರತಿಭೆಗಳ ಜೀವನದಲ್ಲಿ ಜ್ಞಾನದೀಪವನ್ನು ಬೆಳಗಬಹುದು. ಮಾಳ್ಕೋಡ್ ರವರ ಈ ಸಾಹಸದಲ್ಲಿ ನಾವೂ, ನೀವೂ ಕೈ ಜೋಡಿಸೋಣವೇ? ದಯವಿಟ್ಟು ಮಾಳ್ಕೋಡ್ ರವರ ಈ ಮನವಿಯನ್ನು ಓದಿ:  

  ಪ್ರಿಯ ಓದುಗರೇ,  

            ಕನ್ನಡದ ಪುಸ್ತಕಗಳನ್ನು/ಪತ್ರಿಕೆಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹೆಚ್ಚಿನ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುವುದು ಇದಕ್ಕೆ ಒಂದು ಕಾರಣವಿರಬಹುದು. ಹಾಗಂತ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುವ ಮಕ್ಕಳು ಕನ್ನಡದ ಪತ್ರಿಕೆಗಳನ್ನು/ಪುಸ್ತಕಗಳನ್ನು ಓದುವ ಆಸಕ್ತಿ ಇಲ್ಲವೆಂದು ಭಾವಿಸುವಂತಿಲ್ಲ. ಆದರೆ, ಓದಿನಲ್ಲಿ ಅಭಿರುಚಿ  ಹುಟ್ಟಿಸುವಂತಹ ಮಾಹಿತಿ ಮಕ್ಕಳಿಗೆ ಸಿಗದೇ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಮಕ್ಕಳು ಇಷ್ಟಪಡುವಂತಹ, ಆಸಕ್ತಿದಾಯಕ ಹಾಗೊ ಕುತೂಹಲಕರ ಮಾಹಿತಿಗಳನ್ನು ಒಳಗೊಂಡ ಪತ್ರಿಕೆಯನ್ನು ಮಕ್ಕಳು ಬಹಳ ಇಷ್ಟಪಟ್ಟು ಓದುತ್ತಾರೆ ಎಂಬುದಕ್ಕೆ ನಮ್ಮ ಸಂಸ್ಠೆಯಿಂದ ಪ್ರಕಟವಾಗುತ್ತಿರುವ ’ಸುಮ್ ಸುಮ್ನೆ’ ಪತ್ರಿಕೆಯೇ ಸಾಕ್ಷಿ.  

 ಈ ಪತ್ರಿಕೆಯನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಶಾಲಾ ಮಕ್ಕಳು ಓದುತ್ತಾರೆ ಅಷ್ಟೇ ಅಲ್ಲ ಈ ಮಕ್ಕಳ ಪೋಷಕರೂ ಸಹ ಇಷ್ಟಪಟ್ಟು ಓದುತ್ತಿದ್ದಾರೆ. ಪತ್ರಿಕೆಯ ಮಾಲೀಕರು ಪ್ರಸಾರ ಸಂಖ್ಯೆ ಹೆಚ್ಚಿದಷ್ಟೂ ಸಂತೋಷ ಪಡುತ್ತಾರೆ. ಆದರೆ ಪ್ರಸಾರ ಸಂಖ್ಯೆ ಹದಿನೈದು ಸಾವಿರ ಮೀರಿರುವುದಕ್ಕೆ ಸಂತೋಷವಾದರೂ ಇದನ್ನು ನಿಭಾಯಿಸುವುದು ಬಹಳ ಕಷ್ಟವೆಂಬ ಅನುಭವ ಆಗುತ್ತಿದೆ. ಇದಕ್ಕೆ ಕಾರಣ ಈ ಪತ್ರಿಕೆಯ ಬೆಲೆ ಕೇವಲ ಮೂರು ರೂಪಾಯಿ ಆಗಿರುವುದು. ಪತ್ರಿಕೆಯ ಮುದ್ರಣ ಕಾಗದಕ್ಕೂ ಸಹ ಈ ಬೆಲೆ ಸಾಕಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದು. 28 ಪುಟಗಳ ಈ ಪತ್ರಿಕೆಯಲ್ಲಿ 12 ಪುಟಗಳು ಬಹುವರ್ಣದಲ್ಲಿ ಮುದ್ರಿತವಾಗುತ್ತವೆ. ಇದಕ್ಕೆ ಆಗುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ನಿಮ್ಮ ನೆರವನ್ನು ನಿರೀಕ್ಷಿಸುತ್ತಿದ್ದೇವೆ. ನೀವು ನಿಮ್ಮ ಸಂಸ್ಠೆಯ ಜಾಹಿರಾತುಗಳನ್ನು ಅಥವಾ ವೈಯಕ್ತಿಕ ಶುಭ ಸಂದೇಶಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಯಲ್ಲಿ ಸಹಕರಿಸಿ ಎಂಬುದು ನಮ್ಮ ಕೋರಿಕೆ. ನಿಮ್ಮ ಸಹಕಾರ ಲಭಿಸಿದರೆ ಪತ್ರಿಕೆಯ ಬೆಲೆಯನ್ನು ಹೆಚ್ಚಿಸದೆ ಪ್ರಸಾರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ಸಹಸ್ರಾರು ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಮೂಡಿಸಬಹುದು ಎಂಬುದು ನಮ್ಮ ಆಶಯ.  

ತಮ್ಮ ವಿಶ್ವಾಸಿ  

ನಾರಾಯಣ ಮಾಳ್ಕೋಡ್   

 ಸುಮುಖ ಪ್ರಕಾಶನ ಮತ್ತು ಪುಸ್ತಕ ಮಳಿಗೆಯ ವಿಳಾಸ  

ಸುಮುಖ ಡಿಸ್ಟ್ರಿಬ್ಯೂಟರ್ಸ್,    

174E/28, 2ನೇ ಮಹಡಿ, 1ನೇ ಮುಖ್ಯ ರಸ್ತೆ,    

ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ ಗೇಟ್,    

ಬೆಂಗಳೂರು 560023
ನಾರಾಯಣ ಮಾಳ್ಕೋಡ್ ರವರ ದೂರವಾಣಿಯಲ್ಲಿ ಸಂಖ್ಯೆ: 9481454602 

ಚಂದಾದಾರರಾಗಲು ಆಸಕ್ತಿ ಇದೆಯೇ?  ’ಸುಮುಖ ಡಿಸ್ಟ್ರಿಬ್ಯೂಟರ್ಸ್’ ಹೆಸರಿಗೆ ಡಿ.ಡಿ ಅಥವಾ ಮನಿ ಆರ್ಡರ್ ಮೂಲಕ 36 ರೂಪಾಯಿಗಳನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸಿ. 
ನಿಮ್ಮ ಅಂಚೆ ವಿಳಾಸವನ್ನು ನಮೂದಿಸಲು ಮರೆಯದಿರಿ.  ಒಂದು ವರ್ಷ ಕಾಲ ’ಸುಮ್ ಸುಮ್ನೆ’ ಸಂಚಿಕೆಗಳು ನಿಮ್ಮ ಮನೆ ಬಾಗಿಲಿಗೇ ಬಂದು ತಲುಪುತ್ತವೆ.
 
ಸುಮ್ ಸುಮ್ನೆ ಬಗ್ಗೆ ದಟ್ಸ್ ಕನ್ನಡ ತಾಣದಲ್ಲಿ ಪ್ರಸಾದ್ ರವರ ಲೇಖನ ತಮ್ಮ ಗಮನಕ್ಕೆ 

ರಾಜಾಜಿನಗರದಲ್ಲೊಂದು ಉತ್ತಮ ಪುಸ್ತಕ ಮಳಿಗೆ

ಜುಲೈ 14, 2010

ಆಕೃತಿಯಲ್ಲಿ ವಸುಧೇಂದ್ರರ ಪ್ರಬಂಧ ವಾಚನ ಆಲಿಸುತ್ತಿರುವ ಸಭಿಕರು

ಬಸವನಗುಡಿಯಲ್ಲಿ ಅಂಕಿತ ಇದೆ, ಜಯನಗರದಲ್ಲಿ ಖ್ಯಾತವೆನ್ನುವ ಎಲ್ಲಾ ಪುಸ್ತಕ ಮಳಿಗೆಗಳು ಮನೆ ಮಾಡಿವೆ. ಆದರೆ ಇನ್ನೂ ಕನ್ನಡಿಗರ ಊರೇ ಆಗಿರುವ ರಾಜಾಜಿನಗರದಲ್ಲಿ, ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳ ಮಳಿಗೆಗಳು ದಂಡಿಯಾಗಿದ್ದರೂ, ಸಾಹಿತ್ಯಾಸಕ್ತರು ಪುಸ್ತಕಗಳಿಗೆ ಅಕ್ಕ ಪಕ್ಕದ ಬಡಾವಣೆಗಳ ಪುಸ್ತಕ ಮಳಿಗೆಗಳ ಮೊರೆ ಹೋಗಬೇಕಿತ್ತು. ಟ್ರಾಫಿಕ್ ಜಂಜಾಟದಲ್ಲಿ  ಗಾಂಧಿನಗರದ ಸಪ್ನ ಮಳಿಗೆಗೆ ಎಡ ತಾಕುತಿದ್ದ ರಾಜಾಜಿನಗರದ ಸುತ್ತ ಮುತ್ತಣ ನಿವಾಸಿಗಳಿಗೆ ’ಆಕೃತಿ’ಯ ಆಗಮನ ಸಂತಸದ ವಿಷಯ.

 ಸದ್ದು ಗದ್ದಲವಿಲ್ಲದೆ  ಕೆಲವೇ ದಿನಗಳ ಹಿಂದೆಯಷ್ಟೇ ಆರಂಭವಾದ ಆಕೃತಿ ಪುಸ್ತಕ ಮಳಿಗೆಯಲ್ಲಿ ಮೊನ್ನೆ ಭಾನುವಾರ,  ಖ್ಯಾತ ಕತೆಗಾರ ವಸುಧೇಂದ್ರರವರಿಂದ ತಮ್ಮ ಇತ್ತೀಚಿನ ಪುಸ್ತಕ ’ರಕ್ಷಕ ಅನಾಥ’ ದಿಂದ ಒಂದು ಬರಹ ವಾಚನ ಕಾರ್ಯಕ್ರಮವಿತ್ತು. ಮಳಿಗೆಯ ಸ್ಥಾಪಕ ಗುರುಪ್ರಸಾದ್ ಕುಟುಂಬ ವರ್ಗ, ಕೆಲವು ಸ್ನೇಹಿತರಷ್ಟೇ ನೆರೆದಿದ್ದ ಚಿಕ್ಕ ಚೊಕ್ಕ ಕಾರ್ಯಕ್ರಮ. ’ಹೊಸ ಪೀಳಿಗೆಯನ್ನು ಓದಲು ಹಚ್ಚಿದ’ ಲೇಖಕರೆಂದು ಬೊಳ್ವಾರ( ’ತಟ್ಟು ಚಪ್ಪಾಳೆ ಪುಟ್ಟ ಮಗು’ ಪುಸ್ತಕದ ಸಂಪಾದಕ) ರಿಂದ ನಾಮಕರಣಗೊಂಡ ಲೇಖಕ ವಸುಧೇಂದ್ರ ನೆರೆದವರೆಲ್ಲರೊಡನೆಯೂ ಆತ್ಮೀಯವಾಗಿ ಬೆರೆತು ಮುಕ್ತವಾಗಿ ಮಾತನಾಡಿದರು.

ಯಾವುದೇ ದೇಶದ ಜನಸಂಖ್ಯೆಯ 10% ಮಂದಿಯಷ್ಟೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಈಗೀಗ ಓದುಗರು ಹೆಚ್ಚಾಗುತ್ತಿದ್ದಾರೆ ಅದು ಸಂತಸದ ವಿಷಯವೆಂದ ವಸುಧೇಂದ್ರ, ಐ.ಟಿ ಉದ್ಯೋಗ ತೊರೆದು ಪುಸ್ತಕ ಪ್ರಕಾಶನ, ಮಾರಾಟ  ಉದ್ಯಮಕ್ಕೆ ಕಾಲಿಟ್ಟಿರುವ ಗುರುಪ್ರಸಾದ್ ರವರಿಗೆ ಶುಭ ಹಾರೈಸಿದರು.

ಬೆಂಗಳೂರಿನ ಮಕ್ಕಳ ಕನ್ನಡ ಭಾಷಾ ಪ್ರಭುತ್ವ ಅಂಗಡಿಯ ಬೋರ್ಡ್ ಓದಲಿಕ್ಕಷ್ಟೇ ಸೀಮಿತವೆಂದ ಅಭಿಪ್ರಾಯಕ್ಕೆ ಉತ್ತರವಾಗಿ, ಆಂಗ್ಲ ಭಾಷೆಯಾದರೂ ಸರಿ, ಪುಸ್ತಕ ಓದುವ ಅಭಿರುಚಿಯಿದ್ದಲ್ಲಿ, ಕನ್ನಡ ಕೃತಿಗಳನ್ನು ತರ್ಜುಮೆ ಮಾಡಿಯಾದರೂ ಸರಿ ಅವರಿಗೆ ತಲುಪಿಸಬಹುದಲ್ಲ ಎಂದರು ಆಶಾವಾದಿ ವಸುಧೇಂದ್ರ.

ಮನೆಯಲ್ಲಿ ತಾತನ ಕಾಲದಿಂದಲೂ ಇರುವ ದೇವರ ಪಟಗಳನ್ನು ಏನು ಮಾಡಬೇಕೆಂದು ತೋರದ ಧರ್ಮ ಸಂಕಟದಲ್ಲಿ ನೀವಿದ್ದಲ್ಲಿ, ವಸುಧೇಂದ್ರರ ’ರಕ್ಷಕ ಅನಾಥ” ಪುಸ್ತಕವನ್ನು ಓದಿ. ಸಮರ್ಪಕ ಉತ್ತರವನ್ನು ನೀಡುತ್ತದೆ ಅವರ ಲಲಿತ ಪ್ರಬಂಧ ’ರಕ್ಷಕ ಅನಾಥ’. ಹಿರಿಯರು ನೂರು ವರ್ಷ ಬಾಳಿ ಬದುಕಿದ ಬಳ್ಳಾರಿಯ ಮನೆಯಲ್ಲಿದ್ದ ಇನ್ನೂರಕ್ಕೂ ಮಿಕ್ಕ ದೇವರ ಪಟಗಳನ್ನು, ಬೆಂಗಳೂರಿನ ಆಧುನಿಕ ಜೀವನ ಶೈಲಿಗೆ ಹೊಂದುವ ಹಾಗೆ ಕಾಪಾಡಿಗೊಂಡ ಬಗೆಯ ಕುರಿತ ಹಾಸ್ಯ ಲೇಖನ ಎಲ್ಲರಿಗೂ ಮೆಚ್ಚುಗೆಯಾಗಿದ್ದಲ್ಲದೆ, ಸಭಿಕರಲ್ಲೊಬ್ಬರು ಅವರ ಮನೆಯಲ್ಲಿರುವ ರವಿವರ್ಮನ ಕಲಾಕೃತಿಗಳನ್ನು ರಕ್ಷಿಸುವ ಉಪಾಯ ಹೇಳಿಕೊಟ್ಟ ವಸುಧೇಂದ್ರರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಗುರುಪ್ರಸಾದ್ ರವರ ಸಾಹಿತ್ಯಾಭಿರುಚಿಯನ್ನು ಬಿಂಬಿಸುವ,  ಅಚ್ಚುಕಟ್ಟಾಗಿ ಜೋಡಿಸಿರುವ ಪುಸ್ತಕಮಳಿಗೆಗೊಮ್ಮೆ ಭೇಟಿ ಕೊಡಿ. ಬಹುತೇಕ ಜನಪ್ರಿಯ ಪುಸ್ತಕಗಳೆಲ್ಲವೂ ಅಲ್ಲಿವೆ. ಡಿ.ವಿ.ಜಿ ಯವರ ಜ್ಞಾಪಕ ಚಿತ್ರಶಾಲೆ, ಬಿ.ಜಿ.ಎಲ್ ಸ್ವಾಮಿಯವರ ಹಸಿರು ಹೊನ್ನು, ತೇಜಸ್ವಿ, ಕುವೆಂಪು, ಕಾರಂತ, ಭೈರಪ್ಪನವರ ಸಮಗ್ರ ಕೃತಿಗಳು, ಸ್ವಪ್ನ ಸಾರಸ್ವತ, ವೈದೇಹಿಯವರ ಕ್ರೌಂಚಪಕ್ಷಿಗಳು, ರವಿ ಬೆಳಗೆರೆ, ಜೋಗಿ, ಪ್ರತಾಪ ಸಿಂಹ, ಆರ್. ಕೆ ನಾರಾಯಣ್ ರವರ ಕೃತಿಗಳ ಕನ್ನಡ ಅನುವಾದ, ಎಲ್ಲರ ಕೃತಿಗಳು ಲಭ್ಯ ಇಲ್ಲಿ.  ತೇಜಸ್ವಿಯವರು ತೆಗೆದ ಛಾಯಾ ಚಿತ್ರಗಳ ಸಂಕಲನದ ಪುಸ್ತಕ ಅದರ ಹೆಚ್ಚಿನ ಬೆಲೆಯನ್ನು ಸೂಚಿಸುವಂತೆ  ಕಪಾಟಿನ ಮೇಲ್ಗಡೆ ಸ್ಥಾನ ಆಕ್ರಮಿಸಿತ್ತು. ಛಂದ ಪುಸ್ತಕಗಳಿಗೆಂದೇ ಒಂದು ಕಪಾಟು ಮೀಸಲಾಗಿದೆ.

ನಮ್ಮ ಮನೆಯ ಮಕ್ಕಳಿಗೆ ಕನ್ನಡ ಚೆನ್ನಾಗಿ ಓದಲು ಬರುವುದಿಲ್ಲವೆಂಬ ಬೇಸರ ಬೇಡ. ಪಂಚತಂತ್ರ, ಅಮರ ಚಿತ್ರಕಥೆ ಇನ್ನಿತರೆ ಚಿತ್ತಾಕರ್ಷಕ ಚಿತ್ರಗಳನ್ನು ಹೊಂದಿದ ಮಕ್ಕಳ ಪುಸ್ತಕಗಳು ಲಭ್ಯವಿವೆ.  ಈಗಿನ ಪೀಳಿಗೆಯವರ ನಾಡಿ ಮಿಡಿತವನ್ನರಿತಿರುವ ಗುರು, ಅವರಿಗೆಂದೇ ಜೆಫ್ರಿ ಆರ್ಚರ್, ಸ್ಟೆಫಿನಿ ಮೆಯರ್ ಪುಸ್ತಕಗಳನ್ನು ಕಣ್ಣಿಗೆ ಕಾಣುವಂತೆ ಇಟ್ಟಿದ್ದಾರೆ. ಪುಸ್ತಕ ಕೊಳ್ಳುವುದು ಮಾತ್ರವಲ್ಲ, ಬೇಕೆಂದಲ್ಲಿ ಅಲ್ಲಿಯೇ ಕುಳಿತು ಓದಲು ಬೀನ್ ಬ್ಯಾಗ್ ಗಳಿವೆ.  ಬಿಡುವಿನ ಸಮಯದಲ್ಲೊಮ್ಮೆ ಭೇಟಿ ಕೊಡಿ.

ಮಳಿಗೆಗೆ ಹತ್ತಿರದಲ್ಲೇ,  ಎಮ್. ಟಿ. ಆರ್  ಮೊಮೆಂಟ್ಸ್ ನಲ್ಲಿ ದೋಸೆ, ಕಾಫಿ ಸೇವನೆಯೂ ಆಗಬಹುದು, ಖಾರ ಭರಿತ ಚಾಟ್ಸ್, ಜೋಳದ ರೊಟ್ಟಿ, ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನು … . .ಈಗಾಗಲೇ ಗೊತ್ತಾಗಿರಬಹುದು ಯಾವುದೀ ರಸ್ತೆ ಎಂದು. ರಾಜಾಜಿನಗರದ ಭಾಷ್ಯಂ ಸರ್ಕಲ್ ಮತ್ತು ಇ. ಎಸ್. ಐ ಆಸ್ಪತ್ರೆಯ ನಡುವಿನ ರಸ್ತೆ ಇದು.

ಆಕೃತಿ ಪುಸ್ತಕ ಮಳಿಗೆಯ ವಿಳಾಸ:

ಆಕೃತಿ ಬುಕ್ಸ್
ನಂ. 31/1, 12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010 

ಗುರುತು: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹತ್ತಿರ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ಅಂತರ್ಜಾಲ ಮಳಿಗೆ: http://akrutibooks.com/

(ಫೋಟೋ ಕೃಪೆ: ಗುರುಪ್ರಸಾದ್)