Archive for ನವೆಂಬರ್, 2023

‘ಹಿರೇ ಮಗ ಆಗ್ಬಾರ್ದು ಹಾದ್ಯಾಗಿನ ಹೊಲ ಆಗ್ಬಾರ್ದು’

ನವೆಂಬರ್ 1, 2023

ನಮ್ಮಪ್ಪಂಗಿದ್ದಿದ್ದು ಹದಿನೆಂಟು ಕುಂಟೆ ಜಾಮೀನು.  ತಿನ್ನೋ ಬಾಯ್ಗುಳು ಮನೆವ್ರು ಎಂಟು ಜನ ಆದ್ರೆ ಬರೋರು ಹೋಗೋರು ಅಷ್ಟೇ ಜನ. ದುಡಿದಿದ್ದೆಲ್ಲ ಹೊಟ್ಟೆ ಬಟ್ಟೆಗೆ ನೇರ ಮಾಡೋಷ್ಟರಲ್ಲೇ ಆತಿತ್ತು. ನಂಗಿಂತ ನನ್ನ ತಮ್ಮ ಓದೋದ್ರಲ್ಲಿ ಬುದ್ವಂತ. ಆದ್ರೆ ನಮ್ಮವ್ವ ನಾನು ಹಿರೇ ಮಗ ಅಂತಾನೋ ಏನೋ ನಂಗೆ ಓದು ಅಂತು, ನನ್ನ ತಮ್ಮಂಗೆ ಆರಂಬ  ಮಾಡು ಅಂತು. ಇನ್ನೊಬ್ಬ ತಮ್ಮ ಮೈಗಳ್ಳ ಈ ಕಡೆ ಓದ್ತಾನೂ ಇರ್ಲಿಲ್ಲ, ಹೊಲ್ದಗೆ ಕೆಲ್ಸಾನೂ ಮಾಡ್ತಿರ್ಲಿಲ್ಲ.  ‘ಕಿವಿ ಕಿತ್ತರೂ ಕಿರೆ ಮಗ ಪ್ರೀತಿ’ ಅಂತ ನಮ್ಮವ್ವ ರವಷ್ಟು ಜಾಸ್ತಿನೇ ಪ್ರೀತಿ ತೋರಿಸ್ತಿತ್ತು ಅವುನ್ಮೇಲೆ.

ನಮ್ಮನೆಗೆ ಎತ್ಗುಳು ಇರ್ಲಿಲ್ಲ. ಇರೋರತ್ರ ತಾಂಬಂದು ಉಳ್ಮೆ ಮಾಡ್ಬೇಕಾಗಿತ್ತು.  ಹಿಂಗೇ ಒಂದ್ಸಲಿ ಒಬ್ರತ್ರ ಎತ್ತು ಕೇಳಕ್ಕೆ ಅಂತ ಹೋಗಿದ್ದೆ. ಎತ್ತೇನೋ ಕೊಟ್ರು. ಅದ್ರ ಜೊತೆಗೆ ಒಂದ್ಮಾತಂದ್ರು ‘ಒಬ್ಬರಲ್ಲ ಇಬ್ಬರಲ್ಲ ಮೂರ್ಜನ ಗಂಡ್ಮಕ್ಳಿದ್ದೀರ ಆದ್ರೂ ನಿಮ್ಮಣೆ ಒಳ್ಗೆ ಬರ್ದಿಲ್ಲ ಒಂಜೊತೆ ಎತ್ತ್ ತಗಳ್ಳಕ್ಕೆ ಮೂವಾರು ತಂಗೀರ್ನ ದಡಾ ಸೇರ್ಸಕ್ಕೆ ‘ ಅಂತ . ಆ ಮಾತ್ಗೆ ಸಿಟ್ಟು ನೆತ್ತಿಗೇರಿತ್ತು. ಬಡವನ ಕೋಪ ದವಡೆಗೆ ಮೂಲ ಅಂತ ಸುಮ್ನಿದ್ದೆ. ಆಗ್ಲಿಂದಾನೂ ಆ ಮಾತು ಕೊರೀತಿತ್ತು. ಅಪ್ಪ ಅಂತೂ ಅದ್ಯಾರೋ ಇನ್ಸ್ಪೆಕ್ಟ್ರು  ‘ನಾನು ಬಂದು ನಿಂತಿರದು ಕಂಡರೂ ಕಾಣದಂಗೆ ಪಾಠ ಮಾಡ್ತಿದ್ರಿ’ ಅಂತ ಅಂದ್ರು ಅಂತ ಅದ್ನೇ ನೆಪ ಮಾಡ್ಕಂಡು ಕೈಯಾಗಿದ್ದ ಮೇಷ್ಟ್ರು ಕೆಲಸ ಬಿಟ್ಟು ಮನೆಗೆ ಕುಂತ್ಕಂಡಿದ್ದ. ಹೊಲ್ದಗೆ ಬರಾ ರಾಗಿ ಒಂದೊತ್ಗೆ ಆದ್ರೆ ಇನ್ನೊಂದೊತ್ಗೆ ಆತಿರ್ಲಿಲ್ಲ. ಅಪ್ಪ ಕಷ್ಟ ಜೀವಿ. ಎರಡನೇ ಮಹಾಯುದ್ಧದ ಸೈನಿಕ್ರು ಆ ಕಾಲಕ್ಕೆ ನಮ್ಮ ಯಲಂಕದಾಗೆ ಬಿಡಾರ    ಊಡಿದ್ರಂತೆ.  ಅವುರ್ಗೆ  ಹಾಲ್ ಸಪ್ಲೈ ಮಾಡಕ್ಕೆ ಅಂತಾನೆ ಒಂದು ಹಾಲಿನ್ ಡೇರಿ ಶುರು ಮಾಡಿದ್ರು ಪುಟ್ಟಭೈರಯ್ಯನೋರು. ಅಪ್ಪ ಅಲ್ಲಿ ಲೆಕ್ಕ ಬರ್ಯಕ್ಕೆ ಓತಿತ್ತು.  ಭಾರೀ ನಿಯತ್ತು ದುಡ್ಡಿನ ವಿಷಯದಾಗೆ ನಮ್ಮಪ್ಪ. ಅದ್ಕೆ ಅವ್ರ ಮನೆವರಿಗೆಲ್ಲ ಅಭಿಮಾನ ನಮ್ಮಪ್ಪುನ್ಮೇಗೆ.   ನಾನು ಎಸಲ್ಸಿ ಮುಗ್ಸಿ ಇಂಟ್ರುಮೀಡಿಯಟ್   ಫೇಲಾಗಿ ಒಲ್ದಾಗೆ  ಕೆಲಸ ಮಾಡ್ಕಂಡು, ಊರಗೆ ಬಾವಿ ತೋಡ ಕೆಲಸದಾಗೆ ಕೂಲಿ ಮಾಡ್ಕಂಡು  ಮನೇಗಿದ್ದೆ. ನಮ್ಮಪ್ಪ ಸುಮ್ಕಿರ್ದೇ  ಪುಟ್ಟಭೈರಯ್ಯನೋರ ತಮ್ಮ ರಾಜಪ್ಪನೋರು(ಆ ಕಾಲುಕ್ಕೇ ಮೈಸೂರು ಸರ್ಕಾರದಾಗೆ ಎಮ್ಮೆಲ್ಲೆ ಆಗಿದ್ರು)   ಬಂದಾಗ ನಮ್ಮುಡ್ಗ  ಇಂಟ್ರುಮೀಡಿಯಟ್ ಫೇಲ್ ಆಗಿ ಆರಂಭ ಮಾಡ್ಕಂಡವ್ನೆ ಟಿ.ಸಿ.ಎಚ್ ಗೆ ಒಂದು ಸೀಟು ಕೊಡ್ಸಿ ಬುದ್ಧಿ ಅಂತು. ದೊಡ್ ಮನ್ಶ ರಾಜಪ್ಪನೋರು ನಡಿ ನಂಜೊತೆಗೆ ಅಂತ  ತಕ್ಷಣನೇ ಕಾರ್ ಅತ್ತಸ್ಗಂಡು ಸಿದ್ಗಂಗಿ ಸ್ವಾಮ್ಗುಳತ್ರ ಕರ್ಕಂಡೋದ್ರು. ನಮ್ಮುಡ್ಗ  ಇವ್ನು ಒಂದ್ ಸೀಟ್ ಕೊಡಿ ಬುದ್ದಿ ಅಂತೇಳಿ ತಕ್ಪಣುಕ್ಕೆ ಸೀಟ್ ಕೊಡುಸ್ಬುಟ್ರು.   ಟಿ.ಸಿ.ಎಚ್ ಮುಗುಸ್ಡೇಟ್ಗೆ ಗೌರ್ಮೆಂಟ್ ಅಪ್ಪೋಯಿಂಟ್ಮೆಂಟೂ ಸಿಕ್ಬುಡ್ತು.  ಆಗ ನೋಡಪ್ಪ ದೇವ್ರು ಕಣ್ಬುಟ್ಟಾ ! ನಮ್ಮನೆ ಬಡತನ ನೀಗ ಕಾಲ ಬಂತು. ಆಗ್ಲಿಂದಾನೊ ಹುಚ್ಚಿಗೆದ್ದಂಗೆ ದುಡಿದೇ.  ಜೋಡೆತ್ತು ತಗಂಡು, ಖರೀದಿಗೆ ಸಿಕ್ಕ ಒಲ ತಗಂಡು,  ಅಪ್ಪ ಮಾಡಿದ್ದ ಸಾಲ ತೀರ್ಸಿ, ತಂಗೀರ್ಗೆ ಮದ್ವೆ ಮಾಡಿ ದಡಾ  ಸೇರ್ಸಿ  ನಾನ್ ಮದ್ವೆ ಆಗೋತ್ಗೆ ಮುವ್ವತ್ತೊರ್ಷ.  ಇದ್ರ ಮದ್ಯದಾಗೆ ನಾನು ಬೆಂಗ್ಳೂರಗೆ ಸುಮ್ನಿರದೆ ಈವನಿಂಗ್ ಕಾಲೇಜಗೆ ಬಿ.ಎಡ್, ಎಂ.ಎಡ್, ಎಂ.ಎ ಎಲ್ಲಾ ಮಾಡ್ಕಂಡು ಪ್ರೊಮೋಶನ್ನೂ ತಂಗಂಡಿದ್ದೆ .  ಹದಿನೆಂಟು ಗುಂಟೆ ಜಮೀನು ೧೫ ಎಕರೆಗೆ ತಂದು ನಿಲ್ಸಿದ್ದೆ, ಕೆಲ್ಸಕ್ಕೆ ಸೇರಿದ್ ೨೦ ವರ್ಷದಾಗೆ. ಊರಾಗಿದ್ದ ತಮ್ಮನೂ ಸಮನಾಗೆ ದುಡ್ಡ ನಾನು ಉತ್ತೇಜನ ಕೊಟ್ಟಿದ್ಕೆ.  ತಮ್ಮಂದಿರ ಮದುವೇ, ತಂಗಿ ಮಕ್ಳ ಮದುವೇ, ಬಾವಿ ತೋಡಕ್ಕೆ, ಮನೆ ಕಟ್ಟಕ್ಕೆ  ಹಿಂಗೇ ಜೀವ್ನದುದ್ದುಕ್ಕೂ ಸಾಲದಾಗೆ ಮುಳುಗಿ ಸಾಲದಾಗೆ ಈಜಿದ್ದೆ. ನನ್ನ ಹೆಂಡ್ತಿ ಮಕ್ಳುಗಿಂತ ತಂಗಿ, ತಮ್ಮ, ಅವರಮಕ್ಳು,   ಅವ್ವ ಅಂತ ಅವುರ್ನ ಮುಖ್ಯ ಮಾಡ್ಕಂಡು ಜೀವ್ನ ಕಳುದ್ಬುಟ್ಟೆ.  ಇಷ್ಟೆಲ್ಲಾ ಆದ್ರೂ ನಮ್ಮವ್ವ ಒಂದಿನಾನೂ ಮಗಾ ನಿನ್ನಿಂದ ನಮ್ಮನೆ ಉದ್ದಾರ ಆಯ್ತು ಅಂತ ಒಂದಿನುಕ್ಕೂ ಅನ್ಲಿಲ್ಲ. ಇದ್ಯಾಕೆ ಅಂತ ನಂಗೆ ಯಾವತ್ತೂ ಉತ್ರ ಸಿಗದೇ ಇರೋ ಪ್ರಶ್ನೆ. ಊರಾಗಿರ ತಮ್ಮ, ಅವನೆಂಡ್ತಿ ಕಾಲ್ಗುಣ ಅಂದ್ಬುಟ್ಲು  ನಮ್ಮವ್ವ.  ಯಾರತ್ರ ಹೇಳ್ಕಳ್ಳಿ  ಇದ್ನ.  ‘ಹಿಡಿ ಹಿಡಿದರೆ ಹೆಬ್ಬೆಟ್ಟು ಹೊರಗೆ’ ಅಂತಾರೆ. ಹಂಗೆ ಮನೆಗೆ ಹಿರಿಮಗ ಆಗಿ ಹುಟ್ಟಿದ್ದ ನನ್ನ ಪರಿಸ್ಥಿತಿ. ಇವತ್ತು ಪಾರ್ಕ್ನಾಗೆ ಒಂದೇ ಸಾಲಾಗೆ ಕುಂತಿದ್ದ ಮೂರು ಗೂಬೆ ಜೊತೆಗೆ ಇನ್ನೊಂದ್ ಕೊಂಬೆ ಮ್ಯಾಗಿದ್ದ ಇನ್ನೊಂದ್ ಗೂಬೆ ನೋಡಿ ಅದು ನಾನೇ ಏನೋ ಅನ್ಸ್ತು . ನಮ್ಮವ್ವ ನನ್ನ ತಮ್ಮಂದಿರು ಒಂದ್ಸಾಲು,  ಅಗೋ ಅಷ್ಟು ದೂರದಾಗೆ ನಾನು. ಅದು ನನ್ನ ಮಕ್ಕಳೂ ಆಗಿರ್ಬೋದು. ಮೂವರು ಮಕ್ಳು ಬೆಳೆಯೋ ಹೊತ್ನಾಗೆ , ಓದೋ ಟೈಂನಾಗೆ ಊರು ಊರು ಅಂತ ಇವುರ್ಕಡೆ  ಜಾಸ್ತಿ ಗಮನಾನೇ ಕೊಡ್ಲಿಲ್ಲ.  ಬೆಳೆದು ನಿಂತಮೇಲೆ ಮಕ್ಳು ಮಾಡ್ಬೇಕಿರೋ ಕರ್ತವ್ಯ ಚಾಚೂ ತಪ್ಪದೆ ಮಾಡ್ತಾವ್ರೆ ಹೊರ್ತೂ ನಂಜೊತೆ ಕುಂತು ನಾಕು ಮಾತಾಡಲ್ಲ. ಊರ್ಗೋದ್ರೂ ನಾನು ಒಂಟಿ, ಇಲ್ಲೂ ನಾನು ಒಂಟಿ!   ‘ಹಿಡಿ ಹಿಡಿದರೆ ಹೆಬ್ಬೆಟ್ಟು ಹೊರಗೆ’ ಅಂತಾರೆ. ಹಂಗಾಯ್ತು ಮನೆಗೆ ಹಿರಿಮಗ ಆಗಿ ಹುಟ್ಟಿದ್ದ ನನ್ನ ಪರಿಸ್ಥಿತಿ,  ಆ ಒಂಟಿ ಗೂಬೆ ತರಾನೇ ….