Posts Tagged ‘Poverty’

Coffee on the wall . . .

ಮೇ 11, 2013

ಸಂಜೆ ಆಫೀಸಿನಿಂದ ಕ್ಯಾಬ್ ನಲ್ಲಿ ಬರುವಾಗ ಹೊಟ್ಟೆ ಚುರುಗುಟ್ಟಿದಾಗ, ಕ್ಯಾಬ್ ಗೆ ತಡವಾಗಿ ಬಂದಿದ್ದಕ್ಕೆ ಅಥವಾ ಹುಟ್ಟಿದ ಹಬ್ಬ ಹೀಗೆ ಹಲವು ಕಾರಣಗಳ ನಿಮಿತ್ತ ಆಗಾಗ್ಗೆ ಚಾಮರಾಜ ಪೇಟೆಯಲ್ಲಿರುವ ಬ್ರಾಹ್ಮಿನ್ಸ್ ಕೆಫೆ ನಮ್ಮ  ಬಾಯಾಡಿಕೆಯ ತಾಣ. ಚುರುಕಾದ, ಅತಿ ಕಡಿಮೆ ವೇಳೆಯಲ್ಲಿ (ಆದರೆ  ದರ ಹೆಚ್ಚಿನದೇ!) ದೊರೆಯುವ ಸೇವೆಗಾಗಿ ಅದು ನಮ್ಮ  ಆಯ್ಕೆಯ ತಾಣ.

ಮೊನ್ನೆ, ಕ್ಯಾಬ್ ಇಳಿದು ಕೆಫೆಯನ್ನು ಸಮೀಪಿಸುತ್ತಿದ್ದ ಹಾಗೇ ರಸ್ತೆಯ ಆ ಬದಿಯಲ್ಲಿ ಕನ್ನಡ ಕಟ್ಟೆಯ ಬಳಿ ಕುಳಿತ ತಾತ ಕೈ ಬೀಸಿ ಕರೆಯುತ್ತಿತ್ತು. ಯಾಕೆ ಎಂದು ತಿರುಗಿ ನೋಡಿದರೆ ಕೈಯಲ್ಲಿದ್ದ ಬಿದಿರಿನ ಬುಟ್ಟಿಯಲ್ಲಿ ಘಮ್ಮೆನ್ನುವ ಮಲ್ಲಿಗೆ ಹೂವು. “ಬಾರವ್ವಾ, ಇನ್ನೂ ಬೋಣಿನೇ ಆಗಿಲ್ಲ”. ಹೂವು ಮುಡಿಯುವುದು ಸೌಂದರ್ಯಕ್ಕಿಂತ,  ಸ್ತ್ರೀ  ಸೌಭಾಗ್ಯದ ಕುರುಹಾಗಿದೆ ಅನ್ನಿಸತೊಡಗಿದ ಮೇಲೆ ಹೂವಿಗೂ ನನಗೂ ದೂರ. ಆದರೂ ಇಲ್ಲವೆನ್ನಲು ಮನಸ್ಸು ಬಾರದು. “ನೆನ್ನೆಯಿಂದ ಊಟ ಮಾಡಿಲ್ಲ. ಒಂದು ಮೊಳ ಹೂ ತಗಂಡು ಪುಣ್ಯ ಕಟ್ಕಳವ್ವಾ” ದೈನ್ಯದ ಸ್ವರ.  ಆಯ್ತು ತಾತಾ ಎರಡು ಮೊಳ ಕೊಡು. ಕೈ ಮೊಟಕು ಮಾಡಿ ಮೊಳ  ಹಾಕುವ ಪೈಕಿಯಲ್ಲ ಈ ತಾತ. ಪೂರ್ತಿ ಎರಡು ಮೊಳ, ಮೇಲೆ ಒಂಚೂರು ಕೊಸರು. “ತಗಳ್ಳವ್ವಾ ಮುಚ್ಚಂಜೆ ಹೊತ್ತು, ಹೂವ ಮುಟ್ಕಳವ್ವ” ಅಂತ.

ಸೊರಗಿದ ಮೈ, ದೊಗಲೆ ಶರ್ಟು, ಮಂಡಿಯ ವರೆಗಿನ ಚಡ್ಡಿ, ಹಳೆಯ ಕನ್ನಡಕ, ಮುಖದಲ್ಲಿದ್ದದ್ದು ಹೂ ಮಾರಾಟವಾಗಿದ್ದಕ್ಕೆ ನೆಮ್ಮದಿಯ ಭಾವವೋ, ಎದುರಿನಲ್ಲಿರುವ ಹೋಟೆಲ್ ನಲ್ಲಿ  ಅಂಗಡಿಯಲ್ಲಿ ೨೪ ರುಪಾಯಿ ಕೊಟ್ಟು ಎರಡು ಇಡ್ಲಿ ತಿನ್ನಲಾಗದ ಪರಿಸ್ಥಿತಿಯ ಬಗ್ಗೆ ದುಃಖವೋ ಕಾಣೆ.

ಚೌ ಚೌ ಭಾತ್, ಇಡ್ಲಿ, ವಡೆಗಳನ್ನು ಮುಂದಿಟ್ಟುಕೊಂಡು ಯಾವುದನ್ನು ತಿನ್ನುವುದು, ಯಾವುದನ್ನು ಬಿಡುವುದು, ಕೇಸರಿ  ಭಾತ್ ನಲ್ಲಿ ಇವತ್ತು ಗೋಡಂಬಿಯೂ ಇದೆಯಲ್ಲಾ, ನಮ್ಮನೇಲಿ ವಡೆ ಯಾಕೆ ಇಷ್ಟು ಗರಿ ಗರಿಯಾಗಿ ಬರುವುದಿಲ್ಲ ಎಂದೆಲ್ಲ ಮಾತಿನ ಭರದಲ್ಲಿ, ಬಿಸಿ ಆರುವ  ಮುನ್ನ ತಿಂಡಿಗಳು ಬಾಯಿ ಸೇರುತ್ತಿರುವಾಗ ಕಣ್ಣ ಮುಂದೆ ಬಂದಿದ್ದು “ನೆನ್ನೆ ರಾತ್ರಿಯಿಂದ ಊಟ ಇಲ್ಲ ಕಣವ್ವಾ” ಅಂದ ಮಲ್ಲಿಗೆ ಹೂವಿನ ಬುಟ್ಟಿಯನ್ನು ಹೊತ್ತ ತಾತನ ಮುಖ.  ನಮ್ಮ ಕ್ಯಾಬ್ ಚಾಲಕ ದರ್ಶನ್ ಗೆಂದು ಪಾರ್ಸಲ್ಗೆ ಹೇಳಲೆಂದು ಹೊರಟ ಸಹೋದ್ಯೋಗಿಯ ಬಳಿ ಮತ್ತೊಂದು ಪ್ಲೇಟ್ ಇಡ್ಲಿ ವಡೆ ಪಾರ್ಸಲ್ ಹೇಳಿದ್ದಾಯ್ತು.  ಗಾಡಿಯ ಬಳಿ ತೆರಳುವ ಮುನ್ನ ಮಲ್ಲಿಗೆ ಹೂವಿನ ತಾತನಿಗೆ ಪಾರ್ಸಲ್ ತಲುಪಿಸಿದಾಗ ಏನೋ ಸಮಾಧಾನ. ಯಾವ ಕಾಲದಲ್ಲಿ ಮಂದಿಗೆ ನೀಡಿ ಬದುಕಿದ ಜೀವವೋ ಏನೋ. ನಾನು ಆಗಲೇ ಕೊಟ್ಟ ಹೂವನ್ನು ಮುಟ್ಕಳ್ಳಲಿಲ್ವಲ್ಲವ್ವ, ತಗೋ ಅಂತ ಮತ್ತೆ ಅರ್ಧ ಮೊಳ ಕೈಗೆ ನೀಡಿತು.

ಕ್ಯಾಬ್ ನಲ್ಲಿ ಕೂತು ನಮ್ಮ ನಮ್ಮ ಪಾಲಿನ ಲೆಖ್ಖ ಹಾಕುವಾಗ ಸಹೋದ್ಯೋಗಿಯೊಬ್ಬರು ಹೇಳಿದ್ದು ತಾತನ ತಿಂಡಿ ಖರ್ಚು ನೀವೊಬ್ಬರೇ ಯಾಕೆ ಹಾಕ್ತೀರ ಎಲ್ರೂ ಸೇರಿಯೇ ಕೊಡೋಣ. ಆಗ ನೆನಪಾಗಿದ್ದು ಮೆಯ್ಲ್ ನಲ್ಲಿ ಹಿಂದೊಮ್ಮೆ ಓದಿದ coffee on the wall ವಿಚಾರ. ವಿದೇಶದಲ್ಲೆಲ್ಲೋ ಒಂದು ಹೋಟೆಲ್ನಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಹೋಟೆಲ್ ಗೆ ಹೋದವರು ತಮ್ಮ ಬಿಲ್ಲಿನ ಜೊತೆಗೆ ಮತ್ತೊಬ್ಬರ ಕಾಫಿಯ ಖರ್ಚು ಸೇರಿಸಿ  ಹಣ ಸಂದಾಯ ಮಾಡುವುದು. ಹೀಗೆ ಒದಗಿದ ಹೆಚ್ಚಿನ ಹಣವನ್ನು, ದುಡ್ಡು ಕೊಟ್ಟು ಕಾಫಿ ಕುಡಿಯಲಾಗದವರಿಗಾಗಿ ಉಚಿತ ಕಾಫಿ ಕೊಡಲು ಉಪಯೋಗಿಸಲಾಗುವುದು. ನಮ್ಮಲ್ಲ್ಲೂ ಯಾಕೆ ಇಂತಹದ್ದೊಂದು ಅಭ್ಯಾಸ ಶುರುವಾಗಬಾರದೆಂಬ ಚರ್ಚೆಯೊಂದು  ಹೋಟೆಲ್ ಉದ್ಯಮಿ ಮತ್ತು ಗ್ರಾಹಕರನ್ನೊಳಗೊಂಡ  ಫೇಸ್ ಬುಕ್ ಗುಂಪಿನಲ್ಲಿ ಚರ್ಚೆಗೆ ಒಳಗಾಗಿ, ಕೊನೆಗೆ ಲಭ್ಯತೆ-ಅವಶ್ಯಕತೆ ಗಳ ಅಂಕಿ ಅಂಶಗಳಲ್ಲಿರುವ ಭಾರೀ ವ್ಯತ್ಯಯದ ನೆಪವೊಡ್ಡಿ ವಿಷಯ ಅಲ್ಲೇ ತಣ್ಣಗಾಯಿತು.

ನಮ್ಮ ದರ್ಶಿನಿಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಯಾಕಾಗಬಾರದು? ಇಚ್ಛೆಯಿದ್ದವರು ಮತ್ತೊಬ್ಬರ ತಿನಿಸಿಗಾಗಿ  ದುಡ್ಡು ತೆತ್ತಲ್ಲಿ, ದುಡಿದು ತಿನ್ನಲು ಅಶಕ್ಯವಾದ ಎಷ್ಟೋ ಮಂದಿಯ ತುತ್ತಿನ ಚೀಲಗಳು ತುಂಬಬಹುದಲ್ಲವೇ? ಸೋಮಾರಿತನಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ವಾದವು ಸರಿಯೆನಿಸಿದರೂ, ಭಿಕ್ಷೆ ಬೇಡುತ್ತಿರುವ  ಅಥವಾ ಕೈಲಾಗದಿದ್ದರೂ ದುಡಿಯುತ್ತಿರುವ  ವೃದ್ಧ, ವೃದ್ದೆಯರನ್ನು ಕಂಡಾಗ ಮನ ಮಿಡಿಯುತ್ತದೆ,   ಇದೇ ವಿಚಾರವಾಗಿ ಫೇಸ್ ಬುಕ್ ಸ್ನೇಹಿತ ವಾಸುಕಿ ಯವರ ಬ್ಲಾಗ್ ಬರಹ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿತು. ನಮ್ಮ ಸುತ್ತಣ ಸಮಸ್ಯೆಗಳಿಗೆ ಏಕೆ ನಮಗೆ ಪರಿಹಾರ ಕಾಣುವುದಿಲ್ಲ? ಸಮಾಜದ ಭಾಗವಾಗಿ ನಾನೇನು ಮಾಡಬಹುದು? ಭಿಕ್ಷೆಯಿಂದಲ್ಲದೆ ಗೌರವಯುತವಾಗಿ ಸಮಾಜದಲ್ಲಿ ಎಲ್ಲರೂ ಬಾಳಲನುವು ಮಾಡಿಕೊಡಲು ನನ್ನ ಪ್ರಯತ್ನವೇನು? ಕೇವಲ ಪ್ರಶ್ನೆಗಳೇ ಆಗಿ ಉಳಿಯುತ್ತವೆ.

Advertisements