Archive for the ‘Uncategorized’ Category

ಖಾದ್ರಿ ಅಚ್ಯುತನ್ ಒಂದು ನೆನಪು . . .

ನವೆಂಬರ್ 29, 2017

 

KAchyuthan

ಚಿತ್ರ ಕೃಪೆ: ಅವಧಿ

ಪಿ.ಯು.ಸಿ ಸಹಪಾಠಿ ಸ್ನೇಹಿತೆ ಸ್ಮಿತಾಳ ಹೆಸರಿನಲ್ಲಿ ’ಖಾದ್ರಿ’ ಸರ್ ನೇಮ್ ಕೇಳಿದಾಗ  ಕನ್ನಡಪ್ರಭದ ಖಾದ್ರಿ ಶಾಮಣ್ಣನವರೂ ಇವಳೂ ಒಂದೇ ಕುಟುಂಬದವರೇನೋ ಎಂದೆನಿಸಿತ್ತು. ಹೀಗೇ ಮಾತನಾಡುವಾಗ ಖಾದ್ರಿ ಶಾಮಣ್ಣ ನಮ್ಮ ದೊಡ್ಡಪ್ಪ ಆಗಬೇಕು. ನನ್ನ ತಂದೆ ಖಾದ್ರಿ ಅಚ್ಯುತನ್ ದೂರದರ್ಶನದ ಸುದ್ದಿ ವಿಭಾಗದ ನಿರ್ದೇಶಕರು ಎಂದಿದ್ದಳು. ಆಗೆಲ್ಲ ವಾರ್ತೆ ಮುಗಿದಾದ ಮೇಲೆ ನನ್ನ ಸ್ನೇಹಿತೆಯ ತಂದೆಯ ಹೆಸರು ಬರ್ತಾ ಇದೆ ನೋಡಿ ಎಂದು ಮನೆಯವರಿಗೆ ತೋರಿಸಿ ಹೆಮ್ಮೆ ಪಡ್ತಾ ಇದ್ದೆ! ಸ್ಮಿತಾಳ ಜೊತೆ ಮಾತನಾಡುವದರಲ್ಲಿಯೇ ಅವರ ತಂದೆಯ ವ್ಯಕ್ತಿತ್ವದ ಕಿರು ಪರಿಚಯ ನನಗಾಗಿತ್ತು. ಎಂದಿಗೂ ತಮ್ಮ ಅಭಿಪ್ರಾಯಗಳನ್ನು ತಮ್ಮ ಮಕ್ಕಳ ಮೇಲೆ ಹೇರದವರು. ತಮ್ಮ ಉನ್ನತ ಸ್ಥಾನದ ಅಧಿಕಾರವನ್ನು, ಪ್ರಭಾವವನ್ನು ಎಂದಿಗೂ ದುರುಪಯೋಗ ಪಡಿಸಿಕೊಳ್ಳದವರು. ಸೇವೆಯಲ್ಲಿದ್ದಷ್ಟೂ ದಿನ ಶಿಥಿಲಾವಸ್ಥೆಯಲ್ಲಿದ್ದರೂ ಸರ್ಕಾರಿ ವಸತಿ ಗೃಹದಲ್ಲಿಯೇ ಕಾಲ ಕಳೆದವರು.

ಸದಾ ಖಾದಿದಾರಿ, ಅಚ್ಯುತನ್ ಅವರೊಡನೆ ಮಾತನಾಡುವ ಅವಕಾಶ ಸಿಕ್ಕಿದ್ದು ವೃತ್ತಿ ನಿಮಿತ್ತ ವಿದೇಶ ಪ್ರಯಾಣದ ಸಲುವಾಗಿ ತತ್ಕಾಲ್ ಸೇವೆಯಲ್ಲಿ ಪಾಸ್ ಪೋರ್ಟ್ ಅವಶ್ಯಕತೆ ಬಿದ್ದಾಗ. ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಸಹಿಯಿದ್ದಲ್ಲಿ ತತ್ಕಾಲ್ ಸೇವೆಯಲ್ಲಿ ಪಾಸ್ ಪೋರ್ಟ್ ಪಡೆಯಬಹುದಿತ್ತು. ಸ್ಮಿತಾ, ಅವಳ ತಂದೆಯೊಡನೆ ಮಾತನಾಡಿ, ನಾನು ನನ್ನ ಅಕ್ಕನೊಡನೆ ಅರ್ಜಿಯನ್ನು ಕಳುಹಿಸುವ ವ್ಯವಸ್ಥೆ ಮಾಡಿದೆ. ಫೋನ್ ಮಾಡಿ ಮಾತನಾಡಿದಾಗ, ಅಲ್ರೀ ನಾನು ನಿಮ್ಮನ್ನು ನೋಡೇ ಇಲ್ಲ ಹೇಗೆ ಸೈನ್ ಮಾಡಲಿ ಅಂದ್ರು. ಕ್ಷಣ ಏನು ಮಾತನಾಡಲು ತೋಚದೆ ಸುಮ್ಮನಾದಾಗ, ಏನೂ ಯೋಚ್ನೆ ಮಾಡ್ಬೇಡಿ ನಿಮ್ಮ ಅಕ್ಕನ ಹತ್ತಿರವೇ ಕಳಿಸಿ ನಾನು ಸೈನ್ ಮಾಡಿಕೊಡ್ತೀನಿ ಅಂದರು. ಕೆನಡಾ ದಿಂದ ವಾಪಸ್ ಬಂದಾಗ ಒಂದು ಪೆನ್ ತಂದು ಕೊಟ್ಟಿದ್ದೆ. ಮುಂದಿನ ದಿನಗಳಲ್ಲಿ ನಮ್ಮ ಭೇಟಿಯಾದಾಗ, ಫೋನ್ ನಲ್ಲಿ ಮಾತಾನಾಡಿದಾಗಲೆಲ್ಲ ನೆನಪಿಸಿಕೊಂಡು, ನೀವು ಪೆನ್ ತಂದುಕೊಟ್ಟಿದ್ರಿ. ಆ ಈಶ್ವರ ದೈತೋಟ ನಂಗೆ ಬೇಕು ಅಂತ ಎತ್ಕೊಂಡು ಹೋಗ್ಬುಟ್ರು ರೀ ಅಂತಿದ್ರು!

ಭಾರತೀಯ ವಿದ್ಯಾ ಭವನದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುವಾಗ, ವಿಜಯನಗರದ ವರೆಗೂ ಆಟೋದಲ್ಲಿ ಹೋಗೋಣ ಬನ್ನಿ ಅಂತ ಕರೆದಾಗ ಜೊತೆಗೆ ಬಂದ್ರು. ಸರ್ ಇಲ್ಲೇ ನಿಲ್ಲಿಸಿ, ನಾವು ಇಳ್ಕೋತೀವಿ ಇವರು ಮುಂದೆ ಹೋಗ್ತಾರೆ ಅಂತ ಆಟೋ ಡ್ರೈವರ್ ನನ್ನು ಕೂಡಾ ಸರ್ ಎಂದು ಗೌರವದಿಂದ ಮಾತನಾಡಿಸುತ್ತಿದ್ದರು. ವೃತ್ತಿ ಜೀವನದಲ್ಲಿ ನಗರದ ಹೃದಯ ಭಾಗದಲ್ಲೇ ಕಳೆದ ಅವರು ಕೊನೆಗೆ ಸ್ವಂತ ಮನೆ ಮಾಡಿದ್ದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ. ತಮ್ಮ ಪ್ರಭಾವದಿಂದ ಉತ್ತಮವಾದ ಏರಿಯದಲ್ಲೇ ಮನೆ ಪಡೆಯಬಹುದಾಗಿದ್ದರೂ ಎಂದಿಗೂ ಅದರೆಡೆ ಮನಸ್ಸು ಮಾಡಿದವರಲ್ಲ.

ಸ್ನೇಹಿತೆ ಸ್ಮಿತಾ ಜರ್ಮನಿಯಲ್ಲಿದ್ದಾಗ ತನ್ನ ಮಗನ ಶಾಲೆಯ ಅರ್ಜಿಯನ್ನು ನನಗೆ ಈ-ಮೆಯ್ಲ್ ಮಾಡಿ, ಪ್ರಿಂಟ್ ಮಾಡಿ ನನ್ನ ತಂದೆಗೆ ತಲುಪಿಸು ಅಂದಾಗ ಅವರ ಮನೆಗೆ ಹೋಗಿದ್ದೆ. ನನ್ನ ಮಗಳು ನೋಡಿ ಎಷ್ಟು ಒಳ್ಳೆಯ ಸ್ನೇಹಿತೆಯರನ್ನು ಪಡೆದಿದ್ದಾಳೆ. ಈ ಪ್ರಿಂಟ್ ತೆಗೆಯೋದು, ಈ-ಮೆಯ್ಲ್ ಎಲ್ಲ ನಂಗೆ ಗೊತ್ತಾಗಲ್ಲ. ನಿಮ್ಮಿಂದ ಭಾರೀ ಉಪಕಾರ ಆಯ್ತು ಅನ್ನುತ್ತಲೇ, ಪ್ರಪಂಚ ಎಷ್ಟು ಮುಂದುವರೆದಿದೆ ನೋಡಿ. ಸ್ಮಿತಾ ಅಲ್ಲಿಂದ ಕಳ್ಸಿದ್ದನ್ನ ನೀವು ನನಗೆ ತಲುಪಿಸ್ತಾ ಇದ್ದೀರ ಅಂತ ಮಗುವಿನಂತೆ ಖುಷಿ ಪಡುತ್ತಿದ್ದರು. ಮಂಡಿನೋವಿದ್ದರೂ ಪು.ತಿ.ನ ಟ್ರಸ್ಟ್ ಮೂಲಕ ಪತ್ರಿಕಾ ವರದಿಗಾರರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಸಲಹಾಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ನಾನಂತೂ ಬಸ್ ನಲ್ಲೇ ನೋಡಿ ಓಡಾಡೋದು. ಆಟೋ ಎಲ್ಲ ಇಲ್ಲಮ್ಮ ಅನ್ನುತ್ತಿದ್ದರು.

ರಾಜ್ಯೋತ್ಸವ ಪ್ರಶಸ್ತಿ ದೊರೆತಾಗ ಫೋನ್ ಮಾಡಿ ಅಭಿನಂದಿಸಿದಾಗ, ನೋಡೀಮ್ಮಾ ಸರ್ಕಾರದವರು ಪ್ರಶಸ್ತಿ ಕೊಟ್ಬಿಟ್ಟಿದ್ದಾರೆ ಅಂತ ಸಂತಸಪಟ್ಟಿದ್ದರು. ಒಮ್ಮೆ ಹೀಗೆ ಫೋನ್ ಮಾಡಿ, ನನ್ನ ಆತ್ಮೀಯ ಸ್ನೇಹಿತ ನಾಗಭೂಷಣ ಅಂತ ಇದ್ದಾರೆ. ಲೋಹಿಯಾ ಅವರ ಬಗ್ಗೆ ತುಂಬಾ ಅಧ್ಯಯನ ಮಾಡಿದ್ದಾರೆ. ’ಹೊಸ ಮನುಷ್ಯ’ ಅಂತ ಒಂದು ಪತ್ರಿಕೆ ಪ್ರಕಟಿಸ್ತಾರೆ. ನಾನೇ ದುಡ್ಡು ಕೊಟ್ಟು ನಿಮಗೆ ಚಂದಾ ಮಾಡಿಸ್ತೀನಿ ನಿಮ್ಮ ವಿಳಾಸ ಕೊಡಿ ಅಂತ ವಿಳಾಸ ತೆಗೆದುಕೊಂದು ಚಂದಾ ಮಾಡಿಸಿದ್ದರು. ಪತ್ರಿಕೆ ಬರ್ತಾ ಇದೆಯಾ ಅಂತಲೂ ಫೋನ್ ಮಾಡಿ ವಿಚಾರಿಸುತ್ತಿದ್ದರು. ಯುವ ಜನಾಂಗ ಲೋಹಿಯಾ, ಗಾಂಧಿವಾದ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಸ್ನೇಹಿತರನ್ನೂ ಚಂದಾದಾರರನ್ನಾಗಿ ಮಾಡಿಸಿ, ಒಳ್ಳೆಯ ಪತ್ರಿಕೆ ಅಂತಲೂ ಹೇಳಿದ್ದರು.

ಬದಲಾದ ಕೇಂದ್ರ ಸರ್ಕಾರ, ಸರ್ಕಾರದ ಬದಲಾದ ಆದ್ಯತಗಳ ಬಗ್ಗೆ ಬೇಸರವಿತ್ತು. ಗಾಂಧಿಯನ್ನು ಮರೆತರೆ ಈ ದೇಶ ಉದ್ಧಾರವಾಗುತ್ತೇನ್ರೀ. ಸ್ಟುಪಿಡ್ ಫೆಲೋ, ಎಲ್ಲದರಲ್ಲೂ ತನ್ನನ್ನೇ ಮೆರೆಸಿಕೊಳ್ಳುವ ಈ ಪ್ರಧಾನಿ ಏನು ತಾನೇ ಮಾಡಬಲ್ಲ ಈ ದೇಶಕ್ಕೆ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದರು. ನೋಟ್ ಡಿಮಾನೆಟೈಜ಼್ ಮಾಡಿ ಏನೂ ಸಾಧಿಸಲು ಸಾಧ್ಯ ಇಲ್ಲ. ಎಷ್ಟು ಜನರಿಗೆ  ತೊಂದರೆ ಆಗಿದೆ. ನಾನು ರಿಟೈರ್ಡ್ ಎಂಪ್ಲಾಯಿ ಗಂಟೆಗಟ್ಟಲೆ ಮಂಡಿ ನೋವಿಟ್ಟುಕೊಂಡು ಸಾಲಲ್ಲಿ ನಿಂತು ನೋಟ್ ಪಡೆಯೋಕ್ಕೆ ಆಗುತ್ತಾ.  ಸಾಮಾನ್ಯರ ಜೀವನಕ್ಕೆ  ಬೆಲೆಯೇ ಇಲ್ಲ ಅಂದಿದ್ದರು. ನೋಡೀಮ್ಮ, ಧರ್ಮ ಅನ್ನುವುದು ನಮ್ಮ ನಮ್ಮ ಮನೆಯ ಆಚರಣೆಗೆ ಸೀಮಿತವಾಗಿರ್ಬೇಕು. ನೀವು ದನ ತಿನ್ಬೇಡಿ, ಸಸ್ಯಾಹಾರ ತಿನ್ನು ಅಂತ ಸರ್ಕಾರ ಯಾಕೆ ಹೇಳ್ಬೇಕು. .ಬೇರೆ ಮುಖ್ಯವಾದ ಕೆಲಸ ಇಲ್ವೇನ್ರೀ? ಶಿಕ್ಷಣ ಕ್ಷೇತ್ರದ ಬಗ್ಗೆ ಗಮನ ಕೊಡಲಿ. ಉದ್ಯೋಗ ಸೃಷ್ಟಿ ಮಾಡಲಿ. ಯುವ ಜನಾಂಗಕ್ಕೆ ಮಾದರಿಯಾಗಲಿ. ಅದು ಬಿಟ್ಟು ಅವರನ್ನೆಲ್ಲ ಬೇರೆಯವರ ಮೇಲೆ ಎತ್ತಿಕಟ್ಟಲು ಉಪಯೋಗಿಸಿದರೆ ಈ ದೇಶಕ್ಕೆ ಭವಿಷ್ಯ ಇದೆಯಾ!

ನೀವು ಈಗಿನ ಕಾಲದ ತಂದೆ-ತಾಯಿಗಳಿಗೆ ಮಕ್ಕಳನ್ನು ಬೆಳೆಸುವ ವಿಧಾನವೇ ತಿಳಿದಿಲ್ಲ. ಮಕ್ಕಳನ್ನು ಸ್ನೇಹಿತರ ತರ ನೋಡ್ಕೋಬೇಕು. ಸ್ಕೂಲು, ಮಾರ್ಕ್ಸು ಅಂತಾ ತುಂಬಾನೆ ತಲೆ ಕೆಡ್ಸ್ಕೋತೀರ. ಮಕ್ಕಳಿಗೆ ಅವರ ಆಸಕ್ತಿಯ ವಿಷಯ ಓದಲು ಅವಕಾಶ ಮಾಡ್ಕೊಡಿ. ಭಾನುವಾರ ಕೂಡಾ ಬಿಡದೆ ಆ ಕ್ಲಾಸು, ಈ ಕ್ಲಾಸು ಅಂತ ಸೇರಿಸಿ ಅವರ ಮನಸ್ಸಿನ ವಿಕಾಸವಾಗಲು ಅವಕಾಶ ಕೊಡದೆ ಇದ್ದರೆ ಮುಂದೆ ಹೇಗೆ? ನಮ್ಮಪ್ಪ ಅಮ್ಮ ನಮ್ಮನ್ನು ಹೀಗೇ ಬೆಳ್ಸಿದ್ರೇ? ನಾವು ಏನು ಓದ್ತಾ ಇದ್ದೀವಿ ಅನ್ನೋದೂ ಕೂಡಾ ಗೊತ್ತಿರ್ತಾ ಇರ್ಲಿಲ್ಲ ಅವರಿಗೆ. ಸಮಯಕ್ಕೆ ಸರಿಯಾಗಿ ಊಟ ಮಾಡ್ತಾ ಇದ್ದಾವ ಇಲ್ಲವ ಮಕ್ಕಳು ಅಂತ ಅಷ್ಟೆ ಅವರು ಖಾಳಜಿ ವಹಿಸ್ತಾ ಇದ್ದಿದ್ದು. ನಾವೆಲ್ಲ ಬೆಳೆದು ಮುಂದೆ ಬರ್ಲಿಲ್ವೆ ಅನ್ನುತ್ತಿದ್ದರು.

ಮಗನಿಗೆ ಸಿನಿಮಾ ನಿರ್ದೇಶಕನಾಗಲು ಆಸೆ. ಅದೆಲ್ಲ ನಮ್ಮಂತ ಮದ್ಯಮವರ್ಗದವರಿಗೆ ಸಾಧ್ಯಾನ? ಆದ್ರೂ ಅವನಿಗೆ ಬಹಳ ಆಸೆ. ನನಗೆ ಕೈಲಾದಷ್ಟು ಸಹಾಯ ಮಾಡಿದ್ದೀನಿ ಅಂದಿದ್ದರು. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಫೋನ್ ಮಾಡಿ ಸಾಧ್ಯ ಆದರೆ ಮನೆಯರನ್ನೆಲ್ಲ ಕರೆದುಕೊಂದು ಹೋಗಿ ಸಿನಿಮಾ ನೋಡಿ, ಪ್ರೋತ್ಸಾಹಿಸಿ ಅಂದಿದ್ದರು.

ಕೆಲವು ತಿಂಗಳ ಹಿಂದೆ ಫೋನ್ ಮಾಡಿ, ನೀವು ವಾಟ್ಸಾಪ್ ನಲ್ಲಿದ್ದೀರ? ನನ್ನ ಮೊಮ್ಮಗ ತೋರಿಸಿಕೊಟ್ಟ. ತುಂಬಾ ಸುಲಭ ಕಣ್ರೀ ಅಂತ ಹೇಳಿ, ಆಗಾಗ್ಗೆ ಲಿಂಕ್ ಗಳನ್ನು ಶೇರ್ ಮಾಡ್ತಾ ಇದ್ದರು. ನಿಮ್ಮ ಮನೆಗೆ ಬರಬೇಕು ಸರ್ ನಿಮ್ಮ ಹತ್ತಿರ ತುಂಬಾ ಮಾತಾಡ್ಬೇಕು ಅಂದಾಗ, ನಾನೇನಮ್ಮ ಯಾವಾಗ್ಲೂ ಫ್ರೀ. ನೀವುಗಳೇ ಬಿಜ಼ಿ ಅನ್ನುತ್ತಿದ್ದರು. ನನ್ನ ಪುಸ್ತಕ ಬಿಡುಗಡೆಯಾಗಿದೆ. ನಿಮಗೆ ಒಂದು ಪ್ರತಿ ತೆಗೆದಿಟ್ಟಿದ್ದೇನೆ. ಬನ್ನಿ ಎಂದು ಹೇಳಿದ್ದರು. ಪ್ರತಿ ವರ್ಷ ಮರೆಯದೆ ಖಾದ್ರಿ ಶಾಮಣ್ಣ ಟ್ರಸ್ಟ್ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಬಹುತೇಕ ವಾರದ ದಿನಗಳಲ್ಲೇ ಕಾರ್ಯಕ್ರಮವಿರುತ್ತಿದ್ದರಿಂದ ಒಮ್ಮೆಯೂ ಹೋಗಲು ಸಾಧ್ಯವಾಗಿರಲಿಲ್ಲ. ಒಂದೆರಡು ವಾರಗಳಿಂದ ವಾಟ್ಸಾಪ್ ನಲ್ಲಿ ಏನೂ ಮೆಸ್ಸೇಜ್ ಬರುತ್ತಿರಲಿಲ್ಲ. ಬಿಜ಼ಿ ಇರಬೇಕೋ ಏನೋ ಅಂದುಕೊಡಿದ್ದೆ. ಅಚಾನಕ್ ಆಗಿ ಬಾರದ ಲೋಕಕ್ಕೆ ನಡೆದುಬಿಟ್ಟರು. ಈಗ ಮನಸ್ಸಿಗೆ ಪಿಚ್ಚೆನಿಸುತ್ತಿದೆ. ಸಮಯ ಮಾಡಿಕೊಂಡು ಒಮ್ಮೆಯಾದರೂ ಹೋಗಿ ಬರಬೇಕಿತ್ತು. ಅವರನ್ನೊಮ್ಮೆ ಭೇಟಿಯಾಗಬೇಕು, ಕೂತು ಮಾತನಾಡಬೇಕು ಅಂದುಕೊಡ್ಡಿದ್ದು ಬರೀ ಆಸೆಯಾಗಿಯೇ ಉಳಿಯಿತು.

ಅಂತಿಮ ದರ್ಶನಕ್ಕೆಂದು ಹೋದಾಗ ಅವರ ಜೊತೆ ಕೆಲಸ ಮಾಡಿದವರೊಬ್ಬರು ನೆನಪಿಸಿಕೊಳ್ಳುತ್ತಿದರು. “ಕೆಲಸದಲ್ಲಿ ಭಾರೀ ಸ್ಟ್ರಿಕ್ಟು. ಸಿಟ್ಟುಮಾಡಿಕೊಳ್ಳುತ್ತಿದ್ದರು. ತಕ್ಷಣವೇ ಸಿಟ್ಟನ್ನು ಮರೆತುಬಿಡುತ್ತಿದ್ದರು. ಆಫೀಸಿನ ವೇಳೆ ಮೀರಿಯೂ ಯಾರಾದರೂ ಉಳಿದುಕೊಂಡಲ್ಲಿ ಮನೆಗೆ ಹೊರಡಿ, ನಾಳೆ ಮಾಡೋಣ ಅನ್ನುತ್ತಿದ್ದರು. ತಾವು ಮನೆಗೆ ತಲುಪಿದ ಮೇಲೆ ಮತ್ತೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಮನೆಗೆ ಹೋಗೀಪ್ಪಾ ಮನೆಯಲ್ಲಿ ಕಾಯ್ತಾ ಇರ್ತಾರೆ ಅನ್ನುತ್ತಿದ್ದರು. ತುಂಬಾ ಒಳ್ಳೆಯ ಮನಸ್ಸು ಅವರದ್ದು” ಅಂತ ಹನಿಗಣ್ಣಾದರು.

Advertisements

Coffee on the wall . . .

ಮೇ 11, 2013

ಸಂಜೆ ಆಫೀಸಿನಿಂದ ಕ್ಯಾಬ್ ನಲ್ಲಿ ಬರುವಾಗ ಹೊಟ್ಟೆ ಚುರುಗುಟ್ಟಿದಾಗ, ಕ್ಯಾಬ್ ಗೆ ತಡವಾಗಿ ಬಂದಿದ್ದಕ್ಕೆ ಅಥವಾ ಹುಟ್ಟಿದ ಹಬ್ಬ ಹೀಗೆ ಹಲವು ಕಾರಣಗಳ ನಿಮಿತ್ತ ಆಗಾಗ್ಗೆ ಚಾಮರಾಜ ಪೇಟೆಯಲ್ಲಿರುವ ಬ್ರಾಹ್ಮಿನ್ಸ್ ಕೆಫೆ ನಮ್ಮ  ಬಾಯಾಡಿಕೆಯ ತಾಣ. ಚುರುಕಾದ, ಅತಿ ಕಡಿಮೆ ವೇಳೆಯಲ್ಲಿ (ಆದರೆ  ದರ ಹೆಚ್ಚಿನದೇ!) ದೊರೆಯುವ ಸೇವೆಗಾಗಿ ಅದು ನಮ್ಮ  ಆಯ್ಕೆಯ ತಾಣ.

ಮೊನ್ನೆ, ಕ್ಯಾಬ್ ಇಳಿದು ಕೆಫೆಯನ್ನು ಸಮೀಪಿಸುತ್ತಿದ್ದ ಹಾಗೇ ರಸ್ತೆಯ ಆ ಬದಿಯಲ್ಲಿ ಕನ್ನಡ ಕಟ್ಟೆಯ ಬಳಿ ಕುಳಿತ ತಾತ ಕೈ ಬೀಸಿ ಕರೆಯುತ್ತಿತ್ತು. ಯಾಕೆ ಎಂದು ತಿರುಗಿ ನೋಡಿದರೆ ಕೈಯಲ್ಲಿದ್ದ ಬಿದಿರಿನ ಬುಟ್ಟಿಯಲ್ಲಿ ಘಮ್ಮೆನ್ನುವ ಮಲ್ಲಿಗೆ ಹೂವು. “ಬಾರವ್ವಾ, ಇನ್ನೂ ಬೋಣಿನೇ ಆಗಿಲ್ಲ”. ಹೂವು ಮುಡಿಯುವುದು ಸೌಂದರ್ಯಕ್ಕಿಂತ,  ಸ್ತ್ರೀ  ಸೌಭಾಗ್ಯದ ಕುರುಹಾಗಿದೆ ಅನ್ನಿಸತೊಡಗಿದ ಮೇಲೆ ಹೂವಿಗೂ ನನಗೂ ದೂರ. ಆದರೂ ಇಲ್ಲವೆನ್ನಲು ಮನಸ್ಸು ಬಾರದು. “ನೆನ್ನೆಯಿಂದ ಊಟ ಮಾಡಿಲ್ಲ. ಒಂದು ಮೊಳ ಹೂ ತಗಂಡು ಪುಣ್ಯ ಕಟ್ಕಳವ್ವಾ” ದೈನ್ಯದ ಸ್ವರ.  ಆಯ್ತು ತಾತಾ ಎರಡು ಮೊಳ ಕೊಡು. ಕೈ ಮೊಟಕು ಮಾಡಿ ಮೊಳ  ಹಾಕುವ ಪೈಕಿಯಲ್ಲ ಈ ತಾತ. ಪೂರ್ತಿ ಎರಡು ಮೊಳ, ಮೇಲೆ ಒಂಚೂರು ಕೊಸರು. “ತಗಳ್ಳವ್ವಾ ಮುಚ್ಚಂಜೆ ಹೊತ್ತು, ಹೂವ ಮುಟ್ಕಳವ್ವ” ಅಂತ.

ಸೊರಗಿದ ಮೈ, ದೊಗಲೆ ಶರ್ಟು, ಮಂಡಿಯ ವರೆಗಿನ ಚಡ್ಡಿ, ಹಳೆಯ ಕನ್ನಡಕ, ಮುಖದಲ್ಲಿದ್ದದ್ದು ಹೂ ಮಾರಾಟವಾಗಿದ್ದಕ್ಕೆ ನೆಮ್ಮದಿಯ ಭಾವವೋ, ಎದುರಿನಲ್ಲಿರುವ ಹೋಟೆಲ್ ನಲ್ಲಿ  ಅಂಗಡಿಯಲ್ಲಿ ೨೪ ರುಪಾಯಿ ಕೊಟ್ಟು ಎರಡು ಇಡ್ಲಿ ತಿನ್ನಲಾಗದ ಪರಿಸ್ಥಿತಿಯ ಬಗ್ಗೆ ದುಃಖವೋ ಕಾಣೆ.

ಚೌ ಚೌ ಭಾತ್, ಇಡ್ಲಿ, ವಡೆಗಳನ್ನು ಮುಂದಿಟ್ಟುಕೊಂಡು ಯಾವುದನ್ನು ತಿನ್ನುವುದು, ಯಾವುದನ್ನು ಬಿಡುವುದು, ಕೇಸರಿ  ಭಾತ್ ನಲ್ಲಿ ಇವತ್ತು ಗೋಡಂಬಿಯೂ ಇದೆಯಲ್ಲಾ, ನಮ್ಮನೇಲಿ ವಡೆ ಯಾಕೆ ಇಷ್ಟು ಗರಿ ಗರಿಯಾಗಿ ಬರುವುದಿಲ್ಲ ಎಂದೆಲ್ಲ ಮಾತಿನ ಭರದಲ್ಲಿ, ಬಿಸಿ ಆರುವ  ಮುನ್ನ ತಿಂಡಿಗಳು ಬಾಯಿ ಸೇರುತ್ತಿರುವಾಗ ಕಣ್ಣ ಮುಂದೆ ಬಂದಿದ್ದು “ನೆನ್ನೆ ರಾತ್ರಿಯಿಂದ ಊಟ ಇಲ್ಲ ಕಣವ್ವಾ” ಅಂದ ಮಲ್ಲಿಗೆ ಹೂವಿನ ಬುಟ್ಟಿಯನ್ನು ಹೊತ್ತ ತಾತನ ಮುಖ.  ನಮ್ಮ ಕ್ಯಾಬ್ ಚಾಲಕ ದರ್ಶನ್ ಗೆಂದು ಪಾರ್ಸಲ್ಗೆ ಹೇಳಲೆಂದು ಹೊರಟ ಸಹೋದ್ಯೋಗಿಯ ಬಳಿ ಮತ್ತೊಂದು ಪ್ಲೇಟ್ ಇಡ್ಲಿ ವಡೆ ಪಾರ್ಸಲ್ ಹೇಳಿದ್ದಾಯ್ತು.  ಗಾಡಿಯ ಬಳಿ ತೆರಳುವ ಮುನ್ನ ಮಲ್ಲಿಗೆ ಹೂವಿನ ತಾತನಿಗೆ ಪಾರ್ಸಲ್ ತಲುಪಿಸಿದಾಗ ಏನೋ ಸಮಾಧಾನ. ಯಾವ ಕಾಲದಲ್ಲಿ ಮಂದಿಗೆ ನೀಡಿ ಬದುಕಿದ ಜೀವವೋ ಏನೋ. ನಾನು ಆಗಲೇ ಕೊಟ್ಟ ಹೂವನ್ನು ಮುಟ್ಕಳ್ಳಲಿಲ್ವಲ್ಲವ್ವ, ತಗೋ ಅಂತ ಮತ್ತೆ ಅರ್ಧ ಮೊಳ ಕೈಗೆ ನೀಡಿತು.

ಕ್ಯಾಬ್ ನಲ್ಲಿ ಕೂತು ನಮ್ಮ ನಮ್ಮ ಪಾಲಿನ ಲೆಖ್ಖ ಹಾಕುವಾಗ ಸಹೋದ್ಯೋಗಿಯೊಬ್ಬರು ಹೇಳಿದ್ದು ತಾತನ ತಿಂಡಿ ಖರ್ಚು ನೀವೊಬ್ಬರೇ ಯಾಕೆ ಹಾಕ್ತೀರ ಎಲ್ರೂ ಸೇರಿಯೇ ಕೊಡೋಣ. ಆಗ ನೆನಪಾಗಿದ್ದು ಮೆಯ್ಲ್ ನಲ್ಲಿ ಹಿಂದೊಮ್ಮೆ ಓದಿದ coffee on the wall ವಿಚಾರ. ವಿದೇಶದಲ್ಲೆಲ್ಲೋ ಒಂದು ಹೋಟೆಲ್ನಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಹೋಟೆಲ್ ಗೆ ಹೋದವರು ತಮ್ಮ ಬಿಲ್ಲಿನ ಜೊತೆಗೆ ಮತ್ತೊಬ್ಬರ ಕಾಫಿಯ ಖರ್ಚು ಸೇರಿಸಿ  ಹಣ ಸಂದಾಯ ಮಾಡುವುದು. ಹೀಗೆ ಒದಗಿದ ಹೆಚ್ಚಿನ ಹಣವನ್ನು, ದುಡ್ಡು ಕೊಟ್ಟು ಕಾಫಿ ಕುಡಿಯಲಾಗದವರಿಗಾಗಿ ಉಚಿತ ಕಾಫಿ ಕೊಡಲು ಉಪಯೋಗಿಸಲಾಗುವುದು. ನಮ್ಮಲ್ಲ್ಲೂ ಯಾಕೆ ಇಂತಹದ್ದೊಂದು ಅಭ್ಯಾಸ ಶುರುವಾಗಬಾರದೆಂಬ ಚರ್ಚೆಯೊಂದು  ಹೋಟೆಲ್ ಉದ್ಯಮಿ ಮತ್ತು ಗ್ರಾಹಕರನ್ನೊಳಗೊಂಡ  ಫೇಸ್ ಬುಕ್ ಗುಂಪಿನಲ್ಲಿ ಚರ್ಚೆಗೆ ಒಳಗಾಗಿ, ಕೊನೆಗೆ ಲಭ್ಯತೆ-ಅವಶ್ಯಕತೆ ಗಳ ಅಂಕಿ ಅಂಶಗಳಲ್ಲಿರುವ ಭಾರೀ ವ್ಯತ್ಯಯದ ನೆಪವೊಡ್ಡಿ ವಿಷಯ ಅಲ್ಲೇ ತಣ್ಣಗಾಯಿತು.

ನಮ್ಮ ದರ್ಶಿನಿಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಯಾಕಾಗಬಾರದು? ಇಚ್ಛೆಯಿದ್ದವರು ಮತ್ತೊಬ್ಬರ ತಿನಿಸಿಗಾಗಿ  ದುಡ್ಡು ತೆತ್ತಲ್ಲಿ, ದುಡಿದು ತಿನ್ನಲು ಅಶಕ್ಯವಾದ ಎಷ್ಟೋ ಮಂದಿಯ ತುತ್ತಿನ ಚೀಲಗಳು ತುಂಬಬಹುದಲ್ಲವೇ? ಸೋಮಾರಿತನಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ವಾದವು ಸರಿಯೆನಿಸಿದರೂ, ಭಿಕ್ಷೆ ಬೇಡುತ್ತಿರುವ  ಅಥವಾ ಕೈಲಾಗದಿದ್ದರೂ ದುಡಿಯುತ್ತಿರುವ  ವೃದ್ಧ, ವೃದ್ದೆಯರನ್ನು ಕಂಡಾಗ ಮನ ಮಿಡಿಯುತ್ತದೆ,   ಇದೇ ವಿಚಾರವಾಗಿ ಫೇಸ್ ಬುಕ್ ಸ್ನೇಹಿತ ವಾಸುಕಿ ಯವರ ಬ್ಲಾಗ್ ಬರಹ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿತು. ನಮ್ಮ ಸುತ್ತಣ ಸಮಸ್ಯೆಗಳಿಗೆ ಏಕೆ ನಮಗೆ ಪರಿಹಾರ ಕಾಣುವುದಿಲ್ಲ? ಸಮಾಜದ ಭಾಗವಾಗಿ ನಾನೇನು ಮಾಡಬಹುದು? ಭಿಕ್ಷೆಯಿಂದಲ್ಲದೆ ಗೌರವಯುತವಾಗಿ ಸಮಾಜದಲ್ಲಿ ಎಲ್ಲರೂ ಬಾಳಲನುವು ಮಾಡಿಕೊಡಲು ನನ್ನ ಪ್ರಯತ್ನವೇನು? ಕೇವಲ ಪ್ರಶ್ನೆಗಳೇ ಆಗಿ ಉಳಿಯುತ್ತವೆ.