Archive for the ‘ಸಾಹಿತ್ಯ’ Category

ಆಕೃತಿಯಂಗಳದಲ್ಲಿ ಸಂಗೀತ-ಸಾಹಿತ್ಯ ಸಮ್ಮಿಲನ

ಜನವರಿ 23, 2013

ಆಕೃತಿಯಂಗಳದಲ್ಲಿ ಗಾನ ಕಲಾ ಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭ

‘ನೋಡ್ತಾ ಇರಿ ನಾವೇನು ಮಾಡ್ತೀವಿ ಅಂತ’ ಎಂದು ಘೋಷಣೆ ಮಾಡದೆಯೇ ವಿಭಿನ್ನ ರೀತಿಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ  ಆಕೃತಿಯ ಗುರುಪ್ರಸಾದ್ ಅವರು.

ಜಿ.ವಿ, ಜಿ. ಎನ್. ಮೋಹನ್, ಚಂದ್ರಶೇಖರ ಕಂಬಾರ, ವಸುಧೇಂದ್ರ, ಗೋಪಾಲಕೃಷ್ಣ ಪೈ, ಕುಂ, ವೀ,  ಹೀಗೆ ಹತ್ತು ಹಲವು ಸಾಹಿತಿಗಳು ಆಕೃತಿಯ ಅಂಗಳದಲ್ಲಿ ಮನ ಬಿಚ್ಚಿ, ಓದುಗರೊಡನೆ ನೇರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಓದುಗ ಮತ್ತು ಸಾಹಿತಿಗಳ ಮುಖಾಮುಖಿಗೆ ಸೇತುವಾಗಿರುವುದು ಆಕೃತಿ.

ಹೊಸವರ್ಷದಲ್ಲಿ ಪ್ರತಿ ವಾರವೂ ತಪ್ಪದೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವ ಗುರು, ಮೊನ್ನೆ ವಿದ್ವಾನ್ ಆರ್.ಕೆ. ಪದ್ಮನಾಭ ಅವರೊಡನೆ ಸಂವಾದ ಹಮ್ಮಿಕೊಂಡಿದ್ದರು. ಸಂಗೀತಕ್ಕೂ ಸಾಹಿತ್ಯಕ್ಕೂ ಎತ್ತಣ ಸಂಬಂಧ ಅಂದುಕೊಂಡೇ ಕಾರ್ಯಕ್ರಮಕ್ಕೆ ಹೋದಾಗ ತಿಳಿಯಿತು ಕೇವಲ ಸಂಗೀತ ಸಂಯೋಜನೆಯಷ್ಟೇ ಅಲ್ಲ, ಸಂಗೀತ ಗುರುಗಳು ಸಾಹಿತ್ಯದಲ್ಲೂ ಕೃತಿಗಳನ್ನು ಹೊರತಂದಿದ್ದಾರೆ ಎಂದು.

ಸಂಗೀತದ ಮೂಲಕವಷ್ಟೇ ಕಲಾವಿದರನ್ನು ಕಾಣುವ ಅವಕಾಶವಿರುವ ನಮಗೆ, ಇಲ್ಲಿನ ಆತ್ಮೀಯ, ಸ್ನೇಹಮಯ ವಾತಾವರಣದಲ್ಲಿ ಪದ್ಮನಾಭ ಅವರೊಡನೆ ನೇರಾ ನೇರ ಮಾತನಾಡಲು ಒಂದು ಸದವಕಾಶ ಲಭ್ಯವಾಗಿತ್ತು.

ಅಂದಿನ ಸಂವಾದದ ಬಹುತೇಕ ಅಂಶಗಳು ಪ್ರಜಾವಾಣಿಯ ಈ ಲೇಖನ ಒಳಗೊಂಡಿದೆ: https://www.facebook.com/photo.php?fbid=594398280575503&set=a.104307042917965.9918.100000160081137&type=1&theater

ಉಳಿದಂತೆ, ಪ್ರೇಕ್ಷಕರ ಜೊತೆ ಮನ ಬಿಚ್ಚಿ ಮಾತನಾಡಿದ ಗುರು ಪದ್ಮನಾಭ ಅವರ ಮಾತುಕತೆಯ ಕೆಲವು ತುಣುಕುಗಳು ಹೀಗಿವೆ:

“ಸಂಸ್ಕಾರವೆಂಬುದು ಹುಟ್ಟಿನಿಂದ, ಜಾತಿಯಿಂದ  ಬರುವಂತಹದ್ದಲ್ಲ. ವ್ಯಕ್ತಿ ಬೆಳೆಯುವ ಹಾದಿಯಲ್ಲಿ ಮೈಗೂಡಿಸಿಕೊಳ್ಳುವಂಥದ್ದು. ಒಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಕಷ್ಟ ಎನ್ನುವ ಭಾವನೆ ಮನದಲ್ಲಿದ್ದರೆ ಓದು ಒಲಿಯುವುದಿಲ್ಲ. ಪ್ರಯತ್ನಪೂರ್ವಕವಾಗಿ ಸ್ವಲ್ಪ ಸ್ವಲ್ಪವಾಗಿ ಓದುವುದರಲ್ಲಿ ತೊಡಗಿಸಿಕೊಂಡರೆ ಅದು ತಾನೇ ತಾನಾಗಿ ಹವ್ಯಾಸವಾಗುತ್ತದೆ. ಅಂತೆಯೇ ಸಂಗೀತ ಕೇಳುವುದಕ್ಕಾಗಲಿ, ಹಾಡುವುದಕ್ಕಾಗಲಿ ಬೇಕಿರುವುದು ಆಸಕ್ತಿ. ನನ್ನ ಅರಿವಿಗೆ ನಿಲುಕದ್ದು ಎಂದು ದೂರವಿಟ್ಟರೆ ಅದು ದೂರವೇ ನಿಲ್ಲುತ್ತದೆ. ಬದಲಿಗೆ ಸಂಗೀತ ಕಛೇರಿಗಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡರೆ ಸಂಸ್ಕಾರ ತಾನೇ ಬರುತ್ತದೆ.

ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಎಂದು ವರ್ಗೀಕರಣ ಮಾಡುವ ಬದಲು ಭಾರತೀಯ ಸಂಗೀತ ಎಂದು ಕರೆಯುವುದು ಸೂಕ್ತ. ಅದು ಹೆಚ್ಚು, ಇದು ಹೆಚ್ಚು ಎಂಬ ತುಲನೆ ಅನಗತ್ಯ. ಆಯಾ ಪ್ರದೇಶದ, ಅಂದಿನ ಕಾಲಸ್ಥಿತಿಗಳಿಗನುಗುಣವಾಗಿ, ಸಂಗೀತೋಪಾಸಕರ ಪೋಷಣೆಯಿಂದ ಎರಡೂ ಪ್ರಾಕಾರಗಳು ಬೆಳೆದು ಬಂದಿವೆ.

ಕಲಾವಿದರು ಯಾವುದಾದರೊಂದು ಪ್ರಾಕಾರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಬೇಕು. ಕರ್ನಾಟಕ, ಹಿಂದೂಸ್ಥಾನಿ ಸಂಗೀತ ಎರಡರಲ್ಲೂ ಕಛೇರಿ ನೀಡುವುದು ತರವಲ್ಲ.

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಪುರಂದರದಾಸರ ಕಾಣಿಕೆ ಅಪರಿಮಿತ. ಸಂಗೀತಕ್ಕೊಂದು ವ್ಯಾಕರಣ, ನಿಗದಿತ ಅಭ್ಯಾಸ ಸೂಚಿಯನ್ನು ಸಿದ್ಧಪಡಿಸಿದ ಹೆಗ್ಗಳಿಕೆ ಅವರದ್ದು. ನಾಲ್ಕು ಲಕ್ಷದ ಮುವ್ವತ್ತು ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ದಾಸರ ಕೃತಿಗಳು ಇಂದಿಗೂ ಪ್ರಸ್ತುತ.

ಸ್ವರ ನೀಡುವ ಅನುಭೂತಿ ಒಂದು ಮಟ್ಟದ್ದಾದರೆ, ಸ್ವರದ ಜೊತೆ ಸಾಹಿತ್ಯವೂ ಮಿಳಿತಗೊಂಡಲ್ಲಿ ಕೇಳುಗನಲ್ಲಿ ಮೂಡುವ ಅನುಭೂತಿ ಮೇಲ್ಮಟ್ಟದ್ದು, ಮನಸ್ಸಿಗೆ ಮುಟ್ಟುವಂಥದ್ದು. ವೈಯಕ್ತಿಕ ನೆಲೆಯಲ್ಲಿ ಸಂಪ್ರದಾಯವನ್ನು ಪಾಲಿಸುವುದು ಅವರವರ ಇಚ್ಛೆ. ಆದರೆ ಸಂಗೀತ ಕಲಿಯುವಾಗ, ಅದಕ್ಕೆ ನೀತಿ ನಿಯಮಗಳಿವೆ. ಅದನ್ನು ಪಾಲಿಸಲೇಬೇಕು. ಒಂದು ನಿರ್ದಿಷ್ಟ ಪಥವಿದೆ. ಅದರಲ್ಲಿಯೇ ನಡೆಯಬೇಕು.

ಯಾವುದೋ ಕಾಲದಿಂದ ಸಾಹಿತ್ಯದ ಅಪಭ್ರಂಶವನ್ನು ಹಾಡುತ್ತಾ ಬಂದಿದ್ದಾರೆ ಅನ್ನುವ ಕಾರಣಕ್ಕೆ ಈಗ ನಾವು ಸಾಹಿತ್ಯವನ್ನು ಸರಿಪಡಿಸಿ ಹಾಡಬಾರದೆಂಬ ಯಾವ ಕಟ್ಟುಪಾಡೂ ಇಲ್ಲ. ಸರಿಪಡಿಸಿ ಹಾಡುವುದರಲ್ಲಿದೆ ಕಲಾವಿದನ ಗರಿಮೆ. ಸರಿಯಾದ ಕೆಲಸ ಮಾಡುವಾಗ ಯಾರಿಗೂ ಹೆದರಬೇಕಿಲ್ಲ. ನಮ್ಮ ನಮ್ಮ ಅಂತಃಚಕ್ಷುಗಳಿಗೆ ಉತ್ತರದಾಯಿಗಳಾಗಿದ್ದಲ್ಲಿ ಸಾಕು.

ಕ್ರಿಯೆಗಳಿಗೆ ಪ್ರಾಧಾನ್ಯತೆ ನೀಡುವುದರ ಬದಲು ಯಾವುದೇ ಆಚರಣೆಯ ಉದ್ದೇಶವನ್ನು ಅರಿತುಕೊಂಡು ಅದರಲ್ಲಿ ನಂಬಿಕೆಯಿದ್ದಲ್ಲಿ ಮಾತ್ರ ಆಚರಿಸಬೇಕು. ತೋರಿಕೆಯ ಬಾಹ್ಯ ಕ್ರಿಯೆಗಷ್ಟೇ ಸೀಮಿತವಾಗಿದಲ್ಲಿ ಯಾವುದೇ ಆಚರಣೆಯ ಅವಶ್ಯಕತೆಯಿಲ್ಲ.

ಕಲೆಯ ಮೂಲ ಉದ್ದೇಶ ಸಮಾಜ ಸುಧಾರಣೆ. ಸಂಗೀತದ ಮೂಲಕ ತಮ್ಮ ಪರಿಮಿತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದೇನೆ ಅನ್ನುವ ಖುಷಿ ತಮ್ಮದು.

ಖ್ಯಾತನಾಮರ ವೈಯಕ್ತಿಕ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾಗಲೇಬೇಕೆಂದೇನಿಲ್ಲ.  ಸರಿಯಲ್ಲವೆನಿಸಿದ್ದನ್ನು ನೇರವಾಗಿ ಹೇಳುವ ಧೈರ್ಯ ಎಲ್ಲರಿಗೂ ಇರಬೇಕು.

  • ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ಸ್ಠಳೀಯ ಪ್ರತಿಭೆಗಳಿಗೆ ಸೂಕ್ತ ಮನ್ನಣೆ ದೊರೆಯುತ್ತಿದೆಯೇ? 

ನಗರದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ದುರ್ಲಭ. ತಮಿಳುನಾಡಿನ ಕಲಾವಿದರಿಗೆ ಹೆಚ್ಚು ಮಾನ್ಯತೆ ತಮ್ಮ ಗಮನಕ್ಕೂ ಬಂದಿದೆ.  ಹೆಚ್ಚುತ್ತಿರುವ ವ್ಯಾಪಾರೀಕರಣದ ಕಬಂಧ ಬಾಹು ಕಲಾ ಜಗತ್ತನ್ನೂ ಹೊರತು ಪಡಿಸಿಲ್ಲ. ತಮಿಳುನಾಡಿನ ಕಲಾವಿದರನ್ನು ಆಹ್ವಾನಿಸಿದರೆ ಪ್ರಾಯೋಜಕರು ಸುಲಭವಾಗಿ ದೊರೆಯುತ್ತಾರೆಂಬ ಕಾರಣಕ್ಕೆ ಅಲ್ಲಿನ ಕಲಾವಿದರಿಗೆ ಇಲ್ಲಿ ಸುಲಭವಾಗಿ ಕಛೇರಿಗಳು ದೊರೆಯುತ್ತವೆ. ಉತ್ತಮ ಕಛೇರಿಯನ್ನು ನಡೆಸಿಕೊಡಬಲ್ಲ ಸ್ಥಳೀಯ ಯುವ ಪ್ರತಿಭೆಗಳಿವೆ ಆದರೆ ಸೂಕ್ತ ವೇದಿಕೆ ದೊರೆಯುತ್ತಿಲ್ಲ. ಇದು ಖಂಡಿತಾ ಬದಲಾಗಬೇಕು.  ಆದರೆ ತಮಿಳುನಾಡಿನಲ್ಲಿ ಕನ್ನಡದ ಕಲಾವಿದರಿಗೆ ಮನ್ನಣೆ ದೊರೆಯುವುದು ಬಹುತೇಕ ಶೂನ್ಯ. ಇದುವರೆಗೂ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ತಾವು ಕಾರ್ಯಕ್ರಮ ನೀಡಿಲ್ಲ. ಆಯೋಜಕರ ಬೆಂಬತ್ತಿ ಕಾರ್ಯಕ್ರಮ ಪಡೆಯುವ ತುರ್ತು ತಮಗಿಲ್ಲ. ಕರ್ನಾಟಕದ ಸಂಗೀತೋಪಾಸಕರ ಪ್ರೋತ್ಸಾಹವೇ ಸಾಕು.

  • ಕರ್ನಾಟಕ ಸಂಗೀತ ಕಾರ್ಯಕ್ರಮಗಳಲ್ಲಿ ಕನ್ನಡ ಕೃತಿಗಳು  

ಕರ್ನಾಟಕದಲ್ಲಿ ಕನ್ನಡ ಕೃತಿಗಳನ್ನು ಹಾಡಲು ಪ್ರಾಮುಖ್ಯತೆ ಕೊಡಬೇಕು. ತಮಿಳುನಾಡಿನಲ್ಲಿ ಹೇಗೆ ಪರಸ್ಠಳದ ಕಲಾವಿದರೂ ತಮಿಳು ಕೃತಿಗಳನ್ನೇ ಹಾಡಲೆಂದು ಅಪೇಕ್ಷೆ ಪಡುತ್ತಾರೋ ಹಾಗೆಯೇ ನಾವೂ ಇಚ್ಛೆ ಪಡುವುದರಲ್ಲಿ ತಪ್ಪೇನಿಲ್ಲ. ಕನ್ನಡ ಕೃತಿಗಳಿಗೆ ಮನ್ನಣೆ ದೊರೆಯಬೇಕು. ವಚನ, ಮಂಕುತಿಮ್ಮನ ಕಗ್ಗ ಎಲ್ಲವನ್ನೂ ಕರ್ನಾಟಕ ಸಂಗೀತದ ಮೂಲಕ ಹಾಡಬಹುದು. ಮೈಸೂರಿನಲ್ಲಿ ಎರಡು ಗಂಟೆಗಳ ಕಾಲ ವಚನ ಗಾಯನವನ್ನೇ ಪ್ರಸ್ತುತ ಪಡಿಸಿದ್ದೇನೆ.

  • ಕನ್ನಡ ಚಲನಚಿತ್ರಗಳಲ್ಲಿ ಕರ್ನಾಟಕ ಸಂಗೀತದ ಬಳಕೆ

ಸಂಗೀತಗಾರನ  ಜೀವನದ ಮೇಲೆ ರೂಪುಗೊಂಡ ‘ಹಂಸಗೀತೆ’ ಕೃತಿಯಾಗಿ ಗೆದ್ದರೂ ಚಲನಚಿತ್ರವಾಗಿ ಸೋತಿದೆ. ಭೈರವಿ ರಾಗದ ಗಾಢತೆಯನ್ನು ನೋಡುಗನ ಮನದಲ್ಲಿ ಮೂಡಿಸಲು ಸೋತಿದೆ.  ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದ್ದು ತ.ರಾ.ಸು ಅವರ ‘ಹಂಸಗೀತೆ’ ಕೃತಿ. ಅದರ ಫಲಶೃತಿಯೇ ತಮ್ಮ ‘ಅನಂತನಾದ’ ಕಾದಂಬರಿ.

  • ಎಸ್. ಎಲ್.  ಭೈರಪ್ಪನವರ ಮಂದ್ರದ ಬಗ್ಗೆ ನಿಮ್ಮ ಅಭಿಪ್ರಾಯ

ಒಂದು ಕಾದಂಬರಿ, ಕರ್ತೃವಿಗಿಂತ ಹೆಚ್ಚು ಓದುಗನನ್ನು ಕಾಡುತ್ತದೆ. ಅನೇಕರ ಮನವನ್ನು ತಟ್ಟುವ ಶಕ್ಯತೆ ಇರುವ ಕೃತಿಗೆ ಸಾಮಾಜಿಕ ಬದ್ಧತೆಯೂ ಅವಶ್ಯಕ. ಋಣಾತ್ಮಕ ಚಿಂತನೆಗಳನ್ನೇ ಮುಂದು ಮಾಡಿದಲ್ಲಿ, ಅದೇ ಸಾರ್ವಕಾಲಿಕ ಸತ್ಯವೆಂಬ ಅಭಿಪ್ರಾಯ ಓದುಗನಲ್ಲಿ ಮೂಡುತ್ತದೆ. ನ್ಯೂನತೆಗಳಿಲ್ಲದ ವ್ಯಕ್ತಿಯಿಲ್ಲ. ಆದರೆ ಅದನ್ನೇ ಎತ್ತಿ ಹಿಡಿಯದೆ, ವ್ಯಕ್ತಿಯ ಉತ್ತಮ ಗುಣಗಳನ್ನು, ಸಾಧನೆಯನ್ನು ಬೆಳಕಿಗೆ ತರುವುದು ಸೂಕ್ತ.  ಅಂತೆಯೇ ಭೈರಪ್ಪನವರ ‘ಮಂದ್ರ’ ಸಾಹಿತ್ಯಿಕ ಕೃತಿಯಾಗಿ ಉತ್ತಮ ಕೃತಿ. ಆದರೆ ಒಬ್ಬ ಸಂಗೀತಗಾರನಾಗಿ ತಾನು ಅದನ್ನು ಉತ್ತಮ ಕೃತಿಯೆನ್ನಲು ಸಾಧ್ಯವಿಲ್ಲ. ಸಂಗೀತಗಾರನ ಸಾಧನೆ, ಶ್ರೇಷ್ಟತೆ, ಸಂಗೀತದ ಮಹತ್ತಿನ ಬದಲು ಸಂಗೀತಗಾರನ ವ್ಯಸನಗಳೇ ಪ್ರಮುಖವೆಂಬಂತೆ ಬಿಂಬಿಸಲಾಗಿದೆ.  ಓದುಗನ ಮನದಲ್ಲಿ ಮಂದ್ರದ ಛಾಪು ಮೂಡುವ ಬದಲು ವ್ಯಕ್ತಿಯ ವ್ಯಸನಗಳೇ ಆಕ್ರಮಿಸುತ್ತವೆ. ಆ ದೃಷ್ಟಿಯಿಂದ ಅದು ಮೇರು ಕೃತಿಯೆನ್ನಲು ಮನಸ್ಸು ಒಪ್ಪುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ.

  • ಯಾವ ಯಾವ ರಾಗ ಯಾವ ರಸ ಭಾವವನ್ನು ವ್ಯಕ್ತಪಡಿಸಲು ಸೂಕ್ತ? 

ನವರಸಗಳನ್ನು ಯಾವುದೇ ರಾಗದಲ್ಲೂ ವ್ಯಕ್ತಪಡಿಸಬಹುದು. ರಸಕ್ಕೂ ರಾಗಕ್ಕೂ ಅನುಬಂಧವೇನಿಲ್ಲ.

  • ನಿಮ್ಮ ಮೆಚ್ಚಿನ ಸಂಗೀತಗಾರರು ಯಾರು? 

ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ತಾವು ಇಷ್ಟಪಡುವ ಸಂಗೀತಗಾರ.

  • ಕೊನೆಯ ಮಾತು

ಪರಸ್ಥಳಗಳಲ್ಲಿ ದೊರೆಯುವ ಹಣ, ಮನ್ನಣೆಗಳಿಗಿಂತ, ಬಿರುದು, ಬಾವಲಿಗಳಿಗಿಂತ, ಕನ್ನಡ ನಾಡಿನ ಸಂಗೀತಾಭಿಮಾನಿಗಳ ಪ್ರೀತಿ, ಗೌರವ ಬೆಲೆಬಾಳುವಂತಹದ್ದು. ಕನ್ನಡಿಗನಾಗಿರುವುದು ನನ್ನ ಹೆಮ್ಮೆ. ಘಳಿಗೆಗೊಮ್ಮೆ ಗಢಿಯಾರ ನೋಡುತ್ತ ಯಾವಾಗ ಮುಗಿಸುತ್ತಾರೋ ಎಂದು ಆಯೋಜಕರು ಇದಿರು ನೋಡುವ ಕಛೇರಿಗಳಿಗಿಂತ, ಪುಸ್ತಕಾಲಯದಲ್ಲಿ ನೆರೆದಿರುವ ನಿಜವಾದ ಅಭಿಮಾನಿಗಳ ಜೊತೆ ಮನ ಬಿಚ್ಚಿ ಮಾತನಾಡಲು ದೊರೆತ ಅವಕಾಶ ತಮಗೆ ಅತ್ಯಮೂಲ್ಯವಾದದ್ದು. ”

ಇವಿಷ್ಟು ನನ್ನ ನೆನಪಿಗೆ ನಿಲುಕಿದ್ದು. ಇಂತಹ ಒಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ಆಕೃತಿ ತಂಡಕ್ಕೆ ಧನ್ಯವಾದಗಳು.

ಗಾನ ಕಲಾ ಭೂಷಣ ಆರ್. ಕೆ. ಪದ್ಮನಾಭ ಅವರ ಕಛೇರಿಯ ಒಂದು ತುಣುಕು ಇಲ್ಲಿದೆ (ಅವರ ಶಿಷ್ಯ ಕಾರ್ತಿಕ್ ಹೆಬ್ಬಾರ್ ಅವರ ಸಂಗ್ರಹದಿಂದ) : http://www.youtube.com/watch?v=3OUtyiis0_Q

Advertisements

ಕುಮಾರವ್ಯಾಸ ಮಂಟಪದಲ್ಲಿ ಕುಮಾರವ್ಯಾಸ ಜಯಂತಿ

ಜನವರಿ 21, 2013
ಕುಮಾರವ್ಯಾಸ ಜಯಂತಿ (ಕುಮಾರವ್ಯಾಸ ಮಂಟಪ, ರಾಜಾಜಿನಗರ)

ಕುಮಾರವ್ಯಾಸ ಜಯಂತಿ (ಕುಮಾರವ್ಯಾಸ ಮಂಟಪ, ರಾಜಾಜಿನಗರ)

ಪ್ರತಿ ಭಾರಿಯೂ ಶನಿವಾರ, ಭಾನುವಾರಗಳು ಇನ್ನೂ ಸ್ವಲ್ಪ ಧೀರ್ಘವಾಗಿದ್ದರೆ ಚೆನ್ನಾಗಿತ್ತು ಅನಿಸುವ ಹಾಗೆ, ತುಸು ಧಾವಂತದಲ್ಲಿಯೇ ಮುಗಿದು ಹೋಗಿರುತ್ತವೆ. ಕಳೆದ ಶನಿವಾರವೂ ಹಾಗೇ. ಮಗಳ ಶಾಲೆಯಲ್ಲಿ ಕ್ರೀಡಾ ದಿನಾಚರಣೆ, ಎಲ್. ಐ.ಸಿ ಪ್ರೀಮಿಯಂ ಅದೂ ಇದೂ ಅಂತ ಓಡಾಟ ಮುಗಿದ ಮೇಲೆ, ಸಂಜೆಗೆ ಇದ್ದ ಕಾರ್ಯಕ್ರಮ ಕುಮಾರ ವ್ಯಾಸ ಜಯಂತಿ. ರಾಜಾಜಿನಗರದ ಆಸು ಪಾಸಿನಲ್ಲೇ ಹತ್ತಾರು ವರ್ಷಗಳನ್ನು ಕಳೆದಿದ್ದರೂ ಕುಮಾರ ವ್ಯಾಸ ಮಂಟಪಕ್ಕೆ ಎಂದೂ ಹೋಗಿರಲಿಲ್ಲ. ವಸುಧೇಂದ್ರ ಮುಖ್ಯ ಅತಿಥಿ, ಕಾರ್ಯಕ್ರಮದ ಆಯೋಜಕರು ಸ್ನೇಹಿತನ ತಾಯಿ ಅನ್ನುವ ಎರಡೆರಡು ಕಾರಣಗಳು ಸೇರಿ ಸ್ಥಳ ಹುಡುಕಿಕೊಂಡು ಹೊರಟೆ. ರಾಮ ಮಂದಿರದ ಹತ್ತಿರ ನಿಂತು ಯಾರ ಹತ್ತಿರ ಕೇಳುವುದು ವಿಳಾಸ ಅಂದುಕೊಳ್ಳುತ್ತಿರುವಾಗ, ಅನ್ನುತ್ತಿರುವಾಗ ಕೈಚೀಲದಲ್ಲಿ ತರಕಾರಿ, ಹಣ್ಣುಗಳನ್ನು ಹಿಡಿದು ಸಾಗುತ್ತಿದ್ದ ಹಿರಿಯ ಮಹಿಳೆಯೊಬ್ಬರನ್ನು ಕೇಳಿದೆ. ಮೇಡಂ ಇಲ್ಲಿ ಕುಮಾರ ವ್ಯಾಸ ಮಂಟಪ ಎಲ್ಲಿ ಬರುತ್ತೆ ಅಂತ. ಅವರು ಯೋಚನೆಗಿಳಿದರು. ಕೈಯಲ್ಲಿ ಭಾರ ಹಿಡಿದಿರುವ ಅವರಿಗೆ ದಾರಿಯಲ್ಲಿ ನಿಲ್ಲಿಸಿ ನಾನು ಸುಮ್ಮನೆ ತೊಂದರೆ ಕೊಡ್ತಾ ಇದ್ದೀನಲ್ಲ ಅಂದುಕೊಂಡು, ಹೋಗ್ಲಿ ಬಿಡಿ ನಿಮ್ಗೆ ಗೊತ್ತಿಲ್ಲವೇನೋ ನಾನು ಬೇರೆ ಯಾರನ್ನಾದರೂ ಕೇಳ್ತೀನಿ ಅಂದೆ. ಆಕೆ ಕೂಡಲೇ, ’ಗೊತ್ತು ಮಗಳೇ, ಕುಮಾರವ್ಯಾಸ ಮಂಟಪ ಅದೋ ಆ ಎದುರುಗಡೆ ರಸ್ತೆಯಲ್ಲಿ ನೇರ ಹೋದರೆ ಸಿಗುತ್ತೆ’ ಅಂದರು. ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಮುಂದೆ ಸಾಗಿದೆ. ಅಪರಿಚಿತ ಹಿರಿಯ ಮಹಿಳೆಯೊಬ್ಬರು ’ಮಗಳೇ’ ಎಂದು ಸಂಬೋಧಿಸಿದ್ದು ಆಪ್ಯಾಯಮಾನವಾಗಿತ್ತು. ಸ್ನೇಹಿತೆ ದೀಪಾ,  ತಮ್ಮ ಕನ್ನಡಾಭಿಮಾನಿ ಚಿಕ್ಕಪ್ಪನವರ ಬಗ್ಗೆ ಹೇಳ್ತಾ ಇದ್ರು. ಚಿಕ್ಕಂದಿನಲ್ಲಿ ಅವರನ್ನು ಅಂಕಲ್ ಅಂತ ಕರೆದರೆ, ಅವರು ಏನಮ್ಮಾ ನನ್ನ ಕಲ್ಲು ಮಾಡ್ಬಿಟ್ಟೆ? ಚಿಕ್ಕಪ್ಪ ಅಂತ ಕರೆಯಮ್ಮ ಅಂತ ಹೇಳ್ತಿದ್ರಂತೆ. ಮಮ್ಮಿ, ಡ್ಯಾಡಿ, ಆಂಟಿ, ಅಂಕಲ್ ಗಳ ಭರಾಟೆಯಲ್ಲಿ ಅಪ್ಪ, ಅಮ್ಮ, ಅತ್ತೆ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮಗಳು ಕಳೆದು ಹೋಗಿರುವ ಈ ಕಾಲದಲ್ಲಿ ನಮ್ಮದೇ ಭಾಷೆಯ ಸಂಬೋಧನೆ ಎಷ್ಟು ಖುಶಿ ನೀಡಬಲ್ಲುದು ಅಲ್ಲವೇ?

ಒಂದು ಸಣ್ಣ ಉದ್ಯಾನವನದ ನಡುವೆ, ಗಣೇಶನ ಗುಡಿಯನ್ನು ತನ್ನ ಆವರಣದಲ್ಲಿಟ್ಟುಕೊಂಡ ಪುಟ್ಟ ಸಭಾಂಗಣ ’ಕುಮಾರವ್ಯಾಸ ಮಂಟಪ’. 1971ರಲ್ಲಿ ವೀ.ಸೀ, ಅನಕೃರವರಂಥ ದಿಗ್ಗಜರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಈ ಸಂಸ್ಥೆಯಲ್ಲಿ ಅಂದಿನಿಂದ ನಿರಂತರವಾಗಿ ಸುಮಾರು ಹದಿನೈದು ಸಾವಿರದ ಮುನ್ನೂರೈವತ್ತು ದಿವಸ ನಾಡಿನ ಹೆಸರಾಂತ ಗಮಕಿಗಳಿಂದ ಕುಮಾರವ್ಯಾಸನ ಕಾವ್ಯ ವಾಚನ, ವ್ಯಾಖ್ಯಾನ ನಡೆಯುತ್ತ ಬಂದಿದೆ. ಮಂಟಪ ಸ್ಥಾಪನೆಯ ಕಾರ್ಯಕ್ರಮಕ್ಕೆ  ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಉಪಸ್ಥಿತಿಯಲ್ಲಿದ್ದ, ನಂತರವೂ ಅನೇಕ ಆಸಕ್ತರಿಂದ ಪೋಷಣೆಗೊಂಡು ಬೆಳೆದಿರುವ ಸಂಸ್ಥೆ, ಇಂದಿನ ದಿನಗಳಲ್ಲಿ ಹೆಚ್ಚಿನ  ಶ್ರೋತೃಗಳಿಲ್ಲದೆ ಚೇತರಿಕೆಗಾಗಿ ಕಾದಿದೆ. ಸಂಸ್ಥೆಯನ್ನು ಮುನ್ನಡೆಸುತ್ತಿರುವ ಹಿರಿಯ ಚೇತನಗಳ ಉತ್ಸಾಹ ಮೆಚ್ಚತಕ್ಕದ್ದು.

ತಾವೂ ವಸುಧೇಂದ್ರರ ಪುಸ್ತಕಗಳ ಅಭಿಮಾನಿ ಅಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂತ್ರಿ ಸುರೇಶ್ ಕುಮಾರ್ ಅವರು, ಕುಮಾರವ್ಯಾಸ ಮಂಟಪದ ಅಭಿವೃದ್ಧಿಗೆ ತಮ್ಮ ಸಹಾಯ ಎಂದಿಗೂ ಇದೆ, ಆಶ್ವಾಸನೆಗಳನ್ನು ನೆರವೇರಿಸಿಯೇ ತೀರುತ್ತೇವೆ ಎಂದರು.

ಮುಖ್ಯ ಅತಿಥಿ ವಸುಧೇಂದ್ರ ಅವರು ಉಲ್ಲೇಖಿಸಿದಂತೆ ನಮ್ಮ ನಾಡಿನಲ್ಲಿ ಕಲೆಗೆ, ಕಲಾವಿದರಿಗೆ ಸೂಕ್ತ ಮನ್ನಣೆ ನೀಡುವಲ್ಲಿ ಪಾಶ್ಚಾತ್ಯರಿಗೆ ಹೋಲಿಸಿದರೆ ನಾವು ಒಂದು ಹೆಜ್ಜೆ ಹಿಂದೆ. ಕುಮಾರವ್ಯಾಸನ ಕಾಲಮಾನದವನೇ ಆದ ಶೇಕ್ಸ್ ಪಿಯರ್ ಗೆ ಸಂದ ಗೌರವಕ್ಕೂ, ಕುಮಾರವ್ಯಾಸನ ಕಾವ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಹರಸಾಹಸ ಪಡುತ್ತಿರುವ ನಮಗೂ ಅಜಗಜಾಂತರ ವ್ಯತ್ಯಾಸ. ಕಾವ್ಯ ರಚನೆಗೆ ಸಂಸ್ಕೃತ ಭಾಷೆಯೇ ಅಧಿಕೃತವಾಗಿದ್ದಂತಹ ಕಾಲದಲ್ಲಿ ಆಡುಭಾಷೆಯಲ್ಲಿ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಕುಮಾರವ್ಯಾಸನು ಕನ್ನಡದಲ್ಲಿ ಕಾವ್ಯರಚನೆಗೆ ಮುಂದಾದನು. ಆಧುನಿಕ ಚಿಂತನೆ, ಸರ್ವ ಧರ್ಮ ಸಮನ್ವಯ ಮನೋಭಾವದಿಂದ ಬರೆದ ಕುಮಾರವ್ಯಾಸನ ಕಾವ್ಯ ಜನರಿಗೆ ಸುಲಭವಾಗಿ ಲಭ್ಯವಾಗಬೇಕು ಅನ್ನುವುದು ವಸುಧೇಂದ್ರ ಅವರ ಅಭಿಮತ. ಇಂದಿನ ಅಂತರ್ಜಾಲ ಯುಗದಲ್ಲಿ, ಕುಮಾರವ್ಯಾಸನ ಪದ್ಯಗಳು ಓದುಗರಿಗೆ, ವಿವರಣೆಯೊಡನೆ ಒಂದು ಜಾಲತಾಣದಲ್ಲಿ ಲಭ್ಯವಿದ್ದಲ್ಲಿ, ಆಸಕ್ತರಿಗೆ ದಿನಕ್ಕೊಂದು ಪದ್ಯ ಈ-ಮೆಯ್ಲ್ ನಲ್ಲಿ ತಲುಪುವ ಹಾಗಿದ್ದರೆ ಎಷ್ಟು ’ಛಂದ’ ಅನ್ನುವುದು ಅವರ ಆಶಯ.  ಹೆಚ್.ಎಸ್.ವಿ ಅವರ ಗರಡಿಯಲ್ಲಿ ಕುಮಾರವ್ಯಾಸನನ್ನು ಓದಲು ಕಲಿತು, ವ್ಯಾಸನನ್ನೂ  ಓದಿಕೊಂಡಿರುವ ವಸುಧೇಂದ್ರ, ಕುಮಾರವ್ಯಾಸನ ಕಾವ್ಯ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು. ಕನ್ನಡಿಗರಲ್ಲದೆ ಮತ್ಯಾರೂ ಕುಮಾರವ್ಯಾಸನ ಕಾವ್ಯವನ್ನು ಉಳಿಸಿ, ಬೆಳೆಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಗಮಕ ಪರಿಷತ್ತು ಕುಮಾರವ್ಯಾಸನ ಕಾವ್ಯದ ಗಣಕೀಕರಣಕ್ಕೂ ಮುಂದಾಗಿದೆ. ಇತ್ತೀಚೆಗೆ ತಮಿಳುನಾಡಿನ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಕುಮಾರವ್ಯಾಸನ ಆಯ್ದ ಪದ್ಯಗಳ ವಾಚನ, ವ್ಯಾಖ್ಯಾನವನ್ನು ತುಂಬು ಸಭೆಯಲ್ಲಿ ನಡೆಸಿಕೊಟ್ಟ ಹಿರಿಮೆ ಕುಮಾರವ್ಯಾಸ ಮಂಟಪದ ಡಾ. ಪ್ರಸನ್ನ ಅವರದ್ದು.  ಸಾಹಿತಿ ಯು. ಆರ್. ಅನಂತಮೂರ್ತಿಯವರೂ ಕೂಡಾ ಕುಮಾರವ್ಯಾಸನ ಅಭಿಮಾನಿ ಎನ್ನುವುದು ನೆರೆದಿದ್ದ ಗಮಕಿಗಳಿಗೆಲ್ಲ ಹೆಮ್ಮೆಯ ವಿಷಯ.

ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ, ಬಹುಶಃ ನಮ್ಮ ದೇಶದಲ್ಲೇ ಏಕೈಕ ಸಂಸ್ಥೆ, ಸತತ 40 ವರ್ಷಗಳಿಂದ ಎಡಬಿಡದೆ ಪ್ರತಿನಿತ್ಯ ಕಾವ್ಯ ವಾಚನ, ವ್ಯಾಖ್ಯಾನ ನಡೆಸಿಕೊಂಡು ಬರುತ್ತಿರುವ ಸಂಸ್ಥೆ. ಇದು ಎಲೆ ಮರೆಯ ಕಾಯಿಯಾಗದೆ ಹೆಚ್ಚು ಹೆಚ್ಚು ಆಸಕ್ತರನ್ನು ತನ್ನೆಡೆಗೆ ಸೆಳೆದುಕೊಂಡಲ್ಲಿ, ಆಯೋಜಕರಿಗೂ ಹುಮ್ಮಸ್ಸು, ಗಮಕಿಗಳಿಗೂ ಪ್ರೋತ್ಸಾಹದಾಯಕ.

ನಾನು ಓದಿದ ಪುಸ್ತಕ: ಮಾತುಗಾರ ರಾಮಣ್ಣ

ಮಾರ್ಚ್ 26, 2011

ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ ಮುಂದಿಡುತ್ತಾರೆ ಮಾಸ್ತಿಯವರು. ಮೈಸೂರಿನ ದಿವಾನರ ಆಳ್ವಿಕೆಯ ಪರಿ, ದೇಶದಲ್ಲಿ  ಭ್ರಷ್ಟಾಚಾರ ವ್ಯಾಪಿಸಿದ ಬಗೆ, ಕೌಟುಂಬಿಕ ಜೀವನದ ನೆಮ್ಮದಿಗೆ ಬೇಕಾದ ಮನೋಸ್ಥಿತಿ, ಕನ್ನಡ ಭಾಷೆಯ ಸ್ಥಾನಮಾನ,  ಈ ಎಲ್ಲದರ ಬಗ್ಗೆಯೂ ಸರಳ, ನೇರ ವಿವರಣೆ, ಇಬ್ಬರು ಹಿರಿಯರ ನಡುವಿನ ಸಂಭಾಷಣೆಯ ಮೂಲಕ, ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಲ್ಲಿ ಲಭ್ಯ. ಮೈಸೂರಿನ ದಿವಾನರ ಆಳ್ವಿಕೆಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿರುವವರಿಗೆ ಉತ್ತಮ ಪುಸ್ತಕ.

ಪುಸ್ತಕದಲ್ಲಿ ನನ್ನ ಮನಸೆಳೆದ ಕೆಲವು ಸಂಗತಿಗಳು (ಪುಸ್ತಕದಿಂದ ನೇರವಾಗಿ ಹೆಕ್ಕಿದ್ದು):

****************************************************

 “ಜಪಾನೀಯರಿಗೆಲ್ಲ ಈ ದೇಶ ನಮ್ಮ ದೇಶ, ಇದು ದೊಡ್ಡದಾಗಬೇಕು, ಇದು ದೊಡ್ಡದಾಗಬೇಕಾದರೆ ನಾವೆಲ್ಲ ಚೆನ್ನಾಗಿ ದುಡಿಯಬೇಕು ಅನ್ನೋ ಆಸೆಯಂತೆ ಸ್ವಾಮಿ. ಅವರ ಪಾಠದ ಹೊತ್ತಿನಲ್ಲಿ ದೊಡ್ಡ ದೊಡ್ಡ ಉಪಾಧ್ಯಾಯರು ಇಂಗ್ಲಿಷ್ ಪುಸ್ತಕಾನ ಎದುರಿಗಿಟ್ಟುಕೊಂಡು ಜಪಾನಿ ಭಾಷೆಯಲ್ಲಿ ಪಾಠ ಹೇಳುತ್ತಿದ್ದರಂತೆ. ನಮ್ಮ ದೊಡ್ಡ ಉಪಾಧ್ಯಾಯರು ಮೊದಲು ಕನ್ನಡದಲ್ಲಿ ಪುಸ್ತಕ ಆಗಲಿ ಅದಿಟ್ಟುಕೊಂಡು ಕನ್ನಡದಲ್ಲಿ ಪಾಠ ಹೇಳುತ್ತೇವೆ ಅನ್ನುತ್ತಾರೆ. ಪುಸ್ತಕ ಬರೀಬೇಕಾದ ಈ ದೊಡ್ಡವರೇ ಕನ್ನಡದಲ್ಲಿ ಬರಿಯೋಕಾಗುವುದಿಲ್ಲ ಅಂತಲೋ, ಬೇರೆಯವರು ಬರೀಲಿ ಅಂತಲೋ, ತೆಪ್ಪನೆ ಕುಳಿತು ಬಿಟ್ಟರೆ ಪುಸ್ತಕ ಬರೆಯದೆಯೇ ಕನ್ನಡ ಬೆಳೆಯುತ್ತದೆಯೇ?”

“ನಮ್ಮ ಜನಕ್ಕೆ ಇಂಗ್ಲೀಷು ಅಂದರೆ ಮೋಹ ಆಗಿದೆ. ನಮ್ಮ ದೊರೆಗಳಾಗಿದ್ದ ಪರಂಗಿ ಜನ, ನಮ್ಮನ್ನು ಆಳುವುದಕ್ಕೆ ಉಪಾಯ ಅಂತ ನಮ್ಮ ಜನಕ್ಕೆ ತಮ್ಮಲ್ಲೇ ನಂಬಿಕೆ ಇಲ್ಲದಂತೆ ಮಾಡಿದರು; ಸಂಸ್ಕೃತ ಯಾಕೆ ಅಂತ ಇಂಗ್ಲಿಷ್ ಕಲಿಸಿದರು. ನಾವೆಲ್ಲ ಇಂಗ್ಲಿಷ್ ಕಲಿತದ್ದು ಸಂಬಳಕ್ಕಾಗಿಯೆ. ಹೀಗಾಗಿ ಸಂಸ್ಕೃತ ಮೂಲೆಗೆ ಬಿತ್ತು.”

“***ಇವರು ದೊಡ್ಡ ಕೆಲಸದಲ್ಲಿ ಏಳು ಜನ ಮದರಾಸಿನವರನ್ನು ತಂದು ನಿಲ್ಲಿಸಿದರಲ್ಲದೆ ಇಲ್ಲಿಯ ಬೇರೆ ಕೆಲಸದಲ್ಲಿ ಕೂಡ ನೇಮಿಸುವಲ್ಲಿ ತಮ್ಮ ಹತ್ತಿರದ ಕೆಲಸ ಮಾಡಿದ ಮನುಷ್ಯರನ್ನು ಕೆಲಸಕ್ಕೆ ನೇಮಿಸಿದರು. ಒಟ್ಟಿನಲ್ಲಿ ಮೈಸೂರು ತಮಿಳರ ಪಾಲಾಯಿತು. ತನ್ನವನೂ ಅಂತ ಒಬ್ಬನಿಗೆ ತನ್ನ ಹತ್ತಿರ ಕೆಲಸ ಕೊಡದೆ ಮರ್ಯಾದೆ ಉಳಿಸಿಕೊಂಡವರು ವಿಶ್ವೇಶ್ವರಯ್ಯನವರು ಒಬ್ಬರೇ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆಗೆ ಸಾಗರದ ಕಟ್ಟಡ ಆರಂಭಿಸಿದರಲ್ಲ, ಇಲ್ಲಿ ಸರ್ಕಾರದ ಕೆಲಸದಲ್ಲಿದ್ದ ತಮಿಳು ಜನರ ಕೂಗೋ ಕೂಗು. ತಂಜಾವೂರ ಜನಕ್ಕೆ ತೊಂದರೆ ಆಗುತ್ತೆ ಅಂತ. ವಿಶ್ವೇಶ್ವರಯ್ಯನವರು ಗಟ್ಟಿ ದಿವಾನರು. ಕೆಲಸ ಮುಂದುವರಿಸಿದರು. ಕುಡಿಯೋಕೆ ನೀರಿಲ್ಲದೆ ಕಷ್ಟ ಪಡ್ತಾ ಇದ್ದ ಮಂಡ್ಯದ ಸೀಮೆ ನೆಲ, ಶ್ರೀರಂಗಪಟ್ಟಣದ ನೆಲದ ಹಾಗೆ ಗದ್ದೆ ನೆಲ ಆಯ್ತು. ನಮ್ಮ ಜನ ಬದುಕಿಕೊಂಡರು.”

“ನಮ್ಮ ವ್ಯಾಪಾರಗಾರರು ಒಳ್ಳೇ ತುಪ್ಪಕ್ಕೆ ಜಿಡ್ಡು ಸೇರಿಸೋಕೆ ಏರ್ಪಾಟು ಮಾಡಿದರು. ಊರಿನಲ್ಲಿ ಕಸಾಯಿ ಮನೆಗಳಿಂದ ಕುರಿ ಕೊಬ್ಬನ್ನ ತಂದು ತುಪ್ಪದಲ್ಲಿ ಸೇರಿಸೋದು ಮೊದಲಾಯಿತು.  ನಮ್ಮ ಕಾಲದ ಹೊಸ ಭಕ್ಷ್ಯಗಳು ಬೋಂಡಾ, ಪಕೋಡಾ, ಮೈಸೂರುಪಾಕು ಇಂಥದ್ದೆಲ್ಲ ಈ ತುಪ್ಪದಲ್ಲಿ ಮಾಡಿದ್ದು ಹೆಚ್ಚು ರುಚಿ ಆಗ್ತಾ ಇತ್ತಂತೆ. ”

“ನಮ್ಮ ದೊಡ್ಡ ಕವಿ, ಜಾಣ ಒಬ್ಬ ರಾಜನಾದವನಿಗೆ ’ಭೂಪತಿ ಅನ್ನಿಸಿಕೊಂಡ ಜನ ಸತ್ತಾಗ ಅವರೊಂದಿಗೆ ಭೂಮಿ ಸಹಗಮನ ಮಾಡಿದ್ದಿಲ್ಲಪ್ಪ’ ಅಂತ ಹೇಳಿದ ಅಂದರು. ಮನುಷ್ಯನಿಗೆ ತಿಳಿಯಬೇಕಾದ ಸಂಗತಿ; ತಿಳಿಯೋದಿಲ್ಲ ಸ್ವಾಮಿ. ಈಗ ದೊಡ್ಡ ದೊಡ್ಡ ಅಧಿಕಾರದಲ್ಲಿ, ಸಂಸ್ಥೆಗಳಲ್ಲಿ  ದುರಾಸೆಯಿಂದ ಅನ್ಯಾಯವಾಗಿ ಕಾಸುಗಳಿಸುತಾ ಇರೋ ಪುಣ್ಯವಂತ ಜನಕ್ಕೆ ಈ ಮಾತು ಸಲ್ಲುತ್ತೆ. ಹಣ ಮುಂದಕ್ಕೆ ಯಾರ ಪಾಲಾಗುತ್ತೆ, ಯಾವ ಶುಭವನ್ನು ಸಾಧಿಸುತ್ತೆ ಇವರು ಯೋಚನೆ ಮಾಡಬೇಕು. ಹಣ ಗಳಿಸುತಾ ಇಲ್ಲ; ಆದ್ದರಿಂದ ನಾನು ಈ ವಿವೇಕದ ಮಾತನಾಡುತಾ ಇದೇನೆ. ಗಳಿಸುತಾ ಇರೋರಿಗೆ ಈ ಸತ್ಯ ಹೊಳೆಯೋದಿಲ್ಲ.”

” ದಂಪತಿಗಳ ನಡುವೆ ಯಾವುದೇ ಬೇಸರ ಇದ್ದರೂ  ಮಕ್ಕಳನ್ನು ಬೆಳೆಸೋ ಹೊಣೆಗೆ ಅಡ್ಡಿ ಆಗಬಾರದು. ಪ್ರೇಮ ಇತ್ತು ಸಮ, ಪ್ರೇಮ ಇಲ್ಲ ಬೇಸರ ಅಂತೂ ಕೂಡದು. ಕಚ್ಚಾಟ ಇಲ್ಲದೆ ಇದ್ದರೂ ಆಯಿತು.”

****************************************************

ಅಂತೂ ವಾರಾಂತ್ಯದ ಓದಿಗೆ ಒಂದು ಉತ್ತಮ ಪುಸ್ತಕ. ನಾನು ಆಕೃತಿಯಲ್ಲಿ ಕೊಂಡಿದ್ದು. ಇತರೇ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿರಬಹುದು.

’ಸುಮ್ ಸುಮ್ನೆ’ ಒಂದು ಮನವಿ

ಸೆಪ್ಟೆಂಬರ್ 16, 2010

  

ಸುಮುಖ ಪ್ರಕಾಶನದ ಮಕ್ಕಳ ಮಾಸಿಕ ಪತ್ರಿಕೆ ’ಸುಮ್ ಸುಮ್ನೆ’

   

“ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ”,  

 “ಟೋಪಿ ಬೇಕೆ ಟೋಪಿ, ಎಂಥ ಟೋಪಿ? ಚಿನ್ನದ ಟೋಪಿ,  

ಎಷ್ಟು ರೂಪಾಯಿ, ನೂರು ರೂಪಾಯಿ, ಬೇಡಾ ಬೇಡಾ,  

ಒಂದು ರೂಪಾಯಿ ಕೊಡು ಕೊಡು”  

ನಮ್ಮ ಬಾಲ್ಯದಲ್ಲಿಯೇ,  ಕಾಸು, ಒಂದು ರೂಪಾಯಿ, ನಮ್ಮ ಇತಿ ಮಿತಿಯಲ್ಲಿರುವುದು ಎಂಬುದನ್ನು  ಉಲ್ಲೇಖಿಸುವಂತೆ ಪದ್ಯಗಳ ಮೂಲಕ ಕಾಸಿನ ಬಗ್ಗೆ ಕಲಿತೆವು.    

ಕಬ್ಬನ್ ಪೇಟೆಯಲ್ಲಿ ಒಂದು ರೂಪಾಯಿಗೆ ದೋಸೆ, ಇಡ್ಲಿ  ದೊರೆಯುತ್ತದೆ ಅನ್ನುವ ವಿಷಯ, ದಿನಪತ್ರಿಕೆ ಅಂತರ್ಜಾಲ ತಾಣಗಳನ್ನೆಲ್ಲ  ಸುತ್ತಿ ಬಳಸಿ ಬಂತು.  

ದಶಕದ ಹಿಂದೆ, ಟೈಮ್ಸ್ ಆಫ್ ಇಂಡಿಯಾ ಒಂದು ರೂಪಾಯಿಗೆ ದಿನ ಪತ್ರಿಕೆ ಆರಂಭಿಸಿ, ಎಲ್ಲ ಪತ್ರಿಕೆಗಳೂ ಈ ಸ್ಪರ್ಧಾತ್ಮಕ ಬೆಲೆಯಲ್ಲಿ ಪತ್ರಿಕೆ ನೀಡುವಂತೆ ಪ್ರೇರೇಪಿಸಿದ್ದಲ್ಲದೆ, ತನ್ನ ಓದುಗರ ಬಳಗವನ್ನು ವ್ಯಾಪಕವಾಗಿ ಹೆಚ್ಚಿಸಿಕೊಂಡಿತು. ಟೈಮ್ಸ್ ಬಳಗದ ಮುಂದೆ ನಮ್ಮದೇ ನಾಡಿನ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕೆ ಭಂಗ ಬರದಿದ್ದಲ್ಲಿ ಸಾಕು ಎಂಬಂತೆ ಕಾರ್ಯ ನಿರ್ವಹಿಸುತ್ತಿವೆ. ಸ್ಪರ್ಧೆಯ ನೆಪವೊಡ್ಡಿ ಎಲ್ಲ ಪತ್ರಿಕೆಗಳೂ ತಮ್ಮ ರೂಪುರೇಷೆಗಳನ್ನು ಬದಲಿಸಿಕೊಂಡಿವೆ.  

 ಇಂತಹ ಸ್ಪರ್ಧಾತ್ಮಕ ಮಾರುಕಟ್ಟೆ ಸಂಸ್ಕೃತಿಯ ನಡುವೆಯೂ ಮೂರೇ ರೂಪಾಯಿಗೆ ದೊರೆಯುತ್ತದೆ ಸುಮುಖ ಪ್ರಕಾಶನದ ’ಸುಮ್ ಸುಮ್ನೆ’ ಎಂಬ ಮಕ್ಕಳ ಮಾಸಿಕ ಪತ್ರಿಕೆ. ಮಕ್ಕಳ ಜ್ಞಾನವಿಕಾಸಕ್ಕಾಗಿ ಕೌತುಕ ಮೂಡಿಸುವ, ಸಾಮಾನ್ಯ ಜ್ಞಾನದ ವಿಷಯಗಳನ್ನು ಸಚಿತ್ರವಾಗಿ ಮೂರೇ ರೂಪಾಯಿಗಳಲ್ಲಿ ಒದಗಿಸುತ್ತಿರುವ ಹೆಗ್ಗಳಿಕೆ ಈ ಪತ್ರಿಕೆಯದ್ದು. ಹೆಚ್ಚಿನ ಪಾಲು ಗ್ರಾಮಾಂತರ ಪ್ರದೇಶಗಳ, ಸರ್ಕಾರಿ ಶಾಲಾ ಮಕ್ಕಳನ್ನೇ ಓದುಗರಾಗಿ ಹೊಂದಿರುವ ಈ ಪತ್ರಿಕೆಗೆ ಸುಮಾರು ಇಪ್ಪತ್ತು  ಸಾವಿರ  ಚಂದಾದಾರರಿದ್ದಾರೆ. ಪ್ರತಿ ಒಂದಕ್ಕೆ ಆರು ರೂಪಾಯಿ ಖರ್ಚು ಬೀಳುವ ಪತ್ರಿಕೆಯನ್ನು ಮೂರೇ ರೂಪಾಯಿಗೆ ಒದಗಿಸಿ ಪತ್ರಿಕೆಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಅನ್ನುತ್ತಾರೆ ಪತ್ರಿಕೆಯ ಸಂಪಾದಕ ನಾರಾಯಣ ಮಾಳ್ಕೋಡ್. ಬೆಲೆಯೇರಿಸಿ ಓದುವ ಮಕ್ಕಳಿಂದ ಪತ್ರಿಕೆಯನ್ನು ದೂರ ಸರಿಸಲು ಮನಸ್ಸಿಲ್ಲ.  ಇದೇ ಬೆಲೆಯಲ್ಲಿ ಎಷ್ಟು ದಿವಸ ಸಾಧ್ಯವೋ ಅಷ್ಟು ದಿವಸ ಪತ್ರಿಕೆಯನ್ನು ಹೊರತರುತ್ತೇನೆ ಅನ್ನುತ್ತಾರೆ.  ಅವರ ಬೆಂಬಲಕ್ಕಿರುವವರು ಅನೇಕ ಸಹೃದಯ ಜಾಹೀರಾತುದಾರರು. ನಿರಂತರವಾಗಿ ಜಾಹೀರಾತುಗಳು ಒದಗಿ ಬಂದಲ್ಲಿ ಮೂರು ರೂಪಾಯಿಗೆ ದೊರೆಯುವ ಸುಮ್ ಸುಮ್ನೆ ಪತ್ರಿಕೆ ಗ್ರಾಮೀಣ ಪ್ರತಿಭೆಗಳ ಜೀವನದಲ್ಲಿ ಜ್ಞಾನದೀಪವನ್ನು ಬೆಳಗಬಹುದು. ಮಾಳ್ಕೋಡ್ ರವರ ಈ ಸಾಹಸದಲ್ಲಿ ನಾವೂ, ನೀವೂ ಕೈ ಜೋಡಿಸೋಣವೇ? ದಯವಿಟ್ಟು ಮಾಳ್ಕೋಡ್ ರವರ ಈ ಮನವಿಯನ್ನು ಓದಿ:  

  ಪ್ರಿಯ ಓದುಗರೇ,  

            ಕನ್ನಡದ ಪುಸ್ತಕಗಳನ್ನು/ಪತ್ರಿಕೆಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹೆಚ್ಚಿನ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುವುದು ಇದಕ್ಕೆ ಒಂದು ಕಾರಣವಿರಬಹುದು. ಹಾಗಂತ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುವ ಮಕ್ಕಳು ಕನ್ನಡದ ಪತ್ರಿಕೆಗಳನ್ನು/ಪುಸ್ತಕಗಳನ್ನು ಓದುವ ಆಸಕ್ತಿ ಇಲ್ಲವೆಂದು ಭಾವಿಸುವಂತಿಲ್ಲ. ಆದರೆ, ಓದಿನಲ್ಲಿ ಅಭಿರುಚಿ  ಹುಟ್ಟಿಸುವಂತಹ ಮಾಹಿತಿ ಮಕ್ಕಳಿಗೆ ಸಿಗದೇ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಮಕ್ಕಳು ಇಷ್ಟಪಡುವಂತಹ, ಆಸಕ್ತಿದಾಯಕ ಹಾಗೊ ಕುತೂಹಲಕರ ಮಾಹಿತಿಗಳನ್ನು ಒಳಗೊಂಡ ಪತ್ರಿಕೆಯನ್ನು ಮಕ್ಕಳು ಬಹಳ ಇಷ್ಟಪಟ್ಟು ಓದುತ್ತಾರೆ ಎಂಬುದಕ್ಕೆ ನಮ್ಮ ಸಂಸ್ಠೆಯಿಂದ ಪ್ರಕಟವಾಗುತ್ತಿರುವ ’ಸುಮ್ ಸುಮ್ನೆ’ ಪತ್ರಿಕೆಯೇ ಸಾಕ್ಷಿ.  

 ಈ ಪತ್ರಿಕೆಯನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಶಾಲಾ ಮಕ್ಕಳು ಓದುತ್ತಾರೆ ಅಷ್ಟೇ ಅಲ್ಲ ಈ ಮಕ್ಕಳ ಪೋಷಕರೂ ಸಹ ಇಷ್ಟಪಟ್ಟು ಓದುತ್ತಿದ್ದಾರೆ. ಪತ್ರಿಕೆಯ ಮಾಲೀಕರು ಪ್ರಸಾರ ಸಂಖ್ಯೆ ಹೆಚ್ಚಿದಷ್ಟೂ ಸಂತೋಷ ಪಡುತ್ತಾರೆ. ಆದರೆ ಪ್ರಸಾರ ಸಂಖ್ಯೆ ಹದಿನೈದು ಸಾವಿರ ಮೀರಿರುವುದಕ್ಕೆ ಸಂತೋಷವಾದರೂ ಇದನ್ನು ನಿಭಾಯಿಸುವುದು ಬಹಳ ಕಷ್ಟವೆಂಬ ಅನುಭವ ಆಗುತ್ತಿದೆ. ಇದಕ್ಕೆ ಕಾರಣ ಈ ಪತ್ರಿಕೆಯ ಬೆಲೆ ಕೇವಲ ಮೂರು ರೂಪಾಯಿ ಆಗಿರುವುದು. ಪತ್ರಿಕೆಯ ಮುದ್ರಣ ಕಾಗದಕ್ಕೂ ಸಹ ಈ ಬೆಲೆ ಸಾಕಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದು. 28 ಪುಟಗಳ ಈ ಪತ್ರಿಕೆಯಲ್ಲಿ 12 ಪುಟಗಳು ಬಹುವರ್ಣದಲ್ಲಿ ಮುದ್ರಿತವಾಗುತ್ತವೆ. ಇದಕ್ಕೆ ಆಗುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ನಿಮ್ಮ ನೆರವನ್ನು ನಿರೀಕ್ಷಿಸುತ್ತಿದ್ದೇವೆ. ನೀವು ನಿಮ್ಮ ಸಂಸ್ಠೆಯ ಜಾಹಿರಾತುಗಳನ್ನು ಅಥವಾ ವೈಯಕ್ತಿಕ ಶುಭ ಸಂದೇಶಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಯಲ್ಲಿ ಸಹಕರಿಸಿ ಎಂಬುದು ನಮ್ಮ ಕೋರಿಕೆ. ನಿಮ್ಮ ಸಹಕಾರ ಲಭಿಸಿದರೆ ಪತ್ರಿಕೆಯ ಬೆಲೆಯನ್ನು ಹೆಚ್ಚಿಸದೆ ಪ್ರಸಾರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ಸಹಸ್ರಾರು ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಮೂಡಿಸಬಹುದು ಎಂಬುದು ನಮ್ಮ ಆಶಯ.  

ತಮ್ಮ ವಿಶ್ವಾಸಿ  

ನಾರಾಯಣ ಮಾಳ್ಕೋಡ್   

 ಸುಮುಖ ಪ್ರಕಾಶನ ಮತ್ತು ಪುಸ್ತಕ ಮಳಿಗೆಯ ವಿಳಾಸ  

ಸುಮುಖ ಡಿಸ್ಟ್ರಿಬ್ಯೂಟರ್ಸ್,    

174E/28, 2ನೇ ಮಹಡಿ, 1ನೇ ಮುಖ್ಯ ರಸ್ತೆ,    

ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ ಗೇಟ್,    

ಬೆಂಗಳೂರು 560023
ನಾರಾಯಣ ಮಾಳ್ಕೋಡ್ ರವರ ದೂರವಾಣಿಯಲ್ಲಿ ಸಂಖ್ಯೆ: 9481454602 

ಚಂದಾದಾರರಾಗಲು ಆಸಕ್ತಿ ಇದೆಯೇ?  ’ಸುಮುಖ ಡಿಸ್ಟ್ರಿಬ್ಯೂಟರ್ಸ್’ ಹೆಸರಿಗೆ ಡಿ.ಡಿ ಅಥವಾ ಮನಿ ಆರ್ಡರ್ ಮೂಲಕ 36 ರೂಪಾಯಿಗಳನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸಿ. 
ನಿಮ್ಮ ಅಂಚೆ ವಿಳಾಸವನ್ನು ನಮೂದಿಸಲು ಮರೆಯದಿರಿ.  ಒಂದು ವರ್ಷ ಕಾಲ ’ಸುಮ್ ಸುಮ್ನೆ’ ಸಂಚಿಕೆಗಳು ನಿಮ್ಮ ಮನೆ ಬಾಗಿಲಿಗೇ ಬಂದು ತಲುಪುತ್ತವೆ.
 
ಸುಮ್ ಸುಮ್ನೆ ಬಗ್ಗೆ ದಟ್ಸ್ ಕನ್ನಡ ತಾಣದಲ್ಲಿ ಪ್ರಸಾದ್ ರವರ ಲೇಖನ ತಮ್ಮ ಗಮನಕ್ಕೆ 

ರಾಜಾಜಿನಗರದಲ್ಲೊಂದು ಉತ್ತಮ ಪುಸ್ತಕ ಮಳಿಗೆ

ಜುಲೈ 14, 2010

ಆಕೃತಿಯಲ್ಲಿ ವಸುಧೇಂದ್ರರ ಪ್ರಬಂಧ ವಾಚನ ಆಲಿಸುತ್ತಿರುವ ಸಭಿಕರು

ಬಸವನಗುಡಿಯಲ್ಲಿ ಅಂಕಿತ ಇದೆ, ಜಯನಗರದಲ್ಲಿ ಖ್ಯಾತವೆನ್ನುವ ಎಲ್ಲಾ ಪುಸ್ತಕ ಮಳಿಗೆಗಳು ಮನೆ ಮಾಡಿವೆ. ಆದರೆ ಇನ್ನೂ ಕನ್ನಡಿಗರ ಊರೇ ಆಗಿರುವ ರಾಜಾಜಿನಗರದಲ್ಲಿ, ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳ ಮಳಿಗೆಗಳು ದಂಡಿಯಾಗಿದ್ದರೂ, ಸಾಹಿತ್ಯಾಸಕ್ತರು ಪುಸ್ತಕಗಳಿಗೆ ಅಕ್ಕ ಪಕ್ಕದ ಬಡಾವಣೆಗಳ ಪುಸ್ತಕ ಮಳಿಗೆಗಳ ಮೊರೆ ಹೋಗಬೇಕಿತ್ತು. ಟ್ರಾಫಿಕ್ ಜಂಜಾಟದಲ್ಲಿ  ಗಾಂಧಿನಗರದ ಸಪ್ನ ಮಳಿಗೆಗೆ ಎಡ ತಾಕುತಿದ್ದ ರಾಜಾಜಿನಗರದ ಸುತ್ತ ಮುತ್ತಣ ನಿವಾಸಿಗಳಿಗೆ ’ಆಕೃತಿ’ಯ ಆಗಮನ ಸಂತಸದ ವಿಷಯ.

 ಸದ್ದು ಗದ್ದಲವಿಲ್ಲದೆ  ಕೆಲವೇ ದಿನಗಳ ಹಿಂದೆಯಷ್ಟೇ ಆರಂಭವಾದ ಆಕೃತಿ ಪುಸ್ತಕ ಮಳಿಗೆಯಲ್ಲಿ ಮೊನ್ನೆ ಭಾನುವಾರ,  ಖ್ಯಾತ ಕತೆಗಾರ ವಸುಧೇಂದ್ರರವರಿಂದ ತಮ್ಮ ಇತ್ತೀಚಿನ ಪುಸ್ತಕ ’ರಕ್ಷಕ ಅನಾಥ’ ದಿಂದ ಒಂದು ಬರಹ ವಾಚನ ಕಾರ್ಯಕ್ರಮವಿತ್ತು. ಮಳಿಗೆಯ ಸ್ಥಾಪಕ ಗುರುಪ್ರಸಾದ್ ಕುಟುಂಬ ವರ್ಗ, ಕೆಲವು ಸ್ನೇಹಿತರಷ್ಟೇ ನೆರೆದಿದ್ದ ಚಿಕ್ಕ ಚೊಕ್ಕ ಕಾರ್ಯಕ್ರಮ. ’ಹೊಸ ಪೀಳಿಗೆಯನ್ನು ಓದಲು ಹಚ್ಚಿದ’ ಲೇಖಕರೆಂದು ಬೊಳ್ವಾರ( ’ತಟ್ಟು ಚಪ್ಪಾಳೆ ಪುಟ್ಟ ಮಗು’ ಪುಸ್ತಕದ ಸಂಪಾದಕ) ರಿಂದ ನಾಮಕರಣಗೊಂಡ ಲೇಖಕ ವಸುಧೇಂದ್ರ ನೆರೆದವರೆಲ್ಲರೊಡನೆಯೂ ಆತ್ಮೀಯವಾಗಿ ಬೆರೆತು ಮುಕ್ತವಾಗಿ ಮಾತನಾಡಿದರು.

ಯಾವುದೇ ದೇಶದ ಜನಸಂಖ್ಯೆಯ 10% ಮಂದಿಯಷ್ಟೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಈಗೀಗ ಓದುಗರು ಹೆಚ್ಚಾಗುತ್ತಿದ್ದಾರೆ ಅದು ಸಂತಸದ ವಿಷಯವೆಂದ ವಸುಧೇಂದ್ರ, ಐ.ಟಿ ಉದ್ಯೋಗ ತೊರೆದು ಪುಸ್ತಕ ಪ್ರಕಾಶನ, ಮಾರಾಟ  ಉದ್ಯಮಕ್ಕೆ ಕಾಲಿಟ್ಟಿರುವ ಗುರುಪ್ರಸಾದ್ ರವರಿಗೆ ಶುಭ ಹಾರೈಸಿದರು.

ಬೆಂಗಳೂರಿನ ಮಕ್ಕಳ ಕನ್ನಡ ಭಾಷಾ ಪ್ರಭುತ್ವ ಅಂಗಡಿಯ ಬೋರ್ಡ್ ಓದಲಿಕ್ಕಷ್ಟೇ ಸೀಮಿತವೆಂದ ಅಭಿಪ್ರಾಯಕ್ಕೆ ಉತ್ತರವಾಗಿ, ಆಂಗ್ಲ ಭಾಷೆಯಾದರೂ ಸರಿ, ಪುಸ್ತಕ ಓದುವ ಅಭಿರುಚಿಯಿದ್ದಲ್ಲಿ, ಕನ್ನಡ ಕೃತಿಗಳನ್ನು ತರ್ಜುಮೆ ಮಾಡಿಯಾದರೂ ಸರಿ ಅವರಿಗೆ ತಲುಪಿಸಬಹುದಲ್ಲ ಎಂದರು ಆಶಾವಾದಿ ವಸುಧೇಂದ್ರ.

ಮನೆಯಲ್ಲಿ ತಾತನ ಕಾಲದಿಂದಲೂ ಇರುವ ದೇವರ ಪಟಗಳನ್ನು ಏನು ಮಾಡಬೇಕೆಂದು ತೋರದ ಧರ್ಮ ಸಂಕಟದಲ್ಲಿ ನೀವಿದ್ದಲ್ಲಿ, ವಸುಧೇಂದ್ರರ ’ರಕ್ಷಕ ಅನಾಥ” ಪುಸ್ತಕವನ್ನು ಓದಿ. ಸಮರ್ಪಕ ಉತ್ತರವನ್ನು ನೀಡುತ್ತದೆ ಅವರ ಲಲಿತ ಪ್ರಬಂಧ ’ರಕ್ಷಕ ಅನಾಥ’. ಹಿರಿಯರು ನೂರು ವರ್ಷ ಬಾಳಿ ಬದುಕಿದ ಬಳ್ಳಾರಿಯ ಮನೆಯಲ್ಲಿದ್ದ ಇನ್ನೂರಕ್ಕೂ ಮಿಕ್ಕ ದೇವರ ಪಟಗಳನ್ನು, ಬೆಂಗಳೂರಿನ ಆಧುನಿಕ ಜೀವನ ಶೈಲಿಗೆ ಹೊಂದುವ ಹಾಗೆ ಕಾಪಾಡಿಗೊಂಡ ಬಗೆಯ ಕುರಿತ ಹಾಸ್ಯ ಲೇಖನ ಎಲ್ಲರಿಗೂ ಮೆಚ್ಚುಗೆಯಾಗಿದ್ದಲ್ಲದೆ, ಸಭಿಕರಲ್ಲೊಬ್ಬರು ಅವರ ಮನೆಯಲ್ಲಿರುವ ರವಿವರ್ಮನ ಕಲಾಕೃತಿಗಳನ್ನು ರಕ್ಷಿಸುವ ಉಪಾಯ ಹೇಳಿಕೊಟ್ಟ ವಸುಧೇಂದ್ರರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಗುರುಪ್ರಸಾದ್ ರವರ ಸಾಹಿತ್ಯಾಭಿರುಚಿಯನ್ನು ಬಿಂಬಿಸುವ,  ಅಚ್ಚುಕಟ್ಟಾಗಿ ಜೋಡಿಸಿರುವ ಪುಸ್ತಕಮಳಿಗೆಗೊಮ್ಮೆ ಭೇಟಿ ಕೊಡಿ. ಬಹುತೇಕ ಜನಪ್ರಿಯ ಪುಸ್ತಕಗಳೆಲ್ಲವೂ ಅಲ್ಲಿವೆ. ಡಿ.ವಿ.ಜಿ ಯವರ ಜ್ಞಾಪಕ ಚಿತ್ರಶಾಲೆ, ಬಿ.ಜಿ.ಎಲ್ ಸ್ವಾಮಿಯವರ ಹಸಿರು ಹೊನ್ನು, ತೇಜಸ್ವಿ, ಕುವೆಂಪು, ಕಾರಂತ, ಭೈರಪ್ಪನವರ ಸಮಗ್ರ ಕೃತಿಗಳು, ಸ್ವಪ್ನ ಸಾರಸ್ವತ, ವೈದೇಹಿಯವರ ಕ್ರೌಂಚಪಕ್ಷಿಗಳು, ರವಿ ಬೆಳಗೆರೆ, ಜೋಗಿ, ಪ್ರತಾಪ ಸಿಂಹ, ಆರ್. ಕೆ ನಾರಾಯಣ್ ರವರ ಕೃತಿಗಳ ಕನ್ನಡ ಅನುವಾದ, ಎಲ್ಲರ ಕೃತಿಗಳು ಲಭ್ಯ ಇಲ್ಲಿ.  ತೇಜಸ್ವಿಯವರು ತೆಗೆದ ಛಾಯಾ ಚಿತ್ರಗಳ ಸಂಕಲನದ ಪುಸ್ತಕ ಅದರ ಹೆಚ್ಚಿನ ಬೆಲೆಯನ್ನು ಸೂಚಿಸುವಂತೆ  ಕಪಾಟಿನ ಮೇಲ್ಗಡೆ ಸ್ಥಾನ ಆಕ್ರಮಿಸಿತ್ತು. ಛಂದ ಪುಸ್ತಕಗಳಿಗೆಂದೇ ಒಂದು ಕಪಾಟು ಮೀಸಲಾಗಿದೆ.

ನಮ್ಮ ಮನೆಯ ಮಕ್ಕಳಿಗೆ ಕನ್ನಡ ಚೆನ್ನಾಗಿ ಓದಲು ಬರುವುದಿಲ್ಲವೆಂಬ ಬೇಸರ ಬೇಡ. ಪಂಚತಂತ್ರ, ಅಮರ ಚಿತ್ರಕಥೆ ಇನ್ನಿತರೆ ಚಿತ್ತಾಕರ್ಷಕ ಚಿತ್ರಗಳನ್ನು ಹೊಂದಿದ ಮಕ್ಕಳ ಪುಸ್ತಕಗಳು ಲಭ್ಯವಿವೆ.  ಈಗಿನ ಪೀಳಿಗೆಯವರ ನಾಡಿ ಮಿಡಿತವನ್ನರಿತಿರುವ ಗುರು, ಅವರಿಗೆಂದೇ ಜೆಫ್ರಿ ಆರ್ಚರ್, ಸ್ಟೆಫಿನಿ ಮೆಯರ್ ಪುಸ್ತಕಗಳನ್ನು ಕಣ್ಣಿಗೆ ಕಾಣುವಂತೆ ಇಟ್ಟಿದ್ದಾರೆ. ಪುಸ್ತಕ ಕೊಳ್ಳುವುದು ಮಾತ್ರವಲ್ಲ, ಬೇಕೆಂದಲ್ಲಿ ಅಲ್ಲಿಯೇ ಕುಳಿತು ಓದಲು ಬೀನ್ ಬ್ಯಾಗ್ ಗಳಿವೆ.  ಬಿಡುವಿನ ಸಮಯದಲ್ಲೊಮ್ಮೆ ಭೇಟಿ ಕೊಡಿ.

ಮಳಿಗೆಗೆ ಹತ್ತಿರದಲ್ಲೇ,  ಎಮ್. ಟಿ. ಆರ್  ಮೊಮೆಂಟ್ಸ್ ನಲ್ಲಿ ದೋಸೆ, ಕಾಫಿ ಸೇವನೆಯೂ ಆಗಬಹುದು, ಖಾರ ಭರಿತ ಚಾಟ್ಸ್, ಜೋಳದ ರೊಟ್ಟಿ, ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನು … . .ಈಗಾಗಲೇ ಗೊತ್ತಾಗಿರಬಹುದು ಯಾವುದೀ ರಸ್ತೆ ಎಂದು. ರಾಜಾಜಿನಗರದ ಭಾಷ್ಯಂ ಸರ್ಕಲ್ ಮತ್ತು ಇ. ಎಸ್. ಐ ಆಸ್ಪತ್ರೆಯ ನಡುವಿನ ರಸ್ತೆ ಇದು.

ಆಕೃತಿ ಪುಸ್ತಕ ಮಳಿಗೆಯ ವಿಳಾಸ:

ಆಕೃತಿ ಬುಕ್ಸ್
ನಂ. 31/1, 12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010 

ಗುರುತು: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹತ್ತಿರ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ಅಂತರ್ಜಾಲ ಮಳಿಗೆ: http://akrutibooks.com/

(ಫೋಟೋ ಕೃಪೆ: ಗುರುಪ್ರಸಾದ್)

ನಮ್ಮ ನಡುವಿನ ಅಪರೂಪದ ಕತೆಗಾರ ವಸುಧೇಂದ್ರ

ಮೇ 16, 2010

ಫೆಬ್ರವರಿ, ೨೦೦೯ರಲ್ಲಿ  ಮೇ ಫ್ಲವರ್  ಅಂಗಳದಲ್ಲಿ ನಮ್ಮ ನಡುವಿನ ಅಪರೂಪದ ಕತೆಗಾರ ವಸುಧೇಂದ್ರರೊಡನೆ ಒಂದು ಮಾತು-ಕತೆ ಕಾರ್ಯಕ್ರಮ ನಡೆಯಿತು. ಹಂಪಿ ಎಕ್ಸ್‌ಪ್ರೆಸ್ಸ್ ಕೃತಿ ಮಾಸ್ತಿ ಕಥಾ ಪ್ರಶಸ್ತಿಯನ್ನು ಗಳಿಸಿರುವ ಈ ಸಂದರ್ಭದಲ್ಲಿ ಅಂದು ನಡೆದ ಮಾತುಕತೆಯಲ್ಲಿ ನೆನಪಿನಲ್ಲಿರುವ ಕೆಲವು ತುಣುಕುಗಳು ಇಲ್ಲಿವೆ.

ತಮ್ಮ ಕುಟುಂಬದಲ್ಲಿ ಸಾಹಿತ್ಯಿಕ ವಾತಾವರಣವಿಲ್ಲದಿದ್ದರೂ ಬಹುಶಃ ತಾವು ಕತೆಗಾರರಾಗಿದ್ದಕ್ಕೆ ಸ್ಪೂರ್ತಿ ತಮ್ಮ ತಾಯಿ ಎನ್ನುತ್ತಾರೆ ವಸುಧೇಂದ್ರ. ಕತೆ ಹೇಳುವುದು, ಬರೆಯುವುದು ಒಂದೇ ಉದ್ದೇಶದ ವಿಭಿನ್ನ ಅಭಿವ್ಯಕ್ತಿಗಳಷ್ಟೇ. ಚಿಕ್ಕಂದಿನಿಂದಲೂ ತಾಯಿಯಿಂದ ಕೇಳಿದ ಕತೆಗಳು ತಾವು ಕತೆಗಾರರಾಗಲು ಪೂರಕವಿರಬಹುದು. ತನ್ನ ಜೀವನದ ಅತಿ ಸಣ್ಣ ವಿಷಯವನ್ನೂ ಮಹತ್ವದ್ದೆಂಬಂತೆ ಅನೇಕ ರಂಜನೀಯ ವಿಶೇಷಣಗಳೊಂದಿಗೆ ಆಕೆ ಹೇಳುತ್ತಿದ್ದ ಪರಿ ಯಾವ ಕತೆ/ಕತೆಗಾರನಿಗೂ ಕಡಿಮೆಯಿರಲಿಲ್ಲ.

ತಮ್ಮ ಸಾಫ್ಟ್‌ವೇರ್ ವೃತ್ತಿ ಜೀವನದಲ್ಲಿ ಪ್ರಪಂಚದ ಹಲವೆಡೆ ಪಯಣಿಸಿರುವ ಇವರು ಲಂಡನ್ನಲ್ಲಿದ್ದಾಗ ಅನೇಕ ಉತ್ತಮ ಚಲನಚಿತ್ರಗಳನ್ನು ನೋಡಿದರು. ಕಚೇರಿಯಲ್ಲಿ ನಿಗದಿತ ವೇಳೆಯಷ್ಟೇ ಕೆಲಸ ಮಾಡುವ ಪರಿಪಾಠವಿರುವ ಆ ದೇಶದಲ್ಲಿ ಅವರಿಗೆ ದೊರೆತ ವಿಫುಲ ವಿರಾಮ ಸಮಯ ಕಳೆಯಲು ಅವರು ರೂಢಿಸಿಕೊಂಡಿದ್ದು ಪ್ರಪಂಚದೆಲ್ಲೆಡೆಯ ಉತ್ತಮ ಚಲನಚಿತ್ರಗಳನ್ನು ನೋಡುವ ಹವ್ಯಾಸ. ಬಹುಶಃ ಆಗಲೇ ತಾವ್ಯಾಕೆ ಕತೆ ಬರೆಯಬಾರದು ಅನಿಸಿದ್ದು. ಒಂದೇ ಸಮನೇ ಅನೇಕ ಕತೆಗಳನ್ನು ಬರೆದರು. ಆದರೆ ಸಾಹಿತ್ಯ ವಲಯದಲ್ಲಿ ಕಂಡು ಕೇಳಿರದ ಇವರ ಕತೆಗಳನ್ನು ಪ್ರಕಾಶಿಸಲು ಯಾರೂ ಮುಂದೆ ಬರಲಿಲ್ಲ. ಈ ಕತೆಗಳನ್ನ ಯಾರು ಓದುತ್ತಾರೆ ಹೋಗ್ರೀ ಎಂದು ಬಾಗಿಲು ತೋರಿಸಿದ್ದೂ ಇದೆ. ಆಗಲೇ ಅವರಿಗೆ ಹೊಳೆದದ್ದು ತಮ್ಮ ಕತೆಗಳನ್ನು ತಾವೇ ಏಕೆ ಪ್ರಕಟಿಸಬಾರದೆಂದು. ಅಂತೆಯೇ ಧೈರ್ಯ ಮಾಡಿ ತಮ್ಮ ಕತೆಗಳನ್ನು ತಾವೇ ಪ್ರಕಟಿಸಿದರು. ಉತ್ತರ ಕರ್ನಾಟಕದ ಸೊಗಡಿರುವ ಒಂದು ಸರಳ, ಚಂದವಾದ ಹೆಸರಿನ ಛಂದ ಪುಸ್ತಕ ಹುಟ್ಟಿದ್ದು ಹೀಗೆ. ಇದೇ ಸಮಯದಲ್ಲಿ ಅವರು ನೆನಸಿಕೊಳ್ಳುವುದು ತಮ್ಮ ಕತೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಕನ್ನಡಪ್ರಭ ಪತ್ರಿಕೆಯನ್ನು. ಹೊಸ ಬರಹಗಾರರಿಗೆ ಎದುರಾಗುವ ಎಡರು ತೊಡರುಗಳನ್ನು ಕಣ್ಣಾರೆ ಕಂಡ ಫಲ ಹೊಸ ಬರಹಗಾರರನ್ನು ತಮ್ಮ ಛಂದ ಪುಸ್ತಕದ ಮೂಲಕ ಪ್ರೋತ್ಸಾಹಿಸಿದ್ದು.

ಈಗಷ್ಟೇ 5 ಯಶಸ್ವೀ ಸಂವತ್ಸರಗಳನ್ನು ಕಂಡಿರುವ ಛಂದ ಪುಸ್ತಕ ಈಗ ಸಾಹಿತ್ಯ ವಲಯದಲ್ಲಿ ಮನೆ ಮಾತಾಗಿದೆ. ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ತಾವೇ ಖುದ್ದು ಈ ಪುಸ್ತಕ ತೊಗೋಳ್ಳಿ ಚೆನ್ನಾಗಿದೆ ಎಂದು ಪುಸ್ತಕ ಮಾರಿದ್ದೂ ಇದೆ. ಜೊತೆ ಜೊತೆಗೇ ‘ವಸುಧೇಂದ್ರಾನಾ, ಮಡಿ ಮೈಲಿಗೆ ಏನೂ ಇರಲ್ಲ ಇವರ ಬರವಣಿಗೆಯಲ್ಲಿ’ ಎಂಬ ಓದುಗರ ನುಡಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾದದ್ದೂ ಇದೆ.

ಯಶವಂತ ಚಿತ್ತಾಲರು ಒಂದೆಡೆ ಹೇಳಿದ್ದಾರೆ. ಅಮ್ಮ, ನಮ್ಮ ಶಾಲೆಯಲ್ಲಿ ಇವತ್ತು ಏನಾಯ್ತು ಗೊತ್ತಾ? ಅನ್ನುವ ಮಗುವಿನ ಮಾತಿನಲ್ಲೂ ಒಂದು ಕತೆಯಿದೆ ಎಂದು. ಅಂತೆಯೇ ಪ್ರತಿಯೊಬ್ಬರಲ್ಲೂ ಕತೆ ಹೇಳುವ ಪ್ರತಿಭೆಯಿರುತ್ತದೆ ಎನ್ನುವ ವಸುಧೇಂದ್ರ ಕತೆಗಳು ಓದುಗರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಸರಳವಾಗಿರಬೇಕು ಅನ್ನುತ್ತಾರೆ. ನಾನು ಬರೆಯುವುದೇ ಹೀಗೆ. ನಿಮ್ಮ ಬುದ್ಧಿಮತ್ತೆಗೆ ಸಾಧ್ಯವಾದರೆ ಅರ್ಥ ಮಾಡಿಕೊಳ್ಳಿ ಎನ್ನುವ ಧೋರಣೆ ಇವರದ್ದಲ್ಲ. ತಮ್ಮ ಛಂದ ಪುಸ್ತಕ ಮುಖೇನ ಅನೇಕ ಎಲೆಮರೆಯ ಬರಹಗಾರರನ್ನು ಪರಿಚಯಿಸಿದ್ದಾರೆ. ಇವರನ್ನು ನೀವು ಒಮ್ಮೇ ಕೇಳಿ ನೋಡಿ, ನಿಮ್ಮ ಪ್ರಕಾಶನದ ಯಾವ ಪುಸ್ತಕ ಚೆನ್ನಾಗಿದೆ ಎಂದು. ತಮ್ಮ ಪುಸ್ತಕಕ್ಕಿಂತ ಇನ್ನೆಲ್ಲರ ಪುಸ್ತಕಗಳೂ ತುಂಬಾ ಚೆನ್ನಾಗಿದೆ. ನನ್ನ ಪುಸ್ತಕ ಓದುವ ಮುನ್ನ ಅವನ್ನು ಓದಿ ಅನ್ನುವ ವಿನಮ್ರ ಮನಸ್ಸು ಅವರದು.

ಕೋಟ್ಯಾಂತರ ಮಂದಿ ಕನ್ನಡಿಗರಿರುವ ನಾಡಿನಲ್ಲಿ ಯಾವುದೇ ಪುಸ್ತಕದ ಒಂದೆರಡು ಸಾವಿರಪ್ರತಿಗಳು ಮಾರಾಟವಾಗುವುದೇ ಒಂದು ಸಾಧನೆಯೆಂದು ಖುಷಿ ಪಡಬೇಕಾದ ಪರಿಸ್ಥಿತಿ ನಿಜಕ್ಕೂ ವಿಪರ್ಯಾಸವಲ್ಲವೇ ಎಂದು ಪ್ರಶ್ನಿಸುತ್ತಲೇ ಹೆಚ್ಚು ಹೆಚ್ಹು ಕನ್ನಡಿಗರು ಬರೆಯುವತ್ತ ಒಲವು ತೋರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸಪಡುತ್ತಾರೆ. ಪುಸ್ತಕ, ಮಾರಾಟದ ಸರಕಾಗಬಾರದು ಬದಲಿಗೆ ಓದುಗನಿಗೆ ಪುಸ್ತಕದ ಬಗ್ಗೆ ಪ್ರೀತಿ ಹುಟ್ಟಿ ಓದುವ ಹವ್ಯಾಸ ಬೆಳೆಯಬೇಕೆಂಬುದು ಅವರ ಆಶಯ. ಯಾವುದೇ ಬರವಣಿಗೆಯನ್ನು ಸರಿ ತಪ್ಪುಗಳ ಚೌಕಟ್ಟಿನಲ್ಲಿ ನೋಡುವ ಮನೋಭಾವ ಇವರದ್ದಲ್ಲ. ಎಲ್ಲ ಬರವಣಿಗೆಯೂ ಲೇಖಕನ ಪ್ರತಿಭೆಯ, ಪರಿಶ್ರಮದ ಫಲಶ್ರುತಿ ಎಂಬ ಅಭಿಪ್ರಾಯ ಇವರದ್ದು.

ಕತೆಗಳು ಹುಟ್ಟುವುದು ನಾವು ನೋಡಿದ, ಬೆಳೆದು ಬಂದ ಪರಿಸರದಲ್ಲೇ ಎನ್ನುವ ಇವರು, ತಮ್ಮ ಕತೆಗಳನ್ನು ಯಾವುದೇ ಜಾತಿ, ಪಂಥದೊಡನೆ ಗುರುತಿಸಿಕೊಳ್ಳಲು ನಯವಾಗಿಯೇ ನಿರಾಕರಿಸುತ್ತಾರೆ. ಒಬ್ಬ ಬುದ್ಧಿವಂತ ಆದರೆ ಕೆಟ್ಟ ಮನುಷ್ಯನಿಗಿಂತ, ಮುಗ್ಧ ಆದರೆ ಒಳ್ಳೆಯ ವ್ಯಕ್ತಿಯ ಸ್ನೇಹ ಒಡನಾಟವನ್ನು ತಾನು ಇಷ್ಟ ಪಡುವೆ ಎನ್ನುವ ಇವರು, ಕೆಟ್ಟದ್ದು ಯಾವ ರೂಪದಲ್ಲಿ ಬಂದರೂ ಅದು ಕೆಟ್ಟದ್ದೇ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ನಾವು ಪ್ರಪಂಚದ ಯಾವ ಮೂಲೆಯಲ್ಲೇ ಇರಲಿ, ಆ ನೆಲದ ಬಗ್ಗೆ ಪ್ರೀತಿ, ಅಭಿಮಾನವಿರಬೇಕೇ ಹೊರತು ಅಲ್ಲಿನ ಕುಂದುಕೊರತೆಗಳ ಬಗ್ಗೆ ಕೊರಗು, ತಿರಸ್ಕಾರ ಮನೋಭಾವ ಇರಬಾರದೆನ್ನುವ ವಸುಧೇಂದ್ರ ಬೆಂಗಳೂರಿನ ಅಂಕೆಯಿಲ್ಲದ ಟ್ರಾಫಿಕ್ ತನ್ನ ಸಾಹಿತ್ಯ ಕೃಷಿಗೆ ಪ್ರೋತ್ಸಾಹದಾಯಕವಾಗಿದೆ ಅನ್ನುತ್ತಾರೆ!

ವಸುಧೇಂದ್ರ ಕತೆ ಬರೆಯಲು ಷುರು ಮಾಡಿದಾಗ ಬ್ಲಾಗ್ ಲಗ್ಗೆ ಇಲ್ಲದಿದ್ದು ಓದುಗರ ಪಾಲಿಗೆ ಒಳ್ಳೆಯದೇ ಆಯಿತು. ಇಲ್ಲವಾದರೆ ಅವರು ಛಂದ ಪುಸ್ತಕದ ಬದಲು ಛಂದವಾದ ಬ್ಲಾಗ್‌ನ ಒಡೆಯರಾಗುತ್ತಿದ್ದರೋ ಏನೋ. ಎಷ್ಟೊ ಬಾರಿ ಅನಿಸಿದ್ದಿದೆ, ಅನೇಕ ಉತ್ತಮ ಬರಹಗಳು ಬ್ಲಾಗ ಲೋಕದ ಸೀಮಿತ ಓದುಗರನ್ನಷ್ಟೆ ತಲುಪಿ ನೇಪಥ್ಯಕ್ಕೆ ಸರಿಯುತ್ತಿವೆ ಎಂದು.

ವಸುಧೇಂದ್ರರ ಕೃತಿಗಳು:

ನಮ್ಮಮ್ಮ ಅಂದ್ರೆ ನಂಗಿಷ್ಟ
ಯುಗಾದಿ
ಇ-ಕಾಮರ್ಸ್
ಮನೀಷೆ
ಕೋತಿಗಳು ಸಾರ್ ಕೋತಿಗಳು
ಚೇಳು
ಮಿಥುನ (ಅನುವಾದಿತ ಕೃತಿ)
ಹಂಪಿ ಎಕ್ಸ್‌ಪ್ರೆಸ್ಸ್

ವಸುಧೇಂದ್ರರ ಲೇಖನಿಯಲ್ಲಿ ಮತ್ತಷ್ಟು ಕೃತಿಗಳು ಮೂಡಿಬರಲಿ, ಮೇ ಫ್ಲವರ್ ಅಂಗಳದಲ್ಲಿ ಓದುಗರೊಬ್ಬರು ಆಶಿಸಿದಂತೆ ಕಾದಂಬರಿಗಳೂ ಮೂಡಿಬರಲಿ, ಪ್ರಶಸ್ತಿಗಳನ್ನು ಗೆಲ್ಲಲಿ ಎನ್ನುವುದು ಅವರ ಎಲ್ಲ ಓದುಗರ ಹೃತ್ಪೂರ್ವಕ ಹಾರೈಕೆ.

(ದಟ್ಸ್ ಕನ್ನಡದಲ್ಲಿ ಪ್ರಕಟಿತ ಲೇಖನ)

(ವಸುಧೇಂದ್ರ ಅವರ ಕಾದಂಬರಿ ’ಹರಿ ಚಿತ್ತ ಸತ್ಯ’ ಇತ್ತೀಚಿಗಷ್ಟೇ ದೇಶಕಾಲ ವಿಶೇಷದಲ್ಲಿ ಪ್ರಕಟಗೊಂಡಿದೆ ಹಾಗೂ ರಕ್ಷಕ ಅನಾಥ ಕೃತಿ ಕಳೆದ ವಾರ ಬಿಡುಗಡೆಯಾಗಿದೆ)

ಹಣದುಬ್ಬರ

ಮೇ 15, 2010

ಜ್ಯೂಸ್ ಗ್ಲಾಸ್ ಸ್ವಲ್ಪ ಚಿಕ್ಕದಾಗಿದೆ ಅನ್ನಿಸ್ತು ಸಂದೀಪಂಗೆ. ಅಥವಾ ತನ್ನ ಕುಬ್ಜ ದೇಹ ತನ್ನ ಸುತ್ತಮುತ್ತಲಿರುವುದನ್ನೆಲ್ಲ ತನ್ನಂತೆಯೇ ಎಂಬ ಭಾವನೆಯನ್ನು ಮೂಡಿಸ್ತಾ ಇದೆಯೇನೋ ಅನ್ನಿಸ್ತು. “ಸಾಲಾ ಜ್ಯೂಸ್ ಕ ಗಿಲಾಸ್ ಛೋಟಾ ಕರ್ ದಿಯಾ ಹೈ” ಎಂದು ಜ್ಯೂಸ್ ಗ್ಲಾಸ್ ಹೊತ್ತು ಪಕ್ಕದಲ್ಲೇ ಕೂತ ಬಿಹಾರದ ರಾಕೇಶ್. 2.5 ಪಾಸಿಟಿವ್ ಪವರ್ ಇರುವ ತನ್ನ ಕನ್ನಡಕ ಏನೂ ತಪ್ಪು ಮಾಡಿಲ್ಲ ಅಂತ ಮನಸ್ಸು ನಿರಾಳ ಆಯ್ತು ಸಂದೀಪಂಗೆ.

ಹಣದುಬ್ಬರ ಒಂಭತ್ತು ಹತ್ತು, ಹನ್ನೊಂದಾಯ್ತು ಅಂತ CNN IBN ಉದ್ಘೋಷಕಿ ಪ್ರಪಂಚ ಪ್ರಳಯವಾದ ಹಾಗೆ ದಿನೇ ದಿನೇ ಉದ್ಗರಿಸುತ್ತಿದ್ದರೂ ಅದರ ಬಿಸಿ ಅಷ್ಟಾಗಿ ತಗಲಿರಲಿಲ್ಲ. ಉಬ್ಬರದ ಅರಿವಾದದ್ದು ಕೆಫೆಟೇರಿಯದಲ್ಲಿ ಹತ್ರುಪಾಯಿ ಕೊಟ್ಟು ಚೌಚೌ ಭಾತ್, ಇಡ್ಲಿ, ವಡೆ ತಿಂದು ವೆಂಡಿಂಗ್ ಮೆಶೀನಿನ ಕಾಫಿ ಅಥವಾ ಕೂಪನ್ ಹಾಕಿ ತೊಗೋಬೇಕಿರೋ ಜ್ಯೂಸ್ ಅನ್ನು ಹಳೇ ಬಿಟಿಎಸ್ ಟಿಕೆಟ್ ಅಥವಾ ಕಾಗದದ ಮಡಿಕೆ ಹಾಕಿ ತೊಗೊಂಡು ಕುಡಿದ್ರೂ 12ಕ್ಕಾಗಲೇ ಹೊಟ್ಟೆ ತಾಳ ಹಾಕಲಿಕ್ಕೆ ಶುರುವಾದಾಗ! “ಹೇ ವೈ ಆರ್ ಯೂ ಈಟಿಂಗ್ ಲೈಕ್ ಅ ಪಿಗ್” ಅಂತ ಅಮ್ಮ ಮಾಡಿದ ಮೆಂತ್ಯದ ದೋಸೆ ಐದನೆಯದನ್ನ ಚಪ್ಪರಿಸುವಾಗ ವಂದನಾ ಉಸುರಿದ್ದಳು ಒಮ್ಮೆ. ಏನೋ ಅದು ಇಂಗ್ಲಿಷ್ನಲ್ಲಿ ಗುಸು ಗುಸು ಅಂತ ಅಮ್ಮ ಅಂದಾಗ ಹಂದಿ ಅಂತಾಳೆ ನಿನ್ನ ಸೊಸೆ ಅಂದರೆ ಸರಿಯಾಗಿ ತರಾಟೆಗೆ ತೊಗೋತಾಳೆ ಅಂದ್ಕೊಂಡು ಏನಿಲ್ಲಮ್ಮಾ ನಾನು ವರಾಹಾವತಾರ ಅಂತಾಳೆ ಅಂದಿದ್ದಕ್ಕೆ ಪರವಾಗಿಲ್ಲ ಗಂಡನ್ನ ಈ ಕಾಲದ ಹುಡ್ಗೀರೂ ದೇವ್ರು ಅಂತ ಭಾವಿಸ್ತಾರಲ್ಲ ಅಂತ ಅಮ್ಮಂಗೆ ಎಂಥಾ ಸೊಸೆಯನ್ನ ಆರಿಸಿದೆ ಅಂತ ಒಳಗೊಳಗೇ ಖುಷಿ ಆಯ್ತು. ಹೆಂಡ್ತಿ ಕೈ ಚೀಲ, ಅಮ್ಮ ತುತ್ತಿನ ಚೀಲ ನೋಡ್ತಾಳೇ ಅನ್ನೋ ಮಾತು ಎಷ್ಟು ಸತ್ಯ ಅನ್ನಿಸಿ ಆರನೇ ದೋಸೆಯನ್ನು ತಿನ್ನೋ ಚಪಲವನ್ನು ಹತ್ತಿಕ್ಕಿ ಕೈ ತೊಳ್ಕೊಂಡಿದ್ದ.

ಕೆಫೆಟೇರಿಯದ ಸಂತೃಪ್ತಿ ಕ್ಯಾಟರರ್ ಬೆಲೆ ಜಾಸ್ತಿ ಮಾಡಿದ್ರೆ ಐದಂಕಿ ಸಂಬಳ ತೊಗೊಳ್ಳೋ ಐಟಿ ಮಂದಿ ತನ್ನ ಕೌಂಟರ್ ಬಳಸಿ ಹೋಗಿ ಆ ಬದಿಯ ಸ್ಯಾಂಡ್‌ವಿಚ್ ತಿಂದು ಬಿಟ್ಟಿ ಕಾಫಿ ಕುಡಿಯೋ ಪೈಕಿ ಅಂದುಕೊಂಡು ತಾನು ಬಳಸುವ ಸೌಟು, ಸ್ಪೂನುಗಳ ಸೈಜ್ ಕಡಿಮೆ ಮಾಡಿಬಿಟ್ಟಿದ್ದ! ಅದರ ಅರಿವಾದದ್ದು ಸ್ವಲ್ಪ ನಿಧಾನವಾಗಿಯೇ! ಬರೀ ಚೌಚೌ ಭಾತ್ ಈಗ ಸಾಕಾಗಲ್ಲ ಜೊತೆಗೆ ಉದ್ದಿನ ವಡೆಯನ್ನೂ ತಿಂದು ಕಾಫಿ ಕುಡಿದು ಹೋದರೆ ಷೇರು ಮಾರುಕಟ್ಟೆಯ ಕುಸಿತವನ್ನು, ಲೇ ಆಫ್ ನ್ಯೂಸ್‌ಗಳನ್ನು ಅರಗಿಸಿಕೊಂಡು ಕೆಲಸದ ಕಡೆ ಗಮನ ಹರಿಸೋಕ್ಕಾಗೋದು! ಇಂದಿನ ದಿನವೇ ಶುಭದಿನವೂ ಎಂಬ ಪುರಂದರರಕೀರ್ತನೆಯನ್ನು ದಿವಸಾ ಮನಿಕಂಟ್ರೋಲ್‌ನಲ್ಲಿ ಕೇಳಿ ಕೇಳಿ ರೋಸಿದ್ದ ಸಂದೀಪ ಈಗ ಷೇರು ಮಾರುಕಟ್ಟೆಯ ಕಡೆ ಅಪ್ಪಿ ತಪ್ಪಿಯೂ ಇಣುಕು ಹಾಕೋಲ್ಲ. ತನಗೆ ಮಾತ್ರ ಈ ನಿರುತ್ಸಾಹಾನಾ ಜೀವನದಲ್ಲಿ ಅಂದ್ಕೋತಾ ಇದ್ದ ಹಾಗೇ ಡೊಮೈನ್ ಸ್ಪೆಶಲಿಸ್ಟ್ ಸುರೇಂದ್ರ ಬಂದು ಭುಜ ತಟ್ಟಿ “ಹೌ ಅಬೌಟ್ ಕಾಫಿ” ಅಂದ. ಮಗ ಕಾಫಿ ಬಿಸ್ಕತ್ ಬಿಟ್ಟಿ ಅಲ್ಲದೇ ಇದ್ರೆ ಪ್ಯಾಂಟ್ರಿ ಕಡೆ ತಲೆ ಹಾಕ್ತಾ ಇದ್ದನೋ ಇಲ್ಲವೋ ಅಂದ್ಕೊಂಡು ಜೊತೆಗೆ ಹೆಜ್ಜೆ ಹಾಕಿದ. ಮದುವೆಯಾದ ಒಂದು ವರ್ಷದಲ್ಲೇ ಬೆಂಗಳೂರಿನ ಯಾವ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಎಣ್ಣೆ, ಬೇಳೆ ಸಿಗುತ್ತೆ ಅನ್ನೋ ನಿಖರ ಅಂಕಿ ಅಂಶ ಇವನ ಹತ್ತಿರ ಇತ್ತು. ಈ ರಿಲೈಯನ್ಸ್ ಅಂಬಾನಿ ಭಾರೀ ಚಾಣಾಕ್ಷ ಈರುಳ್ಳಿ ಕಡಿಮೆ ಬೆಲೆಗೆ ಮಾರ್ತಾನೆ ಆದರೆ ಈರುಳ್ಳಿ ಆಸೆಗೆ ಇನ್ನೆಲ್ಲ ಸಾಮಾನನ್ನು ಒಂದು ರುಪಾಯಿ ಹೆಚ್ಚೇ ಕೊಟ್ಟು ತೊಗೋತೀವಿ ನಾವು ಅಂದ. ಇಲ್ವಲ್ಲ ರಿಲೈಯನ್ಸ್ ಕಾರ್ಡ್ ಇದ್ದರೆ ಕಡಿಮೆ ಆಗುತ್ತೆ  ಅಂದ ಸಂದೀಪ. ಕಿರು ನಗೆ ಬೀರಿದ ಸುರೇಂದ್ರ. ಅಂಬಾನಿಗೆ “loss leader” ತತ್ವ ನಮಗಿಂತ ಚೆನ್ನಾಗೇ ಗೊತ್ತು ಅಂದ. ಬಿಇ ಮಾಡುವಾಗ ಓದಿದ್ದು ಈಗೆಲ್ಲಿ ಜ್ನಾಪಕ ಇರುತ್ತೆ! ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರ್ತಾರೆ ಅಂತ ನಾವೆಲ್ಲ ರಿಲೈಯನ್ಸ್ ಫ್ರೆಶ್‌ಗೆ ಮುಗಿ ಬೀಳ್ತೀವಿ. ಆದರೆ ಈರುಳ್ಳಿ ಬಿಟ್ರೆ ಬೇರೆಲ್ಲ ವಸ್ತುಗಳೂ ಜಾಸ್ತಿ ಬೆಲೆ ಅನ್ನೋದನ್ನ ನಾವು ಗಮನಿಸೋದೇ ಇಲ್ಲ ಅಂದ. ಅಂಬಾನಿ ಕಾರ್ಡ್ ಕೊಟ್ಟಿರೋದು ನಮ್ಮ ಲಾಯಲ್ಟಿ ಚೆಕ್ ಮಾಡಕ್ಕೆ! ಬೆಲೆ ಜಾಸ್ತಿ ಮಾಡಿದ್ರೂ ಅವನ ಹತ್ರಾನೇ ಬರ್ತಾರೆ ಅಂತ ಗೊತ್ತಾದ್ಮೇಲೆ ಡಿಸ್ಕೌಂಟ್ ಕೊಡೋದನ್ನ ನಿಲ್ಲಿಸ್ತಾನೆ! ಅರೆ! ಇದೊಂಥರಾ ಹಗಲು ದರೋಡೆ ಅಲ್ವಾ ಅಂದಿದ್ದಕ್ಕೆ ನಿನಗೆ ದರೋಡೆ ಅವರಿಗೆ ಅದು marketing strategy ಅಂದ.

ಇವ್ನಿಗೇನೂ ಬೇರೆ ಕಡೆ ಕೆಲಸ ಹುಡುಕೋ ಧೈರ್ಯ ಇಲ್ಲ. ಜೀರೊ ಪರ್ಸೆಂಟ್ ಹೈಕ್ ಕೊಟ್ಟು ಬಡ್ತಿ ಕೊಡದೇ ಇದ್ರೂ ಸುಮ್ಮನೇ ಇರ್ತಾನೆ ಅನ್ನುವ ಧೈರ್ಯದಲ್ಲಿರೋ ಮ್ಯಾನೇಜರ್ ವೇಲಾಯುಧನ್ ರೀತಿಗೂ ರಿಲೈಯನ್ಸ್ strategyಗೂ ಸಾಮ್ಯ ಇದೆಯೇನೋ ಅನ್ನಿಸ್ತು. ಒಳ್ಳೇ ಹೈಕು, ಪ್ರಮೋಷನ್ ಕೊಡ್ದೇ ಇದ್ರೆ ಪೇಪರ್ ಹಾಕ್ತೀನಿ ಅಂತ ವಂದನಾ ಹೇಳ್ದಾಗ ಹೆಣ್ಣು ಹೆಂಗಸು ಅವಳಿಗೆ ಇರುವ ಧೈರ್ಯ ನನಗೆ ಇಲ್ವಲ್ಲ ಅಂತ ಸಂದೀಪಂಗೆ ಅನ್ನಿಸಿದ್ದಿದೆ. ಹಾಗೇ ಈಗಿನ ಹುಡುಗಿಯರು ಯಾವ ರೀತಿಯಲ್ಲೂ ಹುಡುಗರಿಗಿಂತ ಏನೂ ಕಡಿಮೆ ಇಲ್ಲ ಅನ್ನೋ ಸತ್ಯಾನೂ ಗೋಚರವಾಯ್ತು. ಈಗೀಗ ಐಟಿ ಹುಡುಗಿಯರು ಮದುವೆ ಮಾರುಕಟ್ಟೆಯಲ್ಲಿ  ಹುಡುಗರನ್ನು ತಿರಸ್ಕರಿಸುತ್ತಿರುವ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಡೊಮೈನ್ ಸರಿ ಇಲ್ಲ, ಟೇಕ್ ಹೋಮ್ ಕಮ್ಮಿ,ಪ್ರಾಡಕ್ಟ್‌ಗೆ ಭವಿಷ್ಯ ಇಲ್ಲ ತರಹೇವರಿ ಕಾರಣಗಳು. ವರದಕ್ಷಿಣೆ ಅಪರಾಧ ಯಾವ ಸೆಕ್ಷನ್‌ನಲ್ಲಿ ಬರುತ್ತೆ ಅನ್ನುವಷ್ಟು ಸಾಮಾನ್ಯ ಜ್ಞಾನವಿರುವ ಬುದ್ಧಿವಂತೆಯರು! ಹಿಂದೆ ಹುಡುಗರು ಹುಡುಗಿಯರನ್ನು ರಿಜೆಕ್ಟ್ ಮಾಡ್ತಾ ಇದ್ದದನ್ನೆಲ್ಲ ಈಗಿನ ಹುಡುಗಿಯರು ಒಮ್ಮೆಲೇ ಶತಮಾನಗಳ ಅಪಮಾನದ ವಿರುದ್ಧ ಸೇಡು ತೀರಿಸಿಕೊಳ್ಳೋ ಹುರುಪಿನಲ್ಲಿದ್ದಾರೋ ಏನೋ.

ವಂದನಾ ಸಂದೀಪನ್ನ ಒಪ್ಪಿಕೊಂಡಾಗ ಸದ್ಯ ಎಂದು ಒಂದು ದೀರ್ಘ ಉಸಿರನ್ನು ತೆಗೆದಿದ್ದ. ಸೌತ್ ಇಂಡಿಯದಲ್ಲೇ ಪರವಾಗಿಲ್ಲ. ಓದಿ ಐಟಿ ಉದ್ಯೋಗದಲ್ಲಿರೋ ಹುಡುಗಿಯರಿದ್ದಾರೆ. ನಮ್ಮ ಕಡೆ ಹುಡುಗಿಯರು ಹೆಚ್ಚು ಓದಲ್ಲ ಅಂತ ಪೇಚತ್ತುಕೊಂಡಿದ್ದ ಬಿಹಾರದ ರಾಕೇಶ್. ಅದೇ ಒಳ್ಳೆಯದೇನೋ ಅನ್ನಿಸಿತ್ತು. ತನ್ನಷ್ಟೆ ಸಂಬಳ ಗಳಿಸೋ ಹೆಂಡತಿ ಆಫೀಸಿಂದ ಬರ್ತಾ ಪಿಜ್ಜಾ ಪಾರ್ಸೆಲ್ ತಂದು ಅನಿಮಲ್ ಪ್ಲಾನೆಟ್‌ನ ಕೋತಿಗಳನ್ನು ನೋಡುತ್ತಾ ತುಟಿಗೆ ತಗಲಿಸದ ಹಾಗೆ ನಾಜೂಕಾಗಿ ತಿನ್ನುತ್ತಿದ್ದರೆ ಪಿಜ್ಜಾ ಸೇರದ (ಅದರ ಆಫ್ಟರ್ ಎಫೆಕ್ಟ್ ಕಾನ್ಸ್ಟಿಪೇಷನ್‌ಗೆ ಹೆದರಿ!) ಸಂದೀಪ ಅವಲಕ್ಕಿ ಮೊಸರು ಹಿಡ್ಕೊಂಡು ಟಿವಿಯಲ್ಲಿ  ಬರ್ತಾ ಇರೋ ಕೋತೀನೇ ನೋಡ್ತಾ ನಗ್ತಾ ಇದ್ದಾಳೋ ಅಥವಾ ತನ್ನ ದನಿಯೆತ್ತದ ಅಸಹಾಯಕತೆಯನ್ನೇ ನೋಡಿ ನಗ್ತಾ ಇದ್ದಾಳೋ ಗೊತ್ತಾಗದೆ ಅವಳನ್ನೊಮ್ಮೆ ಕೋತಿಗಳನ್ನೊಮ್ಮೆ ನೋಡ್ತಾ ಕೂತ. ವೇಲು ಇವತ್ತು ಆನ್‌ಸೈಟ್ ಆಪರ್ಚುನಿಟಿ ಇದೆ ಅಂತಾ ಇದ್ದ ಅಂದ. ಟಿವಿಯಿಂದ ಕಣ್ತೆಗೆಯದೆ ಹೌದಾ ಅಂದ್ಲು ತಣ್ಣಗೆ ವಂದನಾ. ಅವ್ಳಿಗೇನು ಅಮೆರಿಕಾ ಪಕ್ಕದ ಮನೆಯೇನೋ ಅನ್ನುವಷ್ಟು ಅತಿಯಾಗಿ ಓಡಾಡ್ತಾ ಇರ್ತಾಳೆ. ಮದ್ವೆ ಗೊತ್ತಾದಾಗಲಿಂದಲೂ ಪರದೇಶಕ್ಕೆ ಹೋಗ್ತೀನಿ ಅಂತಲೇ ಹೇಳುತ್ತಾ ಬಂದಿದ್ದ ಸಂದೀಪಂಗೆ ಎರ್ಡು ವರ್ಷ ಅದ್ರೂ ಘಳಿಗೆ ಕೂಡಿ ಬಂದಿರಲಿಲ್ಲ. ಈ ಸಾರಿಯಾದರೂ ನಿಜವಾಗಲಪ್ಪ ರಾಘವೇಂದ್ರ ಅಂದ್ಕೊಂಡ. ವಿಂಟರ್ ಕ್ಲೋತ್ಸ್ ಎಲ್ಲಿ ತೊಗೊಳ್ಳೋದು ಅಂದ. ಎಲ್ಲಿಗೆ ಹೋಗ್ತಾ ಇದ್ದೀಯ ಅಂದ್ಲು. ಅದೇ ಇನ್ನೂ ಒಗಟಿನ ವಿಷಯ. ಆದ್ರೂ ಸುಮ್ಮನೆ ಯುಎಸ್ ಅಂದ. ಮಾರಾಯಾ ಯುಎಸ್‌ನಲ್ಲಿ ಎಲ್ಲಿ ಅಂದ್ಲು. ಸುಮ್ನೆ ಇದ್ದ ಸಂದೀಪ. ಅವನ ಹತ್ರ ಉತ್ತರ ಇಲ್ಲ ಅಂತ ಗೊತ್ತಾಗಿ ಅವಳೂ ಮಾತು ಬೆಳೆಸಲಿಲ್ಲ.

ಮಾರನೇ ದಿನ ವೇಲು ಡು ಯೂ ಹ್ಯಾವ್ ಫ್ಯೂ ಮಿನಟ್ಸ್ ಅಂತ ಕರೆದು ದ ಲಾಂಗ್ ಪೆಂಡಿಂಗ್ ಆನ್‌ಸೈಟ್  ಆಪರ್ಚುನಿಟಿ ಈಸ್ ಕನ್ಫರ್ಮ್ದ್ (the long pending onsite opportunity is confirmed) ಅಂದ. ಮನಸ್ಸು ಗರಿಗೆದರಿತು. ಅಂತೂ ಇಂತೂ ಆನ್‌ಸೈಟ್ ಬಂತೂ ಅಂತ ಗುನುಗುನಿಸುವಷ್ಟರಲ್ಲಿ ತಣ್ಣನೆಯ ಬಾಂಬ್ ಸ್ಫೋಟವಾಯ್ತು. ಯೂ ವಿಲ್ ಬಿ ಆನ್‌ಸೈಟ್ ವಿತ್ ಅವರ್ ಪ್ರೀಮಿಯರ್ ಕ್ಲೈಯಂಟ್ ಅಂಡ್ ವಿಲ್ ಬಿ ವರ್ಕಿಂಗ್ ಇನ್  ರಿಲೈಯನ್ಸ್ ನಾಲೆಡ್ಜ್ ಸಿಟಿ ಇನ್ ಮುಂಬೈ (you will be onsite with our premier client and will be working in reliance knowledge city) ಅಂದ. ವಂದನಾ ರೈನ್ ಕೋಟ್ ಯಾವಾಗ ಶಾಪಿಂಗ್ ಮಾಡೋಣ ಅಂದು ನಕ್ಕ ಹಾಗಾಯ್ತು!

(ದಟ್ಸ್ ಕನ್ನಡದಲ್ಲಿ ಪ್ರಕಟಿತ ಲೇಖನ)

ಸಂಜೀವನ ಪಿಂಕ್ ಸ್ಲಿಪ್ ಪ್ರಸಂಗ

ಮೇ 15, 2010

ಸಂತೋಷಕ್ಕೆ.. ಹಾಡೂ ಸಂತೋಷಕ್ಕೆ.. ಗುನುಗುನಿಸುತ್ತಾ ತನ್ನ ಕ್ಯೂಬಿಕಲ್‌ಗೆ ಬಂದ ಸಂಜೀವ. ಈ ಹಾಡು ಈಗ್ಯಾಕೆ ಅವನ ನೆನಪಿಗೆ ಬಂತು? ಕಂಪನಿ  ಕೊಡದೇ ಇದ್ದರೂ ಚಿದಂಬರಂ ತೆರಿಗೆ  ಬದಲಾವಣೆಗಳಿಂದ ಸಿಕ್ಕ ಮದ್ಯಂತರ ಸಂಬಳ ಏರಿಕೆಯಿಂದಲಾ ಅಂತ ಯೋಚನೆ ಮಾಡಿದಾಗ ಸಿಕ್ತು ಲಿಂಕ್. ಆವತ್ತು ಭಾನುವಾರ ರಾತ್ರಿ ಪಲ್ಲವಿ ಝ್ಹೀ ಟೀವಿಯಲ್ಲಿ ಲಿಟ್ಲ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಸ್ಪರ್ದೆಯಿಂದ ಹೊರಬಿದ್ದ ಪುಟಾಣಿಯೊಬ್ಬನನ್ನು ಹಾಡೂ ಹಾಡೂ ಅಂತ ಬಲವಂತ ಮಾಡಿದಾಗ ಆ ಪುಟ್ಟ ಹುಡುಗ ಗದ್ಗದಿತನಾಗಿ ಕಣ್ಣು ತುಂಬಿಕೊಂಡು ಹಾಡಿದ ಹಾಡು ಅದು.

ಶಂಕರ್‌ನಾಗ್ “ಗೀತ” ಚಿತ್ರದಲ್ಲಿ ಹಾಡಿರುವ ಈ ಹಾಡು ಕೇಳಿದಾಗ ಎಲ್ಲರಿಗೂ ಕುಣಿಯುವ ಉತ್ಸಾಹ ಮೂಡಿ ಬರುತ್ತದೆ. ಆದ್ರೆ ಇಲ್ಲಿ ನೆರೆದಿದ್ದವರೆಲ್ಲರ ಕಣ್ಣುಗಳು ತೇವಗೊಂಡವು ಪುಟಾಣಿಯ ದುಃಖವನ್ನು ನೋಡಿ. ಎಲ್ಲಾ ಕಡೆ ಕಟ್‌ಥ್ರೋಟ್ ಕಾಂಪಿಟೇಷನ್. ಫನ್ ಸಿನೆಮಾದಲ್ಲಿ ಕೂತು ತಾರೆ ಜಮೀನ್ ಪರ್ ಚಿತ್ರ ನೋಡ್ತಾ ಕಣ್ತುಂಬಾ ಅತ್ಕೊಂಡು ಬಾಯ್ತುಂಬಾ ಬಿಟ್ಟಿ ಸಿಕ್ಕ ಕೋಕ್ ಬಸಿದುಕೊಂಡು ಅಮೀರ್ ಖಾನ್‌ನನ್ನು ಮತ್ತಷ್ಟು ಅಮೀರನನ್ನಾಗಿಸಿದ್ದಷ್ಟೇ ಬಂತು ಭಾಗ್ಯ. ಅಪ್ಪ ಅಮ್ಮ ಬದಲಾಗಲ್ಲ. ಇಂಥ ಸ್ಪರ್ಧೆಗಳಿಗೆ ತಮ್ಮ ಮಕ್ಕಳನ್ನು ತಳ್ತಾನೇ ಇರ್ತಾರೆ. ಆ ವಿಷಯದಲ್ಲಿ ಸಂಜೀವ ಅದೃಷ್ಟವಂತ. ಅವನಪ್ಪ ಅಮ್ಮ ಮನಸ್ಸಿಟ್ಟು ಶ್ರದ್ಧೆಯಿಂದ ಓದು ಅನ್ನುವುದನ್ನು ಬಿಟ್ಟರೆ ಮತ್ಯಾವ ಒತ್ತಡವನ್ನೂ ಅವನ ಮೇಲೆ ಹೇರಲಿಲ್ಲ.

ಔಟ್‌ಲುಕ್‌ನಲ್ಲಿ ರೆಡ್ ಅಲರ್ಟ್ ಹೊತ್ತ ಮೈಲ್ ಇತ್ತು. ಪ್ಲೀಸ್ ಮೀಟ್ ಮಿ ಇನ್ ಮೈ ಆಫೀಸ್ ಆಸ್ ಸೂನ್ ಆಸ್ ಯು ಕಂ ಅಂತ ಮ್ಯಾನೇಜರ್ ಶಿವಕುಮಾರ್ ಪಳನಿಯಪ್ಪನ್‌ನಿಂದ. ಎಲ್ರೂ ಶಿವ ಅಂತಲೇ ಕರೆಯೋದು. ಈಗಿನ್ನೂ 8.30. ತಿಂಡಿ ತಿಂದ್ಕೊಂಡು ಆಮೇಲೆ ಹೋದರಾಯ್ತು ಅಂದ್ಕೊಂಡ್ರೂ ಆಮೇಲೆ ಕೆಫಟೀರಿಯದಲ್ಲಿ ಇರೋದ್ರಲ್ಲಿ ಸ್ವಲ್ಪ ಎಡಿಬಲ್ ಆಗಿರೋ ಇಡ್ಲಿ ತಿನ್ತಾ ಕೂತರೆ ಅಲ್ಲಿಗೇ ಫೊನ್ ಬರುತ್ತೆ ಶಿವಂದು. ಮೈಲ್ ನೋಡ್ಲಿಲ್ವಾ ಅಂತ. ಇವನ್ದು ಸಹವಾಸ ಕಷ್ಟ. ಬೆಳಿಗ್ಗೆ 5 ಗಂಟೆಗೆ ತಯಾರಾಗಿದ್ದ ಇಡ್ಳಿ 8.30ಕ್ಕೆ ತಿನ್ನೋಷ್ಟೊತ್ತಿಗೆ ಮಲ್ಲಿಗೆ ಇಡ್ಲಿ ಅಂತ ನಾಮಕರಣ ಹೊಂದಿದ್ರೂ ಗೋರ್ಕಲ್ಲಿಗೆ ಸಮನಾಗಿರುತ್ತೆ. ಶಿವನ ಫೋನ್ ಬಂತು ಅಂತ ಇತ್ತ ಉಗುಳಲೂ ಆಗದೆ ನುಂಗಲೂ ಆಗದೆ ಇರುವ ಪರಿಸ್ಠಿತಿ ತಂದುಕೊಳ್ಳೋದಕ್ಕಿಂತ ಹೋಗಿ ಏನು ವಿಷಯಾ ಅಂತ ನೋಡೋಣ ಅಂದ್ಕೊಂಡ ಸಂಜೀವ.

ಅಲ್ದೇ ರೆಡ್ ಅಲರ್ಟ್ ಬೇರೆ ಇದೆ ಏನು ವಿಷಯಾನೋ ಅಂತ ಡೋರ್ ನಾಕ್ ಮಾಡಿ ಒಳಗೆ ಹೋದ. ಯಾವ್ದೋ ಈ ಮೆಯ್ಲ್ ನೋಡ್ತಾ ಇದ್ದವ್ನು ಹೈ ಸಂಜೀವ ಪ್ಲೀಸ್ ಕಂ ಅಂತ ಕೂತ್ಕೊಳ್ಳೋಕೆ ಹೇಳಿ ತನ್ನ ಔಟ್‌ಲುಕ್ ಮಿನಿಮೈಸ್ ಮಾಡಿ ವಾಟ್ಸ್ ಅಪ್ ಮ್ಯಾನ್ ಹೌ ಈಸ್ ಯುವರ್ ಫ್ರೆಂಡ್ ಜೀವನಿ ಅಂದ. ವ್ಯಾಲೆಂಟೈನ್ಸ್ ಡೇ ದಿವಸ ಲೀವಿಂಗ್ ಅರ್ಲಿ ಮೆಯ್ಲ್ ಕಳ್ಸಿದ್ದಕ್ಕಾ ಈ ಪ್ರಶ್ನೆ ಅನ್ನಿಸಿದ್ರೂ ಯಾಕೋ ಈ ಪ್ರಶ್ನೆ ಬೆಳಿಗ್ಗೆ ಬೆಳಿಗ್ಗೆ ಕೇಳಿದ್ದು ಸ್ವಲ್ಪ ಅಸಂಬದ್ಧ ಅನ್ನಿಸ್ತು ಸಂಜೀವಂಗೆ. ಟೀಮ್ ಔಟಿಂಗ್‌ಗೆ ಅಂತ ಹೊರಗೆ ಹೋದಾಗ ಅಥವಾ ಸಿಗರೇಟ್ ಸೇದುವಾಗ ಕಂಪನಿಗೆ ಅಂತ ಟೀಮ್ ಹುಡ್ಗರನ್ನ ಹೊರಗೆ ಕರ್ಕೊಂಡು ಹೋಗಿ ಅವರ ಪರ್ಸನಲ್ ವಿಷಯಾನ ತಿಳ್ಕೊಂಡು ಹಾಗೇ ಜ್ಞಾಪಕ ಇಟ್ಕೊಳ್ಳೋದು ಸಮಯಕ್ಕೆ ತಕ್ಕ ಹಾಗೆ ಉಪಯೋಗಿಸಿಕೊಳ್ಳೋದು ಶಿವನಿಗೆ ಕರಗತ. ಪೀಪಲ್ಸ್ ಮ್ಯಾನ್ ಅಂದ್ರೆ ನಿಜಕ್ಕೂ ಇವನೇ.

ಮೊನ್ನೆ ವ್ಯಾಲೆಂಟೈನ್ಸ್ ಡೇ ದಿವಸ ಮದ್ಯಾಹ್ನ ಅಜಯ್ ತನ್ನ ವುಡ್‌ಬಿ ಜೊತೆ APACHE ಏರಿಕೊಂಡು ಹೋಗ್ತಾ ಇರುವಾಗ ಹೆಡ್ ಆನ್ ಕೊಲಿಶನ್ ತಪ್ಪಿಸಿಕೊಂಡ್ರೂ ಹುಡುಗಿಯ ಕೈಬೆರಳ ಮೂಳೆ ಮುರಿದು ಏನು ಮಾಡಬೇಕು ಅಂತ ತೋಚದೆ ಅಳುತ್ತಾ ಶಿವನಿಗೆ ಫೋನ್ ಮಾಡ್ದಾಗ ಡೋಂಟ್ ವರಿ ಮ್ಯಾನ್ ಐಯಾಮ್ ದೇರ್ ಅಂತ ಹೇಳಿ ಪೋಸ್ಟ್ ಲಂಚ್ ಮೀಟಿಂಗ್ ರದ್ದು ಮಾಡಿ ಆಕ್ಸಿಡೆಂಟ್ ಆದ ಸ್ಥಳಕ್ಕೆ ಹೋಗಿ ಕಾರಲ್ಲಿ ಇಬ್ರನ್ನೂ ಕರ್ಕೊಂಡು ಹೋಗಿ ಹುಡ್ಗೀಗೆ ಚಿಕಿತ್ಸೆ ಕೊಡಿಸಿ ಮತ್ತೆ ಮನೆವರೆಗೂ ಕರ್ಕೊಂಡು ಹೋಗಿ ಬಿಟ್ಟಿದ್ದ.

ಒರಿಸ್ಸಾದಿಂದ ವಲಸೆ ಬಂದಿರುವ ಬಿಸ್ವಜಿತ್ ಬರೀ ನಾನ್‌ವೆಜ್ ತಿಂದೂ ತಿಂದೂ ಪೈಲ್ಸ್ ತೊಂದರೆ ಬಂದು ಆಫೀಸಿಗೆ 3 ದಿವ್ಸ ಬರದೇ 4ನೇ ದಿವ್ಸ ಸರ್ಜರಿ ಹೇಳಿದ್ದಾರೆ ಡಾಕ್ಟರ್ ಅಂತ ಫೋನ್ ಮಾಡ್ದಾಗ ಅದೆಲ್ಲಾ ಏನೂ ಬೇಡ ಮಣಿಪಾಲ್ ಆಸ್ಪತ್ರೇಲಿ ಡಯೆಟಿಶಿಯನ್ ಆಗಿರೋ ತನ್ನ ದೊಡ್ಡಮ್ಮನ ಮಗನನ್ನು ಭೇಟಿ ಮಾಡು ಅಂತ ಹೇಳಿದ. ನಾರು, ಹಣ್ಣು, ತರಕಾರಿಗಳ ಸಸ್ಯಾಹಾರದ ಡಯೆಟ್ ಪರಿಣಾಮ ಮತ್ತೆ ಮೂರು ದಿವ್ಸ ಬಿಟ್ಟ್ಕೊಂಡು ಆರಾಮಾಗಿ ಆಫೀಸಿಗೆ ಬಂದ ಬಿಸ್ವಜಿತ್ ಮುಂಚೆ ಹತ್ತು ಗಂಟೆ ಕೆಲ್ಸ ಮಾಡ್ತಿದ್ದವ್ನು ಈಗ ಸಮಯ ಅಂದ್ರೆ 12-14 ಗಂಟೆ ಕೆಲ್ಸಕ್ಕೂ ರೆಡಿ!.

ಹೇಗೆ ಮಾತು ಮುಂದುವರೆಸಬೇಕು ಅಂತ ಗೊಂದಲದಲ್ಲಿದ್ದವನ ಹಾಗೆ ಶಿವ ತನ್ನ ಟೇಬಲ್ ಮೇಲೆ ಸರಿಯಾಗೇ ಇದ್ದ ಪೇಪರ್, ಪುಸ್ತಕಗಳನ್ನು ಮತ್ತೆ ಜೋಡಿಸಿ ಸಂಜೀವನತ್ತ ತಿರುಗಿ ಅಮೇರಿಕಾದಲ್ಲಿ ಏನು ನಡೀತಾ ಇದೆ ಗೊತ್ತಾ ಅಂದ. ಓ ಗೊತ್ತು ಹಿಲರಿ, ಒಬಾಮ ನಮ್ಮ ಯೆಡ್ಯೂರಪ್ಪ, ಕುಮಾರಣ್ಣನಂಗೇ ಓಪನ್ ಆಗಿ ಜಗ್ಳಾ ಆಡ್ತಾ ಇದ್ದಾರೆ ಅಂತ ಅನ್ನಬೇಕು ಅಂದ್ಕೊಂಡವನು ಕಷ್ಟ ಪಟ್ಟು ತಡ್ಕೊಂಡ ಯಾಕೋ ಮ್ಯಾಟರ್ ಸೀರಿಯಸ್ ಆಗಿದೆ ಅಂತ ಅನ್ಸಿ. ಐ ಡೋಂಟ್ ಲೈಕ್ ಟು ಬೀಟ್ ಅರೌಂಡ್ ದ ಬುಶ್. ನೆನ್ನೆ ರಾತ್ರಿ ಮೀಟಿಂಗ್ ಇತ್ತು ವೀಪಿ ಜೊತೆಗೆ. ಆರ್ಗನೈಜೇಷನ್ ರಿಸ್ಟ್ರಕ್ಚರ್ ಆಗ್ತಾ ಇದೆ ಕೆಲವು ಕಠಿಣವಾದ ನಿರ್ಧಾರಗಳನ್ನ ತೊಗೋಬೇಕಾಯ್ತು ಅಂದ ಶಿವ.

ತಂಪಾದ ಏ.ಸಿ ರೂಮಲ್ಲೂ ದೇಹದ ಸುತ್ತ ಬಿಸಿಯಾದ ಗಾಳಿ ಆವರಿಸಿದ ಹಾಗಾಯ್ತು ಸಂಜೀವಂಗೆ. ಎರ್ಡು ದಿವ್ಸದಿಂದ್ಲೂ ಕಣ್ಣು ಅದುರ್ತಾ ಇತ್ತು. ಎಡಗಣ್ಣೋ ಬಲಗಣ್ಣೋ ಜ್ನಾಪಕಕ್ಕೆ ಬರ್ಲಿಲ್ಲ. ಹುಡ್ಗರಿಗೆ ಬಲಗಣ್ಣು ಅದುರಿದ್ರೆ ಒಳ್ಳೇದಂತೆ ಅಥವಾ ಹುಡ್ಗೀರ್ಗಾ? ಯಾಕೋ ತಲೆ ಖಾಲಿ ಖಾಲಿ ಬುದ್ಧಿ ಓಡ್ತಾ ಇಲ್ಲ ಅನ್ನಿಸ್ತು. ಶಿವ ಯಾವ ವಿಷಯ ಹೇಳಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕ್ತಾ ಇದ್ದಾನೆ ಅಂತ ಸುಳಿವು ಸಿಕ್ಕಿತು ಸಂಜೀವಂಗೆ.

ವಾರದಿಂದ ಪತ್ರಿಕೆಗಳಲ್ಲಿ ಅದೇ ಸುದ್ದಿ. ಕೆಫಿಟೇರಿಯದಲ್ಲೂ ಗುಸುಗುಸು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೌಕರರ ಉಚ್ಛ್ಚಾಟನೆ. ತಾನು ಕೂತಿರೋ ಸ್ವಿವೆಲ್ಲಿಂಗ್ ಚೇರ್ ನಿಧಾನಕ್ಕೆ ಕುಸಿಯುತ್ತಾ ಇದೆಯೇನೋ ಅನ್ನಿಸಿ ಸಾಧ್ಯವಾದಷ್ಟೂ ನೇರವಾಗಿ ಕೂತ್ಕೊಳ್ಳೋಕೆ ಪ್ರಯತ್ನ ಮಾಡಿದ. ಆಕಸ್ಮಾತ್ ಚೇರ್ ನಿಜಕ್ಕೂ ಕುಸಿದು ತಾನು ಕೂತಿರೋ ನೆಲವನ್ನು ತೂರಿಕೊಂಡು ಬೇಸ್ಮೆಂಟ್ನಲ್ಲಿ ಧೊಪ್ ಅಂತ ಬಿದ್ದು ಸೆಕ್ಯೂರಿಟಿಯವರೆಲ್ಲ ಓಡಿ ಬಂದು . . ವಿಲಕ್ಷಣವಾಗಿ ಓಡ್ತಾ ಇತ್ತು ಬುದ್ದಿ ಯಾಕೋ . ಐ ಆಮ್ ಹೆಲ್ಪ್‌ಲೆಸ್ಸ್ ಸಂಜೀವ. ಸಾಧ್ಯವಾದಷ್ಟೂ ಹೊಸದಾಗಿ ಸೇರಿರುವವರನ್ನು ಕೆಲಸದಿಂದ ತೆಗೀಬೇಕು ಅಂತ ನಿರ್ಧಾರ ತೊಗೊಂಡಿದ್ದಾನೆ ವೀಪಿ. ನನ್ನ ಟೀಮ್‌ನಿಂದ ನೀನು ಹೊರಗೆ ಹೋಗ್ಬೇಕಾಗುತ್ತೆ LIFO (ಲಾಸ್ಟ್ ಇನ್ ಫರ್ಸ್ಟ್ ಔಟ್) ಗೊತ್ತಲ್ವಾ ಅಂತ ಪೇಲವ ನಗೆ ನಕ್ಕ.

ಈ ಅಲ್ಗಾರಿದಮ್‌ಗಳನ್ನು ಅರೆದು ಕುಡಿದದ್ದಕ್ಕೇ ಅಲ್ವಾ ನಾನಿವತ್ತು ಈ ಕಂಪನಿಯಲ್ಲಿ ಕೆಲ್ಸ ಗಿಟ್ಟಿಸ್ಕೊಂಡಿದ್ದು. ಆರ್. ಇ. ಸಿ ಯಲ್ಲಿ ಕ್ಯಾಂಪಸ್ ರಿಕ್ರೂಟ್ಮೆಂಟ್ ಡ್ರೈವ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವರ್ಷಕ್ಕೆ ಹನ್ನೆರಡು ಲಕ್ಷ ಸಂಬಳದ ಕೆಲಸ ಸಿಕ್ಕಾಗ ದೇವರು ಇದಕ್ಕಿಂತ ಹೆಚ್ಚಿನದೇನನ್ನೂ ನನಗೆ ಕೊಡಲು ಸಾಧ್ಯಾ ಇಲ್ಲ ಅನ್ಸಿತ್ತು ಸಂಜೀವಂಗೆ. ಕೆಲ್ಸಕ್ಕೆ ಸೇರಿ ಒಂದ್ವರ್ಷ ಆಗ್ತಾ ಬಂತು. ಒಳ್ಳೇ ಹೆಸರು ತೊಗೊಂಡಿದ್ದ. ಬೆಸ್ಟ್ ನ್ಯೂ ಕಮರ್ ಅವಾರ್ಡ್ ಎಂದು ಇದೇ ವೀಪೀ ಎರ್ಡು ತಿಂಗ್ಳ ಹಿಂದೆ ಬೆಂಗ್ಳೂರಿಗೆ ಬಂದಾಗ ಗೋಲ್ಡನ್ ಪಾಮ್‌ನ್‌ಲ್ಲಿ ಆದ ಪಾರ್ಟಿಯಲ್ಲಿ ಇಪ್ಪತ್ತೈದು ಸಾವಿರ ರುಪಾಯಿ ಚೆಕ್ ಕೊಟ್ಟಿದ್ದ. ಇನ್ನೂ ಅದನ್ನ ಖರ್ಚು ಮಾಡಿಯೇ ಆಗಿಲ್ಲ ಆಗಲೇ ಶಾಪ್ ಕ್ಲೋಸ್ ಮಾಡಿಕೊಂಡು ಮನೆಗೆ ಹೋಗು ಅಂತಾ ಇದ್ದಾನೆ!

ಇಷ್ಟು ಬೇಗ ನಾನು, ನನ್ನ ಪ್ರತಿಭೆ ಈ ಕಂಪನಿಗೆ ಬೇಡ್ವಾಯ್ತಾ? ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸ್ಬೇಕು ಅಂತ ಗೊತ್ತಾಗ್ದೇ ಸುಮ್ನೆ ಹಾಗೇ ಕೂತ ಸಂಜೀವ. ವೆನಿಲ್ಲಾ ಬೆಳೆ ಹಾಳಾದ್ರೂ ಸಾಲ ಹುಲುಸಾಗಿ ಬೆಳೆದು ಅಡಿಕೆ ಬೆಳೆದ್ರೂ ತೀರದೆ ಈಗ ತಮ್ಮೆಲ್ಲ ಕಷ್ಟಗಳನ್ನು ಪಾರು ಮಾಡಲೆಂದೇ ದೇವರು ಇಷ್ಟು ಒಳ್ಳೇ ಕೆಲ್ಸ ಮಗನಿಗೆ ಕೊಟ್ಟಿದ್ದಾನೆ ಅಂತ ಧನ್ಯರಾದ ತಂದೆ, ಅಂತೂ ದೇವ್ರು ಕಣ್ಣು ಬಿಟ್ಟ, ಒಳ್ಳೇ ಮಗನ್ನ ಹೆತ್ತೆ ಅಂತ ಹೆಮ್ಮೆ ಪಡುವ ಅಮ್ಮ, ತಮ್ಮನ ಉತ್ತಮ ಹುದ್ದೆ ತನ್ನನ್ನು ಒಳ್ಳೇ ಮನೆಗೆ ಸೇರಿಸಲು ಪರವಾನಗಿ ಎಂಬ ಆಶಾ ಭಾವ ಹೊತ್ತ ಅಕ್ಕ  ಎಲ್ಲರ ಮುಖಗಳೂ ಮನಸ್ಸಲ್ಲಿ ಹಾದು ಹೋದವು. ಕತ್ತಿನ ಸುತ್ತ ಕಂಪನಿಯ ಗುರುತಿನ ಪಟ್ಟಿಯಿಲ್ಲದೆ ಇದ್ರೆ ಚಿದಂಬರಂ ಕೊಟ್ಟ ಟ್ಯಾಕ್ಸ್ ರಿಲೀಫ್, ಕುಸಿಯುತ್ತಿರುವ ಷೇರು ಮಾರುಕಟ್ಟೆ, ತಾನು ಧರಿಸಿರುವ ಅಡಿಡಾಸ್ ಷೂ, ವೆಸ್ಟ್‌ಸೈಡ್ ಬಟ್ಟೆ, ದುಬಾರಿ ವಾಚು ಇವೆಲ್ಲಕ್ಕೂ ತಾನು ಅಪರಿಚಿತ ಅನ್ನಿಸತೊಡಗಿತು ಸಂಜೀವಂಗೆ. ತನ್ನೊಡನೆ ಅವುಗಳ ಸಂಬಂಧ ಕಂಪನಿ ಕೊಡುವ ದುಡ್ಡಿದ್ರೆ ಮಾತ್ರ ಅನ್ನೋ ಸತ್ಯ ನಿಧಾನಕ್ಕೆ ಗೋಚರವಾಯ್ತು. ಹೇ ಸಂಜೀವ್ ವಾಟ್ ಹ್ಯಾಪ್ಪನ್ಡ್ ಅಂತ ಶಿವ ಎಚ್ಚರಿಸಿದಾಗಲೇ ವಾಸ್ತವಕ್ಕೆ ಬಂದಿದ್ದು. ಇಟ್ ಈಸ್ ನಾಟ್ ದ ಎಂಡ್ ಆಫ್ ದ ವರ್ಲ್ಡ್ ಮ್ಯಾನ್ ಟೇಕ್ ಹಾರ್ಟ್ ಅಂದ ಶಿವ. ಹೃದಯ ಬಡಿತ ಹಿಡಿತಕ್ಕೆ ಸಿಗಲ್ವೇನೋ ಅನ್ನೋ ಹಾಗೆ ಜೋರಾಗಿ ಬಡ್ಕೋತಾ ಇತ್ತು.

ನಂಗೊತ್ತು ಇದನ್ನ ಫೇಸ್ ಮಾಡಕ್ಕೆ ಕಷ್ಟ ಅಂತ ಆದ್ರೆ ದೇರ್ ಈಸ್ ಆಲ್ವೇಸ್ ಎ ವೇ. ನನ್ನ ಕ್ಲಾಸ್‌ಮೇಟ್ ಪ್ರಮೋದ್ ಲೀಡಿಂಗ್ ಟೆಲಿಕಾಮ್ ಕಂಪನಿಯಲ್ಲಿ ಕಂಟ್ರಿ ಹೆಡ್ ಆಗಿದ್ದಾನೆ. ನಿನ್ನ ರೆಸ್ಯುಮೆ ನಂಗೆ ಕಳ್ಸು. ಇಲ್ಲಿನ ಫಾರ್ಮಾಲಿಟೀಸ್ ಮುಗಿಯೋ ಹೊತ್ತಿಗೆ ಅಲ್ಲಿಂದ ಆಫರ್ ಸಿಗುತ್ತೆ ಅಂದ. ಒಳ್ಳೇ ಹೈಕ್ ಕೂಡಾ ಸಿಗುತ್ತೆ ಐ ನೋ ಯೂ ಆರ್ ಕೇಪಬಲ್. ಇಲ್ಲಿ ಯಾರಿಗೂ ಈ ವಿಷ್ಯ ಗೊತ್ತಾಗೋದು ಬೇಡ. ಲೆಟ್ ಅಸ್ ಪ್ಲಾನ್ ಫಾರ್ ಎ ಕ್ಲೀನ್ ಎಕ್ಸಿಟ್ ಅಂದ ಶಿವ. ಯಾಕೋ ಟೀವಿ ನೈನ್ ಕಾರ್ಯಕ್ರಮದ ಟೈಟಲ್ ಹೀಗೂ ಉಂಟೆ ನೆನ್ಪಾಯ್ತು! ತಾನು ಮಾಡಿದ್ದ ಫಿಕ್ಸ್‌ನಿಂದಾಗಿ ಸಿಸ್ಟಮ್ ಕ್ರ್ಯಾಶ್ ಆಗಿದೆ ಅಂತ ಎಸ್ಕಲೇಶನ್ ಮಾಡಿದ್ದ ಕಸ್ಟಮರ್ ಆಮೇಲೆ ಇಲ್ಲ ಅದು ತನ್ನ ಎನ್ವಿರಾನ್ಮೆಂಟ್‌ನಿಂದಾ ಆಗಿದ್ದು ನಿಂದಲ್ಲ ತಪ್ಪು ಅಂತ ಮೆಯ್ಲ್ ಕಳ್ಸಿದಾಗ ಆದಷ್ಟೇ ಖುಶಿ ಆಯ್ತು! ಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಗುನುಗುನಿಸುತ್ತಾ ನಿರಾಳವಾಗಿ ಶಿವನ ರೂಮಿಂದ ಹೊರ ಬಂದ ಸಂಜೀವ.

(ದಟ್ಸ್ ಕನ್ನಡದಲ್ಲಿ ಪ್ರಕಟಿತ ಲೇಖನ)

ಕುಕ್ಕರ್ ನಲ್ಲಿ ಬೇಯುತ್ತಿರುವ ಮಧ್ಯಮವರ್ಗಿಯ ಡೈರಿ

ಮೇ 15, 2010

ಮೊಬೈಲನ್ನು ಮೂರನೇ ಬಾರಿ ಸುಮ್ಮನಿರು ಅಂಥ ಹೇಳಿದ ನೀರಜ್ ಅದು ನಾಲ್ಕನೇ ಬಾರಿ ಸ್ವಲ್ಪವೂ ಬೇಸರಿಸಿಕೊಳ್ಳದೆ ಎದ್ದೇಳು ಅಂಥ ಎಚ್ಚರಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಮೊದ್ಲು ಕಣ್ಣು ಹಾಯಿಸಿದ್ದು ಆ ಹುಡುಗ ಎಂದಿನಂತೆ ತಪ್ಪದೇ ಕಿಟಕೆಯಿಂದ ಎಸೆದಿದ್ದ ಅವತ್ತಿನ ಪತ್ರಿಕೆ ಮೇಲೆ. ಶಾಕ್ ಮಾರ್ಕೆಟ್ ಗಾಬರಿ ದೂರ – ಹೂಡಿಕೆಗೆ ಸಕಾಲ ಸುದ್ದಿ ನೋಡಿದೊಡನೆ ನೆನ್ನೆ ಆಗಿದ್ದ ನಷ್ಟ ಇವತ್ತೇ ತುಂಬಿ ಬಂತೇನೋ ಅನ್ನುವ ಹಾಗೆ, ನಷ್ಟ ನಂಗೊಬ್ಬನಿಗೇ ಅಲ್ವಲ್ಲಾ ಅಂಬಾನಿ ಸಹೋದರರೂ ನನ್ನ ಜೊತೆ ಇದ್ದಾರೆ ಅಂಥ ಏನೋ ನೆಮ್ಮದಿ ಆವರಿಸಿತು. ಕಡೆಗೂ ಅವನು ಹುಡುಕುತ್ತಿದ್ದ ಸುದ್ದಿ ಅಲ್ಲಿತ್ತು. ಲಾರಿ ಮುಷ್ಕರ ವಾಪಸ್. ಅಬ್ಬಾ ಅಂತ ಒಂದು ದೊಡ್ಡ ನಿಟ್ಟುಸಿರು ಬಿಟ್ಟ. ಷೇರು ಪೇಟೆಯಲ್ಲಾದ ನಷ್ಟಕ್ಕಿಂಥ ಬಿಟಿಎಸ್ ಬಸ್ಸಿನ ನೂಕು ನುಗ್ಗಲಿನಲ್ಲಿ ಹೋಗೋದು ತಪ್ಪಿತಲ್ಲಾ ಅಂಥ ಖುಶಿ ಆಯ್ತು.

ಲಾರಿ ಮಾಲೀಕರು ಮುಷ್ಕರ ಹೂಡಿದ್ರೆ ನಮ್ಮ ಆಫೀಸ್ ಕ್ಯಾಬ್‌ನವ್ರು ಯಾಕೆ ಸ್ಟ್ರೈಕ್ ಮಾಡ್ಬೇಕು? ಸಾರ್ ಎಸ್ಸಾರೆಸ್ಸ್ನವ್ರು ಗಾಡಿ ಎತ್ತಿಲ್ಲ. ಗಾಡಿಗೇನಾದ್ರೂ ಆದ್ರೆ ನೀವೇ ಜವಾಬ್ದಾರಿ ಅನ್ನೋ ಹಾಗಿದ್ರೆ ಗಾಡಿ ಎತ್ತ್ತೀನಿ ನೋಡಿ ಡ್ರೈವರ್ ಕುಮಾರ್ ಅಂದಾಗ ಏನು ಹೇಳ್ಬೇಕೋ ಕ್ಷಣ ಕಾಲ ಗೊತ್ತಾಗ್ಲೇ ಇಲ್ಲ. ನನ್ನ ಜವಾಬ್ದಾರಿನೇ ನಂಗೆ ತೊಗೊಳ್ಳೋಕೆ ಆಗ್ತಾ ಇಲ್ಲ ಅಂಥದ್ರಲ್ಲೀ..

ಸಂಬಳ ಬಂದ ದಿನ ಇದ್ದ ಖುಷಿ ತಾರೀಖು 3-4 ಆಗ್ತಾ ಇದ್ದ ಹಾಗೇ ಕುಂದುತ್ತಾ ಬರುತ್ತೆ. 5ಕ್ಕೆ ಎಸ್ಸೈಪಿ, 7ಕ್ಕೆ ಅಕ್ಕನ ಮದ್ವೆ ಸಾಲ, 10ಕ್ಕೆ ಕ್ರೆಡಿಟ್ ಕಾರ್ಡ್ ಈಸೀಎಸ್ಸ್ , 12ಕ್ಕೆ ತಪ್ಪದೇ ಬರೋ ಮೊಬೈಲು ಬಿಲ್ಲು ಇದೆಲ್ಲಾ ಕಟ್ಟಿದ ಮೇಲೆ ಪೀವೀಆರ್ ನಲ್ಲಿ ಗಾಳಿಪಟ ಸಿನಿಮಾ ನೋಡೋದು ಕನ್ಸಿನ ಮಾತೇ. ಪರ್ವಾಗಿಲ್ಲ ಈ ಗಣೇಶನ ಸಿನಿಮಾ ಆದರ್ಶ ದಲ್ಲೂ ಹಾಕ್ತಾನೆ. ನಮ್ಮಂಥ ಸಿರಿವಂಥ ಬಡವ್ರ ಮೇಲೂ ಸ್ವಲ್ಪ ಕನಿಕರ ಇದೆ ನಿರ್ಮಾಪಕರಿಗೆ. 40 ರುಪಾಯಿಗೆ ಬಾಲ್ಕನಿ ಅಂತೆ. ಐಟಿಪಿಎಲ್ ಬಸ್ಸ್ನಲ್ಲಿ ನೆನ್ನೆ ಬರೋವಾಗ ನೋಡಿದ್ದು ರೇಟು. ಆದ್ರೂ ಒಂಥರಾ ಕಸಿವಿಸಿ ಆದರ್ಶ ದಲ್ಲಿ ಪಿಕ್ಚರ್ರು ನೋಡೋಕ್ಕೆ ಹೋಗಿದ್ದೆ ಅಂಥ ಹೇಳ್ಕೊಳ್ಳೋದಕ್ಕೆ. ನನ್ನ ದುಡಿಮೆಗೆ ಪೀವೀಆರ್ ನಲ್ಲೆ ನೋಡಿದ್ರೇನೇ ಒಂಥರಾ ಘನತೆ. ಇದು ಹುಟ್ಟು ಹಾಕಿದ್ದು ಯಾರು? ಬ್ಯಾಂಗಳೂರು ಟೈಮ್ಸ್‌ನವ್ರಾ? ಇರ್ಬೇಕೇನೋ. ಗಣೇಶನ ಮೇಲೆ ಹೆಮ್ಮೆ ಮೂಡಿ ಬಂತು . ತಮಿಳರ ಪ್ರಾಬಲ್ಯ ಇರೋ ಹಲಸೂರು ಪ್ರದೇಶದಲ್ಲಿ ಕನ್ನಡ ಪಿಕ್ಚ್ಚರ್ರು ಓಡ್ತಾ ಇದೆಯಲ್ಲಾ ಅಂಥ.

ಸ್ನಾನ ಮಾಡಿ, ದೀಪಾವಳೀಲಿ ಡಿಸ್ಕೌಂಟ್ ಸೇಲ್ ನಲ್ಲಿ ತೊಗೊಂಡ ಕಾಟನ್ ದಿರಿಸು ಧರಿಸಿ ಡಿಓಡೋರೆಂಟ್ ಪೂಸಿ ಕೊಳ್ಳೋಷ್ಟ್ರಲ್ಲಿ ಕೇಳಿ ಬಂತು 3ನೇ ಸಾರಿಗೆ ಕುಮಾರ್‌ನ ವ್ಯಾನ್ ಹಾರನ್ನು. ಪರ್ವಾಗಿಲ್ಲ ಒಳ್ಳೇ ಮನುಷ್ಯಾ ಸ್ವಲ್ಪ ಲೇಟ್ ಆದ್ರೂ ತಾಳ್ಮೆ ಇಂದ ಕಾದು ಆಫೀಸ್ ಗೆ ಕರ್ಕೊಂಡು ಹೋಗ್ತಾನೆ ಅಂಥ ಧನ್ಯಾತ ಭಾವ ಮೂಡಿ ಬಂತು. ಅಲ್ದೇ ಇನ್ನೇನು ಅವ್ನು ಬಿಟ್ಟು ಹೋದ್ರೆ ಇದೆಯಲ್ಲಾ ಮಾರಿ ಹಬ್ಬ. ಬಿಟಿಎಸ್ ಬಸ್ಸಲ್ಲಿ ಹೋಗಿ ಆಫೀಸ್ ತಲ್ಪೋದೇ ಒಂದು ಸಾಹಸ. ಈ ವೋಲ್ವೋ ಮೊದ್ಲು ಬಂದಾಗ ಅದ್ರಲ್ಲಿ ಓಡಾಡೋದೇ ಒಂದು ಪ್ರೆಸ್ತೀಜ್ ವಿಷ್ಯಾ. ಆದ್ರದು ಈಗ ಬ್ಲಾಕ್ ಬೋರ್ಡ್ ಬಸ್ಸಿಗಿಂತ ಹಿಂಸೆ. ವೋಲ್ವೋ ಡಿಸೈನ್ ಮಾಡ್ದವ್ರಿಗೇನು ಗೊತ್ತು ಬೆಂಗ್ಳೂರಲ್ಲಿ ವೋಲ್ವೋ ದಲ್ಲೂ ನಿಂತು ಪ್ರಯಣ ಮಾಡ್ತಾರೆ ಅಂಥ. ನಿಂತ್ಕೊಳ್ಳೋವ್ರಿಗೆ ಅನ್ಕೂಲವಾಗಿಲ್ಲಾ ಅದರ ಎರ್ಗೋನೋಮಿಕ್ಸ್. ಇವತ್ತು ಹೋಗಿ ವೋಲ್ವೋ ಸೈಟ್ ನೋಡ್ಬೇಕು ಸಜ್ಜೆಶನ್ ಲಿಂಕ್ ಇದ್ಯಾ ಅಂತ. ಆಟೋದಲ್ಲಿ ಹೋಗೋಣಾ ಅಂದ್ರೆ ಅವ್ರ ಡಿಮಾಂಡ್ ಮುಗ್ಲಿಗೇ ಮುಟ್ಟುತ್ತೆ. ಸಾರ್ ಮೀಟರ್ ಮೇಲೆ 50 ರುಪಾಯಿ ಅಷ್ಟೆ ಅಂಥ ನಗೆ ಬೀರುತ್ತಾನೆ. ದುಡ್ಡೇನು ನಮ್ಮನೇ ಹಿತ್ಳಲ್ಲಿ ಛೇ ಈ ಬೆಂಗ್ಳೂರಲ್ಲಿ ಹಿತ್ಲೆಲ್ಲಿ ಬರ್ಬೇಕು. ಇಂಥಾ ದೊಡ್ಡ ಕಂಪನೀಲಿ ಕೆಲ್ಸಾ ಮಾಡ್ತೀರ ಇಷ್ಟು ಚೌಕಾಸಿ ಮಾಡ್ತೀರಲ್ಲಾ ಸಾರ್ ಅಂಥ ಕುತ್ತಿಗೇಗೆ ನೇತು ಹಾಕ್ಕೊಂಡಿರೋ ನಾಯಿ ಪಟ್ಟೀ ಹತ್ರ ಕಣ್ಣು ಹಾಯ್ಸಿ ಅಂದಾಗ ಬರೋ ಸಿಟ್ಟು ತಡ್ಕೊಂಡು ಆಟೋ ಹತ್ತಿದ್ದಾಯ್ತು ಮೊನ್ನೆ ಸೋಮ್ವಾರ ಕುಮಾರ್ ಫೋನ್ ಮಾಡಿ ಸಾರ್ ನಮ್ಮ ಏರಿಯಾದಲ್ಲಿ ಸಕ್ಕತ್ ಗಲಾಟೆ ಗಾಡಿ ತೆಗ್ಯಲ್ಲ ಅಂದಾಗ. ಈ ಐಟಿ ಕಂಪನಿ ಗಳೆಲ್ಲಾ ಯಾಕೆ ಇಷ್ಟು ದೂರಾ ವಸಾಹತು ಹೂಡಿರೋದು? ಅದ್ದೂ ಬರೀ ಬೆಂಗ್ಳೂರಲ್ಲೇ. ನಮ್ಮೂರ್ ಕಡೇನೇ ಇದ್ದಿದ್ರೆ ದಿವ್ಸ ಊರಿಂದ ಓಡಾಡ್ಕೊಂಡು ಅಮ್ಮ ಮಾಡಿದ ಜೋಳದ ರೊಟ್ಟಿ ಎಣ್ಣೇಗಾಯಿ ತಿಂದ್ಕೊಂಡು .. ಇದ್ಯಾಕೋ ತಿರುಕನ ಕನ್ಸಾಯ್ತು.

ಈ ಕಾಟನ್ದು ಒಂದು ಕತೆ. ದೀಪಾವಳಿಗೆ ಹೊಸ ಬಟ್ಟೇ ತೊಗೋಳ್ಳ್ಲೇ ಬೇಕು ಅಂಥ ಅಮ್ಮ ಒತ್ತಾಯ ಮಾಡಿದ್ಕೆ ಭಾರೀ ಡಿಸ್ಕೌಂಟ್ ಅಂತ ಹಾಕ್ಕೊಂಡಿದ್ದ ಆ ಮಳಿಗೇಲಿ ತೊಗೊಂಡು ಹಬ್ಬದ ಮಾರನೇ ದಿನ ಆಫೀಸ್ ಗೆ ಹಾಕ್ಕೊಂಡು ಹೋದ್ರೆ ಹೆಚ್ಚೂ ಕಡ್ಮೆ ಎಲ್ರೂ ಅದೇ ಕಂಪನಿ ಬಟ್ಟೆ ಧರಿಸಿದ್ದಾರೆ. ಎಲ್ಲರ ಮುಖದ ಮೇಲೂ ಕಂಡೂ ಕಾಣದ ಹುಸಿ ನಗೆ! ಈ ಕಂಪನಿ ಪ್ರಮೋಟರ್ ಭಾರೀ ಬುದ್ಧಿವಂತ ಎಲ್ಲಾ ಏರಿಯದಲ್ಲೂ ಅಂಗಡಿ ತೆಗ್ದು ನಮ್ಮಂಥವ್ರ ಹತ್ರ ವ್ಯಾಪಾರ ಮಾಡ್ಸಿ ತಾನು ಒಳ್ಳೇ ಬ್ರ್ಯಾಂಡ್ ಬಟ್ಟೆ ಹಾಕ್ಕೊಂಡು ಓಡಾಡ್ತಿರ್ಬಹುದು. ಕಂಪನಿ ಷೇರು ಚೆನ್ನಾಗಿದ್ಯಂತೆ. ಈ ತಿಂಗ್ಳು ದುಡ್ಡು ಮಿಕ್ಕಿದ್ರೆ ಒಂದು ಕೈ ನೋಡ್ಬೇಕು.

ಕುಮಾರ್‌ನ ವ್ಯಾನ್ ನಲ್ಲಿ ಆಫೀಸ್ ತಲುಪಿ ಮಾನಿಟರ್ ಮುಂದೆ ಇದ್ದ ಗಣೇಶಂಗೆ ಮನ್ಸಲ್ಲೇ ಒಂದು ಉದ್ದಂಡ ನಮಸ್ಕಾರ ಹಾಕಿ ಔಟ್‌ಲುಕ್ ಒಪನ್ ಮಾಡ್ಗಾಗ ಮೊದಲನೇ ಮೈಲ್ ಅಡ್ಮಿನ್ ನಿಂದ. ಮುಷ್ಕರದ ಎರಡು ದಿವ್ಸ ತಪ್ಪದೇ ಆಫೀಸ್ಗೆ ಬಂದು ಸಹಕರಿಸಿದ ನೌಕರರಿಗೆ ವಂದನೆಗಳು! ಥತ್ ಇವ್ರಾ. ಈ ಎರ್ಡು ದಿವ್ಸ ಖರ್ಚ್ ಮಾಡಿದ 300 ರುಪಾಯಿ ಆಟೋ ಖರ್ಚು, ಐಟಿಪಿಎಲ್ ಬಸ್ಸಲ್ಲಿ ಬಂದಿದ್ಕೆ ಖರ್ಚಾದ 160 ಇದ್ರ ಬಗ್ಗೆ ಸುದ್ದೀನೇ ಇಲ್ಲ. ಅದ್ರ ಜೊತೇಗೆ ಈ ಷೇರು ಮಾರ್ಕೆಟ್ ಬೇರೆ ಪಾತಾಳ ಸೇರಿದೆ. ಇವತಾದ್ರೂ ಸ್ವಲ್ಪ ಮೇಲೇರ್ಲಪ್ಪಾ ಅಂದ್ಕೊಂಡು ಮನಿಕಂಟ್ರೋಲ್ ಓಪನ್ ಮಾಡ್ದಾಗ ಬಂದಿದ್ದು ಉದಯನ್ ಮುಖರ್ಜಿಯ ಸಲಹೆ. ಜೀವನದಲ್ಲಿ ಎಡವುದು ಸಹಜ. ಆದರೆ ತಪ್ಪಿನಿಂದಲೇ ಪಾಠ ಕಲಿಯುವುದು ಜಾಣರ ಲಕ್ಷಣ. ಆಹಾ ಇವನೊಬ್ಬ ಸಮಯ ಸಾಧಕ. ನಾನು ಮುಂಚೇನೇ ಹೇಳಿದ್ದೆ ಅಂಥ ಈಗ ಹೇಳೋಕ್ಕೆ ಬರ್ತಾನೆ. ಆದ್ರೆ ಇವ್ನ ರೆಕಮಂಡೇಶನ್ ಮೇಲೆ ತೊಗೊಂಡ ಷೇರುಗಳು ಮಾರ್ಕೆಟ್ ಮೇಲೇರಿದ್ರೂ ಅವು ಮೇಲೆ ಬರ್ಲಿಲ್ವಲ್ಲ. ಆದ್ರೆ, ಉದಯನ್ ಮಾರು ಅಂದಾಗ ನಾನು ಕೊಂಡುಕೊಂಡಿದ್ದ ಷೇರುಗಳು ಲಾಭ್ಹಾನೇ ತಂದ್ಕೊಟ್ಟಿವೆ. ನಾನು ಕೃತಜ್ಞನಾಗಿರ್ಬೇಕು ಅಂಥ ನೀರಜ್‌ಗೆ ನಗು ಬಂತು. ಅಷ್ಟರಲ್ಲಿ ಪ್ರಪಂಚದ ಜವಾಬ್ದಾರಿಯೆಲ್ಲ ತನ್ನ ತಲೆ ಮೇಲೇ ಇದೆಯೇನೋ ಅಂಥ ದುಡು ದುಡು ಓಡಾಡ್ಕೊಂಡಿರೋ ಮ್ಯಾನೇಜರ್ ಟೀಮ್ ಮೀಟಿಂಗ್ ಇನ್ ಕಾನ್ಫರೆನ್ಸ್ ರೂಮ್ ಅಂಥ ಹೇಳಿ ಬಿರುಗಾಳಿಯಂತೆ ಬಂದು ಅದೇ ಸ್ಪೀಡಲ್ಲಿ ಹೋದ. ಇನ್ನೇನು ಕಾದಿದೆಯೋ ಯು.ಎಸ್ ನಲ್ಲಿ ಬೇರೆ ಮಾರ್ಟ್‌ಗೇಜ್ ಬಿಸಿನೆಸ್ಸ್ ಕುಸಿದಿದೆ. ನಮ್ಮ ಪ್ರಾಜೆಕ್ಟ್ ಅದ್ರ ಮೇಲೇ ನಿಂತಿದೆ. ಮೀಟಿಂಗ್ನಲ್ಲಿ ಷಾಕಿಂಗ್ ನ್ಯೂಸ್ ಇಲ್ದೇ ಇರಲಿ ಅಂಥ ಇನ್ನೊಮ್ಮೆ ಗಣಪ್ಪಂಗೆ ನಮಸ್ಕಾರ ಹೊಡ್ದು ಕಾನ್ಫೆರೆನ್ಸ್ ರೂಮಿನೆಡೆ ಕಾಲೆಳ್ಕೊಂಡು ಸಾಗಿದ ನೀರಜ್.

(ದಟ್ಸ್ ಕನ್ನಡದಲ್ಲಿ ಪ್ರಕಟಿತ ಲೇಖನ)